ಅಶ್ಲೀಲ ಸಂದೇಶ ರವಾನಿಸಿ ಐಪಿಎಸ್ ಅಧಿಕಾರಿಯ ಪತ್ನಿಯಿಂದ ಚಪ್ಪಲಿಯೇಟು ತಿಂದ ಬಿಜೆಪಿ ಕಾರ್ಯಕರ್ತ
ಸಾಂದರ್ಭಿಕ ಚಿತ್ರ
ರುದ್ರಪುರ(ಉತ್ತರಾಖಂಡ),ಅ.7: ತನಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ಬಿಜೆಪಿ ಕಾರ್ಯಕರ್ತನೋರ್ವನಿಗೆ ಐಪಿಎಸ್ ಅಧಿಕಾರಿಯೋರ್ವರ ಪತ್ನಿ ಚಪ್ಪಲಿಯಿಂದ ಥಳಿಸಿದ ಘಟನೆ ಇಲ್ಲಿ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಿತಾರಗಂಜ್ನ ಈ ಬಿಜೆಪಿ ಕಾರ್ಯಕರ್ತ ಐಪಿಎಸ್ ಅಧಿಕಾರಿಯ ಕುಟುಂಬ ವಾಸವಿರುವ ಸೊಸೈಟಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಆತ ತನ್ನ ಮೊಬೈಲ್ಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾನೆ ಎಂದು ಐಪಿಎಸ್ ಅಧಿಕಾರಿ ಪತ್ನಿ ಸೊಸೈಟಿಯ ಅಧ್ಯಕ್ಷ ದೇವೇಂದ್ರ ಶಾಹಿ ಬಳಿ ದೂರಿಕೊಂಡಿದ್ದರು. ಶಾಹಿ ಮತ್ತು ಇತರರು ಶನಿವಾರ ಆತನ ಫ್ಲಾಟ್ಗೆ ತೆರಳಿ ವಿಚಾರಿಸಿದಾಗ ತಪ್ಪೊಪ್ಪಿಕೊಳ್ಳುವ ಬದಲು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಕೆರಳಿದ ಐಪಿಎಸ್ ಅಧಿಕಾರಿಯ ಪತ್ನಿ ಆತನನ್ನು ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಾದರೂ ಬಿಜೆಪಿ ಕಾಯಕರ್ತ ಬಳಿಕ ತನ್ನ ತಪ್ಪು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿಯ ಪತ್ನಿ ಕ್ಷಮಿಸಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಹಿಳೆಯ ಪತಿ ಉತ್ತರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಘಟನೆಯು ರಾಜ್ಯದ ಆಡಳಿತ ಬಿಜೆಪಿಯಲ್ಲಿ ಮುಜುಗರವನ್ನುಂಟು ಮಾಡಿದೆ.
ಈ ಘಟನೆಯು ಪಕ್ಷದ ವರ್ಚಸ್ಸಿಗೆ ಚ್ಯುತಿಯುಂಟು ಮಾಡಿದೆ. ಪಕ್ಷವು ಘಟನೆಯ ಬಗ್ಗೆ ಗಮನ ಹರಿಸಬೇಕು ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಬಿಜೆಪಿ ಶಾಸಕ ರಾಮಕುಮಾರ ಹೇಳಿದರು.
ಆರೋಪಿಯ ವಿರುದ್ಧ ಪಕ್ಷವು ಸೂಕ್ತಕ್ರಮವನ್ನು ಕೈಗೊಳ್ಳಲಿದೆ ಎಂದು ಉತ್ತಮ ಸಿಂಗ್ ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವ ಅರೋರಾ ತಿಳಿಸಿದ್ದಾರೆ.