ಪನೀರ್ ಖಾದ್ಯದಲ್ಲಿ ಪ್ಲಾಸ್ಟಿಕ್ ಫೈಬರ್: ಕ್ಷಮೆ ಯಾಚಿಸಿದ ಝೊಮ್ಯಾಟೊ
ಔರಂಗಾಬಾದ್ (ಮಹಾರಾಷ್ಟ್ರ), ಜ. 20: ಔರಂಗಾಬಾದ್ನ ನಿವಾಸಿಯೊಬ್ಬರ ಆದೇಶದಂತೆ ಆಹಾರ ಸರಬರಾಜು ಕಂಪೆನಿ ‘ಝೊಮ್ಯಾಟೊ’ ರೆಸ್ಟೋರೆಂಟ್ ಒಂದರಿಂದ ಪೂರೈಸಿದ ಪನೀರ್ ಖಾದ್ಯಗಳಲ್ಲಿ ಪ್ಲಾಸ್ಟಿಕ್ ಫೈಬರ್ ತುಂಡು ಕಂಡು ಬಂದಿದ್ದು, ಈ ಬಗ್ಗೆ ‘ಝೊಮ್ಯಾಟೊ’ ಕ್ಷಮೆ ಯಾಚಿಸಿದೆ.
‘‘ನನ್ನ ಮಕ್ಕಳಿಗಾಗಿ ಪನೀರ್ ಚಿಲ್ಲಿ, ಪನೀರ್ ಮಸಾಲೆಯನ್ನು ನಾನು ಆದೇಶಿಸಿದ್ದೆ. ನಾವು ತಿನ್ನಲು ಆರಂಭಿಸಿದಾಗ, ನನ್ನ ಪುತ್ರಿ ಪನೀರ್ ತುಂಬಾ ಗಟ್ಟಿ ಇದೆ ಎಂದು ಹೇಳಿದಳು. ಅದನ್ನು ಜಗಿಯುವಾಗ ಆಕೆಯ ಹಲ್ಲುಗಳಿಗೆ ಹಾನಿ ಆಯಿತು. ನಾನು ಅದರ ರುಚಿ ನೋಡಿದಾಗ, ಅದು ಫೈಬರ್ ಆಗಿತ್ತು’’ ಎಂದು ಸಚಿನ್ ಜಾಮ್ದಾರೆ ಹೇಳಿದ್ದಾರೆ. ‘‘ನನಗೆ ನಿಜವಾಗಿಯೂ ನನ್ನ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾಯಿತು. ನಾನು ರೆಸ್ಟೋರೆಂಟ್ನ ಮಾಲಕರೊಂದಿಗೆ ಮಾತನಾಡಲು ತೆರಳಿದೆ. ಅವರು ನನಗೆ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ. ಝೊಮ್ಯಾಟೊ ಹುಡುಗೆ ಏನೋ ಮಾಡಿರಬೇಕು ಎಂದರು. ನಾನು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದೆ. ಕೇವಲ 150 ರೂಪಾಯಿಗಾಗಿ ಈ ಜನರು ಹೇಗೆ ಜನರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ನಾನು ದೇಶದ ಜನತೆಗೆ ಹೇಳಲು ಬಯಸುತ್ತೇನೆ’’ ಎಂದು ಜಾಮ್ದಾರೆ ತಿಳಿಸಿದ್ದಾರೆ.
ಈ ನಡುವೆ ಹೇಳಿಕ ಬಿಡುಗಡೆ ಮಾಡಿದೆ ಝೊಮ್ಯಾಟೊ, ಘಟನೆ ಬಗ್ಗೆ ಕ್ಷಮೆ ಕೋರಿದೆ. ಅಲ್ಲದೆ, ಆಹಾರ ಖರೀದಿಸಿದ ರೆಸ್ಟೋರೆಂಟ್ ಅನ್ನು ನಮ್ಮ ವೇದಿಕೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ.