ತನ್ನ ವಿರುದ್ಧದ ಆರೋಪ ಆಧಾರ ರಹಿತ: ವೈರಮುತ್ತು
ಚೆನ್ನೈ, ಅ. 14: ತನ್ನ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಸುಳ್ಳು ಎಂದು ತಮಿಳಿನ ಹಿರಿಯ ಗೀತ ರಚನೆಕಾರ ವೈರಮುತ್ತು ರವಿವಾರ ಹೇಳಿದ್ದಾರೆ. ಅಲ್ಲದೆ ಆರೋಪಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ವೈರಮುತ್ತು ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹಾಡುಗಾರ್ತಿ ಚಿನ್ಮಯಿ ಶ್ರೀಪಾದ ಸಹಿತ ಹಲವು ಮಹಿಳೆಯರು ಆರೋಪಿಸಿದ್ದರು.
ತನ್ನ ಕಥೆಯಲ್ಲದೆ ಚಿನ್ಮಯಿ ಶ್ರೀಪಾದ ಅವರು ವೈರಮುತ್ತು ಅವರ ಮೂರು ಲೈಂಗಿಕ ಕಿರುಕುಳದ ಘಟನೆಯನ್ನು ದೃಢೀಕರಿಸಿದ್ದರು ಹಾಗೂ ಟ್ವಿಟರ್ನಲ್ಲಿ ಸಂತ್ರಸ್ತೆಯರ ಹೆಸರನ್ನು ಟ್ವೀಟ್ ಮಾಡಿದ್ದರು.
ಟ್ವಿಟರ್ನಲ್ಲಿ ಪುಟ್ಟ ವೀಡಿಯೊ ಬಿಡುಗಡೆ ಮಾಡಿರುವ ಚಿನ್ಮಯಿ, ಆಕ್ಷೇಪಿಸಲಾಗದ ದಾಖಲೆಗಳನ್ನು ಸಂಗ್ರಹಿಸಿದ್ದೇನೆ ಹಾಗೂ ಅವರನ್ನು ನ್ಯಾಯಾಲಯದಲ್ಲಿ ಎದುರಿಸಲು ಸಿದ್ಧವಿರುವುದಾಗಿ ತಿಳಿಸಿದ್ದರು.
ತನ್ನ ವಿರುದ್ಧ ಮಾಡಲಾದ ಆರೋಪಗಳೆಲ್ಲ ಸಂಪೂರ್ಣ ಸುಳ್ಳು. ಒಂದು ವೇಳೆ ಅದು ಸತ್ಯವಾದರೆ, ಸಂಬಂಧಿತರು ತನ್ನ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿದೆ. ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.