ಫ್ರಾನ್ಸ್ನಲ್ಲಿ ಪತ್ರಕರ್ತರ ಸ್ಮಾರಕದಲ್ಲಿ ಗೌರಿ ಲಂಕೇಶ್ ಹೆಸರು
ಬೆಂಗಳೂರು,ಅ.13: ಕಳೆದ ವರ್ಷ ದುಷ್ಕರ್ಮಿಗಳಿಂದ ತನ್ನ ಮನೆಯ ಮುಂದೆಯೇ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹೆಸರನ್ನು ಪ್ರಾನ್ಸ್ನಲ್ಲಿರುವ ಆಧಾರಸ್ತಂಭದಲ್ಲಿ ಕೆತ್ತುವ ಮೂಲಕ ಗೌರವ ಸೂಚಿಸಲಾಗಿದೆ.
ಕರ್ತವ್ಯದಲ್ಲಿದ್ದ ವೇಳೆ ಹತ್ಯೆಗೈಯ್ಯಲ್ಪಟ್ಟ ಪತ್ರಕರ್ತರ ಸ್ಮಾರಕದಲ್ಲಿ ಗುರುವಾರ ಇತರ ಮೃತ ಪತ್ರಕರ್ತರ ಜೊತೆ ಗೌರಿ ಲಂಕೇಶ್ ಅವರ ಹೆಸರನ್ನು ಕೆತ್ತಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಫ್ರಾನ್ಸ್ನ ಬಯಾಕ್ಸ್ ನಗರದಲ್ಲಿ ನಡೆದ ‘ಬಯಾಕ್ಸ್-ಕಾಲ್ವಡೋಸ್’ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಪುರಸ್ಕೃತರು ಮತ್ತು ಉಪಸ್ಥಿತರು ಗೌರಿ ಲಂಕೇಶ್ಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಯುದ್ಧದ ಕುರಿತು ವರದಿ ಮಾಡುವ ಪತ್ರಕರ್ತರಿಗೆ ನೀಡಲಾಗುವ ಬಯಾಕ್ಸ್-ಕಾಲ್ವಡೋಸ್ ಪ್ರಶಸ್ತಿಯನ್ನು 1994ರಲ್ಲಿ ಬಯಾಕ್ಸ್ ನಗರ ಮತ್ತು ಕಾಲ್ವಡೋಸ್ನ ಪ್ರಧಾನ ಮಂಡಳಿ ಸ್ಥಾಪಿಸಿ ಪ್ರತಿವರ್ಷ ನೀಡುತ್ತಾ ಬಂದಿದೆ.
ಸಮಾರಂಭದಲ್ಲಿ ಗೌರಿ ಸಹೋದರಿ ಕವಿತಾ ಲಂಕೇಶ್ ಮತ್ತು ಸೊಸೆ ಇಶಾ ಹಾಜರಿದ್ದರು. ಈ ವೇಳೆ ಮಾತನಾಡಿದ ಕವಿತಾ ಲಂಕೇಶ್, “ನನ್ನ ತಂದೆ ಪಿ.ಲಂಕೇಶ್ 35 ವರ್ಷಗಳ ಕಾಲ ಯಾವುದೇ ಜಾಹೀರಾತು ಇಲ್ಲದೆ ಪತ್ರಿಕೆಯನ್ನು ನಡೆಸಿದ್ದರು. ಅವರಿಂದಲೇ ಗೌರಿಗೆ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಮೌಲ್ಯಗಳು ಕರಗತವಾಗಿವೆ. ಗೌರಿ ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ದಲಿತರು ಮತ್ತು ಸಮಾಜದಿಂದ ಬಹಿಷ್ಕೃತ ಗುಂಪುಗಳ ಪರವಾಗಿ ನಿಲ್ಲುತ್ತಿದ್ದರು” ಎಂದು ತಿಳಿಸಿದ್ದಾರೆ.