ಎನ್ ಆರ್ ಸಿ ಪಟ್ಟಿ ತಯಾರಿ ತಂಡದಲ್ಲಿ 2015ರಲ್ಲಿ ವಿದೇಶಿಗನೆಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿ !
ಗುವಾಹಾಟಿ, ಆ.17: ಮೂರು ವರ್ಷಗಳ ಹಿಂದೆಯೇ ವಿದೇಶಿಗನೆಂದು ಘೋಷಿಸಲ್ಪಟ್ಟಿದ್ದರೂ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ತಯಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಸ್ಸಾಂ ಸರಕಾರಿ ಶಾಲಾ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ.
ಖೈರುಲ್ ಇಸ್ಲಾಂ ಎಂಬ ಹೆಸರಿನ ಈ ವ್ಯಕ್ತಿಯನ್ನು ತೇಝಪುರ್ ನಲ್ಲಿರುವ ಬಂಧನ ಶಿಬಿರಕ್ಕೆ ಕಳುಹಿಸಲಾಗಿದೆ. ಆತನನ್ನು ಮೊರಿಗಾಂವ್ ಎಂಬಲ್ಲಿಂದ ಬುಧವಾರ ಬಂಧಿಸಲಾಗಿತ್ತು. ಖೈರುಲ್ ಹಾಗೂ ಆತನ ಕುಟುಂಬವನ್ನು 2003ರಲ್ಲಿಯೇ ಶಂಕಿತ ವಿದೇಶೀಯರು ಎಂದು ಗುರುತಿಸಲಾಗಿತ್ತು. ಆತ ಏಳು ವರ್ಷಗಳ ನಂತರ ಸರಕಾರಿ ಶಾಲೆಯ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದ. ಮುಂದೆ 2015ರಲ್ಲಿ ಟ್ರಿಬ್ಯುನಲ್ ಒಂದು ಆತನ ಕುಟುಂಬದ ಎಲ್ಲಾ ಐದು ಮಂದಿ ಸದಸ್ಯರನ್ನು ವಿದೇಶಿಗರೆಂದು ಘೋಷಿಸಿತ್ತು.
ಇದನ್ನು ಪ್ರಶ್ನಿಸಿ ಆತ ಗುವಾಹಟಿ ಹೈಕೋರ್ಟಿನ ಕದ ತಟ್ಟಿದ ನಂತರ ಹೈಕೋರ್ಟ್ ಟ್ರಿಬ್ಯುನಲ್ ಆದೇಶವನ್ನು ತಡೆ ಹಿಡಿದಿತ್ತಾದರೂ ಕಳೆದ ತಿಂಗಳು ಆತ ಎನ್ಆರ್ಸಿ ಕೆಲಸ ನಿರ್ವಹಿಸುತ್ತಿದ್ದಾಗ ಟ್ರಿಬ್ಯುನಲ್ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು.
ಕೂಡಲೇ ಆತನನ್ನು ಎನ್ಆರ್ಸಿ ಸಂಬಂಧಿತ ಕೆಲಸದಿಂದ ಹೊರಗಿಡಲಾಗಿತ್ತೆಂದು ಮೊರಿಗಾಂವ್ ಜಿಲ್ಲಾಧಿಕಾರಿ ಹೆಮೆನ್ ದಾಸ್ ಹೇಳಿದ್ದಾರೆ. ಸದ್ಯ ಆತನ 60 ವರ್ಷದ ತಾಯಿ, ಇಬ್ಬರು ಸೋದರರು ಹಾಗೂ ಒಬ್ಬಳು ಸೋದರಿ ತಲೆಮರೆಸಿಕೊಂಡಿದ್ದಾರೆ.