ಮತ್ತಷ್ಟು ಕಠಿಣವಾಗಲಿದೆ ಪೊಕ್ಸೊ ಕಾಯ್ದೆ
ಹೊಸದಿಲ್ಲಿ, ಡಿ.7: ಹದಿನೆಂಟು ವರ್ಷಕ್ಕಿಂತ ಕೆಳಗಿನ ಹೆಣ್ಣುಮಕ್ಕಳನ್ನು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಲುವಾಗಿ ಶೀಘ್ರ ಲೈಂಗಿಕ ಪ್ರೌಢತೆ ಬೆಳೆಯುವಂತೆ ಮಾಡಲು ರಾಸಾಯನಿಕ ವಸ್ತು ಅಥವಾ ಹಾರ್ಮೋನ್ ಚುಚ್ಚುಮದ್ದು ನೀಡುವುದನ್ನು ಪೊಕ್ಸೊ ಕಾಯ್ದೆಯಡಿ ಅಪರಾಧ ಕೃತ್ಯವಾಗಿ ಪರಿಗಣಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ- 2012ರ ಸೆಕ್ಷನ್ 9ರಡಿ ಇದನ್ನು ಅಪರಾಧ ಕೃತ್ಯವಾಗಿ ಪರಿಗಣಿಸುವ ಪ್ರಸ್ತಾವವನ್ನು ಸಚಿವಾಲಯ ಮುಂದಿಟ್ಟಿದೆ. ಜತೆಗೆ ಮಕ್ಕಳನ್ನು ಒಳಗೊಂಡ ಅಶ್ಲೀಲ ಸಾಮಗ್ರಿಗಳನ್ನು ಹೊಂದಿದ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸಚಿವಾಲಯ ಪ್ರಸ್ತಾವ ಸಲ್ಲಿಸಿದೆ. ಇಂಥ ಅಶ್ಲೀಲ ಸಾಮಗ್ರಿಗಳನ್ನು ಸಮಾಜ ಮಾಧ್ಯಮ ಮತ್ತು ವಾಟ್ಸ್ಆ್ಯಪ್ಗಳಲ್ಲಿ ಪ್ರಸಾರ ಮಾಡುವುದನ್ನೂ ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲು ಉದ್ದೇಶಿಸಲಾಗಿದೆ.
ಈ ಅಪರಾಧಗಳಿಗೆ ಐದು ವರ್ಷಕ್ಕೆ ಕಡಿಮೆ ಇಲ್ಲದಂತೆ, ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಸಚಿವಾಲಯ ಮುಂದಾಗಿದೆ. ಪೊಕ್ಸೊ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಇದೀಗ ಕಾನೂನು ಸಚಿವಾಲಯದ ಮುಂದಿದ್ದು, ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಅಂತಿಮ ಪ್ರಸ್ತಾವವನ್ನು ಕೇಂದ್ರ ಸಂಪುಟಕ್ಕೆ ಸಲ್ಲಿಸಲು ಸಚಿವಾಲಯ ಸಿದ್ಧತೆ ಮಾಡಿಕೊಂಡಿದೆ.
ಹನ್ನೆರಡು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸುವ ಅಪರಾಧ ಕಾನೂನು(ತಿದ್ದುಪಡಿ) ಕಾಯ್ದೆ- 2018ಕ್ಕೆ ಕೂಡಾ ತಿದ್ದುಪಡಿ ತಂದು, ಗಂಡುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದನ್ನೂ ಕಾಯ್ದೆ ವ್ಯಾಪ್ತಿಗೆ ತರಲು ಕೂಡಾ ಉದ್ದೇಶಿಸಲಾಗಿದೆ.