ಮುದ್ರಣ ಮಾಧ್ಯಮಗಳ ಜಾಹೀರಾತು ದರಗಳನ್ನು ಶೇ.25ರಷ್ಟು ಹೆಚ್ಚಿಸಿದ ಸಚಿವಾಲಯ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಈ ಕ್ರಮ
ಹೊಸದಿಲ್ಲಿ, ಜ.9: ಸಣ್ಣ ಮತ್ತು ಮಧ್ಯಮ ಗಾತ್ರದ ದೈನಿಕಗಳಿಗೆ ಸಿಹಿ ಸುದ್ದಿಯೆಂಬಂತೆ, ಮುಂದಿನ ಲೋಕಸಭಾ ಚುನಾವಣೆಗಳಿಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿವೆಯೆನ್ನುವಾಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮುದ್ರಣ ಮಾಧ್ಯಮಗಳಲ್ಲಿನ ಜಾಹೀರಾತು ದರಗಳಲ್ಲಿ ಶೇ 25ರಷ್ಟು ಏರಿಕೆ ಘೋಷಿಸಿದೆ.
ಬ್ಯುರೋ ಆಫ್ ಔಟ್ರೀಚ್ ಕಮ್ಯುನಿಕೇಶನ್ಸ್ ನಿಗದಿಪಡಿಸಿರುವ ಈಗಿನ ದರ ಪಟ್ಟಿಯಲ್ಲಿರುವ ದರಕ್ಕಿಂತ ಹೆಚ್ಚುವರಿ ಶೇ.25ರಷ್ಟು ಜಾಹೀರಾತು ದರಗಳು ಮಾಧ್ಯಮಗಳಿಗೆ ಲಭ್ಯವಾಗಲಿವೆ. ಈ ಹೊಸ ದರಗಳು ಮುಂದಿನ ಮೂರು ವರ್ಷ ಜಾರಿಯಲ್ಲಿರುತ್ತವೆ.
ಕಳೆದ ಬಾರಿ ಜಾಹೀರಾತು ದರ ಪರಿಷ್ಕರಣೆ 2013ರಲ್ಲಿ ನಡೆದಿತ್ತು. ಆಗ 2010ರಲ್ಲಿ ನಿಗದಿ ಪಡಿಸಲಾದ ದರಗಳಿಗಿಂತ ಶೇ.19ರಷ್ಟು ಹೆಚ್ಚುವರಿ ದರ ನಿಗದಿ ಪಡಿಸಲಾಗಿತ್ತು. ಈಗಿನ ದರ ಹೆಚ್ಚಳದಿಂದ ಮುಖ್ಯವಾಗಿ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷಾ ಮುದ್ರಣ ಮಾಧ್ಯಮಗಳಿಗೆ ಪ್ರಯೋಜನವಾಗಲಿದೆ.
ಸಚಿವಾಲಯ ರಚಿಸಿದ್ದ 8ನೇ ರೇಟ್ ಸ್ಟ್ರಕ್ಚರ್ ಕಮಿಟಿ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಸಚಿವಾಲಯ ತಿಳಿಸಿದೆ. ಮುದ್ರಣ ಕಾಗದಗಳ ಬೆಲೆಗಳಲ್ಲಿ ಹೆಚ್ಚಳ ಮತ್ತಿತರ ಅಂಶಗಳನ್ನು ಪರಿಗಣಿಸಿ ಶೇ 25ರಷ್ಟು ದರಗಳಲ್ಲಿ ಏರಿಕೆ ನಿಗದಿ ಪಡಿಸಲಾಗಿದೆ ಎಂದು ತಿಳಿಸಲಾಗಿದೆ.