ಶ್ರೀಲಂಕಾ ಮಹಿಳೆ ಶಬರಿಮಲೆ ದೇವಳದ ಒಳ ಪ್ರವೇಶಿಸಿದ್ದಾರೆ
ಸಿಸಿಟಿವಿ ದೃಶ್ಯ ಬಿಡುಗಡೆಗೊಳಿಸಿದ ಪೊಲೀಸರು
ತಿರುವನಂತಪುರ, ಜ. 3: ಶ್ರೀಲಂಕಾದ ಪ್ರಜೆ 47ರ ಹರೆಯದ ಶಶಿಕಲಾ ಶುಕ್ರವಾರ ರಾತ್ರಿ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿರುವುದನ್ನು ದೃಢಪಡಿಸಿರುವ ಪೊಲೀಸರು, ಮಹಿಳೆ ಸನ್ನಿದಾನಕ್ಕೆ ನಡೆದುಕೊಂಡು ಹೋಗುತ್ತಿರುವ ದೃಶ್ಯವುಳ್ಳ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆಗೊಳಿಸಿದ್ದಾರೆ.
ದೇವಾಲಯದಲ್ಲಿ ಅಳವಡಿಸಲಾಗಿದ್ದ ಪೊಲೀಸ್ ಕಣ್ಗಾವಲು ಕ್ಯಾಮರಾ ಈ ದೃಶ್ಯವನ್ನು ಸೆರೆ ಹಿಡಿದಿದೆ. ಈ ದೃಶ್ಯಾವಳಿಯಲ್ಲಿ ಮಹಿಳೆ ದರ್ಶನ ಮುಗಿಸಿ ವ್ಯಕ್ತಿಯೋರ್ವನೊಂದಿಗೆ ಹೊರಬರುತ್ತಿರುವುದು ದಾಖಲಾಗಿದೆ. ಅವರ ತಲೆಯಲ್ಲಿ ಇರುಮುಡಿಕಟ್ಟು ಇದೆ. ಶ್ರೀಲಂಕಾದ ಕೆರೈತೀವು ನಾಗರಿಕಳಾದ ಮಹಿಳೆ ಸನ್ನಿಧಾನಕ್ಕೆ ರಾತ್ರಿ 40.45ಕ್ಕೆ ಆಗಮಿಸಿರುವುದು ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಪಂಬಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ, “ಪೊಲೀಸರು ನನ್ನನ್ನು ದೇವಾಲಯದ ಹದಿನೆಂಟು ಮೆಟ್ಟಿಲಿನ ಸಮೀಪದಿಂದ ಹಿಂದೆ ಕಳುಹಿಸಿದರು. ಇದರಿಂದ ನನಗೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದರು. ‘‘ನಾನೂ ಭಕ್ತೆ. 48 ದಿನಗಳ ವೃತ ಆಚರಿಸಿ ಇಲ್ಲಿಗೆ ಆಗಮಿಸಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ’’ ಎಂದು ಅವರು ಹೇಳಿದ್ದರು. ಭೀತಿಯ ಹಿನ್ನೆಲೆಯಲ್ಲಿ ದೇವಾಲಯ ಪ್ರವೇಶಿಸಿರುವು ದನ್ನು ಅವರು ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘‘ಕೆಲವು ಪತ್ರಕರ್ತರು ಹಾಗೂ ಶಂಕಿತ ಪ್ರತಿಭಟನೆ ಕಾರರು ಅವರಿಗೆ ಹಾಗೂ ಅವರ ಪತಿಗೆ ಬೆದರಿಕೆ ಒಡ್ಡಿದ್ದರು. ಇತರ ಕೆಲವು ದೇವಾಲಯಗಳನ್ನು ಭೇಟಿಯಾಗಲಿರುವು ದರಿಂದ ಶಬರಿಮಲೆಯಿಂದ ಸುರಕ್ಷಿತವಾಗಿ ಹೊರಗೆ ಹೋಗುವುದಾಗಿ ಅವರು ನಮಗೆ ತಿಳಿಸಿದ್ದರು.’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.