ಸ್ಯಾರಿಡಾನ್, 327 ಇತರ ಕಾಂಬಿನೇಶನ್ ಔಷಧಿಗಳನ್ನು ನಿಷೇಧಿಸಿದ ಸರಕಾರ
ಹೊಸದಿಲ್ಲಿ, ಸೆ. 13: ಕೇಂದ್ರ ಆರೋಗ್ಯ ಸಚಿವಾಲಯ 328 ಫಿಕ್ಸೆಡ್ ಡೋಸ್ ಕಾಂಬಿನೇಶನ್ (ಎಫ್ಡಿಸಿ) ಔಷಧಿಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ತಕ್ಷಣಕ್ಕೆ ಜಾರಿಯಾಗುವಂತೆ ನಿಷೇಧಿಸಿದ್ದು ಇನ್ನೂ ಆರು ಔಷಧಿಗಳ ಮಾರಾಟದ ಮೇಲೆ ನಿಯಂತ್ರಣ ಹೇರಿದೆ.
ಸರಕಾರದ ಈ ನಿರ್ಧಾರದಿಂದ ಸುಮಾರು 6,000 ಔಷಧಿ ಬ್ರಾಂಡ್ ಗಳು ಬಾಧಿತವಾಗಲಿದ್ದು, ಜನಪ್ರಿಯ ನೋವು ನಿವಾರಕ ಔಷಧಿ ಬ್ರಾಂಡ್ಗಳಾದ ಸ್ಯಾರಿಡಾನ್, ಚರ್ಮದ ಕ್ರೀಮ್ ಪ್ಯಾಂಡರ್ಮ್, ಕಾಂಬಿನೇಶನ್ ಡ್ರಗ್ ಗ್ಲುಕೊನಾರ್ಮ್ ಪಿಜಿ, ಆ್ಯಂಟಿಬಯೋಟಿಕ್ ಲುಪಿಡೈಕ್ಲೋಕ್ಸ್ ಹಾಗೂ ಆ್ಯಂಟಿಬ್ಯಾಕ್ಟೀರಿಯಲ್ ಟ್ಯಾಕ್ಸಿಮ್ ಝೆಡ್ ಸೇರಿವೆ.
ಮಾರ್ಚ್ 10, 2016ರಂದು ಸರಕಾರ 344 ಎಫ್ಡಿಸಿಗಳನ್ನು ನಿಷೇಧಿಸಿ ನಂತರ ಈ ನಿಷೇಧಿತ ಔಷಧಿಗಳ ಪಟ್ಟಿಗೆ ಇನ್ನೂ ಐದು ಔಷಧಿಗಳನ್ನು ಸೇರಿಸಿತ್ತು. ಆದರೆ ಈ ನಿರ್ಧಾರದ ವಿರುದ್ಧ ಔರ್ಷಧಿ ತಯಾರಕರು ವಿವಿಧ ಹೈಕೋರ್ಟುಗಳು ಹಾಗೂ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರು.
ತನ್ನ ಡಿ.15, 2017ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಡ್ರಗ್ಸ್ ಟೆಕ್ನಿಕಲ್ ಎಡ್ವೈಸರಿ ಬೋರ್ಡ್ ಪರಿಶೀಲಿಸಬೇಕೆಂದು ಹೇಳಿತ್ತು. ಅಂತೆಯೇ ಮಂತಳಿ ತನ್ನ ವರದಿಯಲ್ಲಿ ಈ 328 ಎಫ್ಡಿಸಿಗಳು ಜನರ ಜೀವಕ್ಕೆ ಅಪಾಯ ಸೃಷ್ಟಿಸಬಹುದೆಂದು ಹೇಳಿ ಅವುಗಳನ್ನು ನಿಷೇಧಿಸಲು ಶಿಫಾರಸು ಮಾಡಿತ್ತು.
ಮೂಲ ಪಟ್ಟಿಯಲ್ಲಿದ್ದ 344 ಔಷಧಿಗಳ ಪೈಕಿ 15 ಔಷಧಿಗಳನ್ನು ನಿಷೇಧಿಸಲು ಸರಕಾರವು ಮಂಡಳಿಯ ವರದಿಯನ್ನು ಉಪಯೋಗಿಸುವ ಹಾಗಿಲ್ಲ ಹಾಗೂ ಈ ಔಷಧಿಗಳನ್ನು ಭಾರತದಲ್ಲಿ 1988ರಿಂದ ತಯಾರಿಸಲಾಗುತ್ತಿದೆ ಎಂದು ಹೇಳಿತು. ಈ ಔಷಧಿಗಳಲ್ಲಿ ಜನಪ್ರಿಯ ಕಫ್ ಸಿರಪ್ ಗಳು, ನೋವು ನಿವಾರಕಗಳು ಹಾಗೂ ಶೀತ ನೆಗಡಿ ಮಾತ್ರೆಗಳು ಸೇರಿದ್ದು ಇವುಗಳ ವಾರ್ಷಿಕ ಮಾರಾಟ740 ಕೋಟಿ ರೂ. ಅಧಿಕವಾಗಿದೆ.
ಆದರೆ ಸರಕಾರ ಈ ಔಷಧಿಗಳನ್ನು ನಿಷೇಧಿಸಲೇಬೇಕೆಂದಿದ್ದರೆ ಮತ್ತೆ ತನಿಖೆಗೆ ಆದೇಶಿಸಬಹುದು ಎಂದೂ ನ್ಯಾಯಾಲಯ ಹೇಳಿತ್ತು.