ಕೊಲ್ಕತ್ತಾ ಮೂಲದ ಸಂಸ್ಥೆಗೆ 1.14 ಕೋಟಿ ರೂ. ನೀಡಿದ್ದ ಸಿಬಿಐ ಹಂಗಾಮಿ ಮುಖ್ಯಸ್ಥ ನಾಗೇಶ್ವರ ರಾವ್ ಪತ್ನಿ!
ಕೊಲ್ಕತ್ತಾ, ಅ.29: ಸಿಬಿಐ ಹಂಗಾಮಿ ಮುಖ್ಯಸ್ಥರಾಗಿರುವ ಎಂ. ನಾಗೇಶ್ವರ ರಾವ್ ಅವರ ಪತ್ನಿ ಎಂ. ಸಂಧ್ಯಾ ಹಾಗೂ ಕೊಲ್ಕತ್ತಾ ಮೂಲದ ಟ್ರೇಡಿಂಗ್ ಸಂಸ್ಥೆ ಏಂಜೆಲಾ ಮರ್ಕಂಟೈಲ್ಸ್ ಪ್ರೈವೇಟ್ ಲಿಮಿಟೆಡ್ (ಎಎಂಪಿಎಲ್) ನಡುವೆ 2011ರಿಂದ 2014ರ ತನಕ ಹಣಕಾಸಿನ ವ್ಯವಹಾರವಿತ್ತು ಎಂದು ರಿಜಿಸ್ಟ್ರಾರ್ ಆಫ್ ಕಂಪೆನೀಸ್ ದಾಖಲೆಗಳಿಂದ ತಿಳಿದು ಬಂದಿದೆಯೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ದಾಖಲೆಗಳ ಪ್ರಕಾರ ರಾವ್ ಅವರ ಪತ್ನಿ ಎಎಂಪಿಎಲ್ನಿಂದ ಮಾರ್ಚ್ 2011ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ರೂ 25 ಲಕ್ಷ ಸಾಲ ಪಡೆದಿದ್ದರು. ಆದರೆ 2012 ಹಾಗೂ 2014 ಮಾರ್ಚ್ಗೆ ಅಂತ್ಯಗೊಂಡ ವಿತ್ತೀಯ ವರ್ಷಗಳಲ್ಲಿ ಸಂಧ್ಯಾ ಅವರು ಎಎಂಪಿಎಲ್ ಗೆ ಒಟ್ಟು ರೂ 1.14 ಕೋಟಿ ಸಾಲವನ್ನು ಮೂರು ಕಂತುಗಳಲ್ಲಿ ರೂ 35.56 ಲಕ್ಷ (2012), ರೂ 38.27 ಲಕ್ಷ (2013) ಹಾಗೂ ರೂ 40.29 ಲಕ್ಷ (2014) ನೀಡಿದ್ದರು.
ರಿಜಿಸ್ಟ್ರಾರ್ ಆಫ್ ಕಂಪೆನೀಸ್ ದಾಖಲೆಗಳ ಪ್ರಕಾರ ಪ್ರವೀಣ್ ಅಗರ್ವಾಲ್ ಎಂಬವರು ಎಎಂಪಿಎಲ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಕೊಲ್ಕತ್ತಾ ಮೂಲದ ಪ್ರವೀಣ್ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಾ ``ಅವರು (ಸಂಧ್ಯಾ) ನಮ್ಮ ಕುಟುಂಬ ಸ್ನೇಹಿತ (ನಾಗೇಶ್ವರ ರಾವ್) ಅವರ ಪತ್ನಿಯಾಗಿದ್ದಾರೆ. ರಾವ್ ಅವರು ಒಡಿಶಾದಲ್ಲಿ ಅಧಿಕಾರಿಯಾಗಿದ್ದಾಗಿನಿಂದ ನನಗೆ ಅವರು ಗೊತ್ತು. ಅವರು ನಮ್ಮ ಕುಟುಂಬವಿದ್ದ ಹಾಗೆ. ನಮ್ಮ ಕುಟುಂಬ ಸ್ನೇಹಿತರಿಗೆ ಸಾಲ ನೀಡುವುದು ಅಥವಾ ಅವರಿಂದ ಹೂಡಿಕೆ ಪಡೆಯುವುದರಲ್ಲಿ ತಪ್ಪೇನಿದೆ?'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಿಬಿಐ ವಕ್ತಾರರೊಬ್ಬರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಎಎಂಪಿಎಲ್ ಸಂಸ್ಥೆಯ ರಿಜಿಸ್ಟರ್ಡ್ ಕಚೇರಿ ಸಿಎ 39, ಸಾಲ್ಟ್ ಲೇಕ್ ಎಂಬಲ್ಲಿದೆ ಆದರೆ ಅಲ್ಲಿ ಅಗರ್ವಾಲ್ ಅವರ ನಿವಾಸವಿದೆ ಆದರೆ ಕಚೇರಿಯಿಲ್ಲ ಎಂದು ತಿಳಿದು ಬಂದಿದೆ. ಆದರೆ ಅವರ ಕುಟುಂಬ ಅಲ್ಲಿ ವಾಸಿಸುತ್ತಿಲ್ಲ.