ಕಾಶ್ಮೀರ: ಪ್ರತ್ಯೇಕ ಎನ್ಕೌಂಟರ್ನಲ್ಲಿ 3 ಉಗ್ರರ ಹತ್ಯೆ, ಯೋಧ ಸಾವು
ಶ್ರೀನಗರ, ನ.27: ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಓರ್ವ ಯೋಧ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕುಲ್ಗಾಂವ್ ಜಿಲ್ಲೆಯ ರೆಡ್ವಾನಿ ಪ್ರದೇಶದ ಮನೆಯೊಂದರಲ್ಲಿ ಕೆಲವು ಉಗ್ರರು ಅವಿತಿದ್ದಾರೆ ಎಂಬ ಮಾಹಿತಿಯನ್ವಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಮೃತಪಟ್ಟಿದ್ದಾರೆ. ಪುಲ್ವಾಮ ಜಿಲ್ಲೆಯ ಟ್ರಾಲ್ನ ಹಫೂ ಎಂಬಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಉಗ್ರ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ನವೆಂಬರ್ 15ರಿಂದ ಕಾಶ್ಮೀರದಲ್ಲಿ 19 ಉಗ್ರರು, 7 ನಾಗರೀಕರು ಹಾಗೂ ಮೂವರು ಭದ್ರತಾ ಪಡೆ ಸಿಬ್ಬಂದಿಗಳ ಸಹಿತ ಕನಿಷ್ಟ 29 ಮಂದಿ ಹತರಾಗಿದ್ದಾರೆ.
Next Story