ಹಾಸ್ಟೆಲ್ ನಲ್ಲಿ ಐಐಟಿ ವಿದ್ಯಾರ್ಥಿನಿ ಆತ್ಮಹತ್ಯೆ
ಚೆನ್ನೈ, ಜ.2: ಐಐಟಿ ಮದ್ರಾಸ್ನ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ಮಹಿಳೆಯೊಬ್ಬರು ತನ್ನ ಹಾಸ್ಟೆಲ್ ರೂಂನಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮದ್ರಾಸ್ ಐಐಟಿಗೆ 2017ರಲ್ಲಿ ಸೇರ್ಪಡೆಗೊಂಡಿದ್ದ ಜಾರ್ಖಂಡ್ ಮೂಲದ ರಂಜನಾ ಕುಮಾರಿ ಲೋಹಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು, ಮಂಗಳವಾರ ಐಐಟಿ ಕ್ಯಾಂಪಸ್ನಲ್ಲಿರುವ ಸಾಬರ್ಮತಿ ಹಾಸ್ಟೆಲ್ನ ತನ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಂಜನಾ ಕಳೆದ ಎರಡು ದಿನದಿಂದ ತನ್ನ ಕೋಣೆಯಿಂದ ಹೊರಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಈಕೆಯನ್ನು ಸಂಪರ್ಕಿಸಲು ಯತ್ನಿಸಿ ವಿಫಲರಾದ ಪೋಷಕರು ಬಳಿಕ ಹಾಸ್ಟೆಲ್ನ ಅಧಿಕಾರಿಗಳಿಗೆ ಕರೆ ಮಾಡಿದ್ದರು. ಅವರು ತಕ್ಷಣ ರಂಜನಾ ವಾಸ್ತವ್ಯವಿದ್ದ ಕೋಣೆಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story