ತೆರಿಗೆ ಪಾವತಿ ಬಾಕಿ: ನಟ ಮಹೇಶ್ ಬಾಬು ಬ್ಯಾಂಕ್ ಖಾತೆ ಸ್ತಂಭನ
ಹೈದರಾಬಾದ್, ಡಿ. 28: ಸೇವಾ ತೆರಿಗೆ ಪಾವತಿ ಬಾಕಿ ಇರುವುದರಿಂದ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿದೆ ಎಂದು ಜಿಎಸ್ಟಿ ಇಲಾಖೆ ಗುರುವಾರ ಹೇಳಿದೆ. ಬ್ರಾಂಡ್ ರಾಯಭಾರಿ ಹಾಗೂ ಉತ್ಪನ್ನಗಳ ಪ್ರಚಾರದ ಜಾಹೀರಾತಿನಲ್ಲಿ ನಟಿಸಿರುವ ಮಹೇಶ್ ಬಾಬು 2007- 08ರ ಸೇವಾ ತೆರಿಗೆಯನ್ನು ಪಾವತಿಸಿಲ್ಲ ಎಂದು ಹೈದರಾಬಾದ್ನ ಜಿಎಸ್ಟಿ ಆಯುಕ್ತರು ಹೇಳಿದ್ದಾರೆ.
ಅವರು ಒಟ್ಟು ತೆರಿಗೆ 18.5 ಲಕ್ಷ ಪಾವತಿಸಲು ಬಾಕಿ ಇದೆ. ತೆರಿಗೆ, ಬಡ್ಡಿ ಹಾಗೂ ದಂಡ ಸೇರಿದಂತೆ 73.5 ಲಕ್ಷ ರೂ. ಮೊತ್ತಕ್ಕಾಗಿ ಮಹೇಶ್ ಬಾಬು ಅವರ ಆ್ಯಕ್ಸಿಸ್ ಹಾಗೂ ಐಸಿಸಿಐ ಬ್ಯಾಂಕ್ನಲ್ಲಿರುವ ಖಾತೆಯನ್ನು ಜಿಎಸ್ಟಿ ಇಲಾಖೆ ಸ್ತಂಭನಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಜಿಎಸ್ಟಿಯ ಹಿರಿಯ ಅಧಿಕಾರಿ, ಈ ವಿಷಯದ ಕುರಿತು ಯಾವುದೇ ಸಂಬಂಧಿತ ಪ್ರಾಧಿಕಾರದಿಂದ ಕಾಲಾವಕಾಶ ಪಡೆಯುವಲ್ಲಿ ಮಹೇಶ್ ಬಾಬು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
Next Story