ರೈಲ್ವೆಯಲ್ಲಿ 2.50 ಲಕ್ಷ ಹೆಚ್ಚುವರಿ ಹುದ್ದೆಗಳು ಪ್ರಕಟ
ಹೊಸದಿಲ್ಲಿ, ಜ.23: ಭಾರತೀಯ ರೈಲ್ವೆಯು ಹೆಚ್ಚುವರಿಯಾಗಿ 2.25 ಲಕ್ಷದಿಂದ 2.50 ಲಕ್ಷ ಹುದ್ದೆಗಳನ್ನು ಪ್ರಕಟಿಸಿದ್ದು,ಮುಂದಿನ ಎರಡು ವರ್ಷಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಬುಧವಾರ ತಿಳಿಸಿದೆ. ಈ ಹುದ್ದೆಗಳು ರೈಲ್ವೆ ನೇಮಕಾತಿ ಮಂಡಳಿಯ ಉದ್ಯೋಗ ಅಭಿಯಾನದಡಿ ಹಾಲಿ ನೇಮಕಾತಿ ನಡೆಯುತ್ತಿರುವ ಹುದ್ದೆಗಳಿಗೆ ಅತಿರಿಕ್ತವಾಗಿವೆ.
2.25-2.50 ಲಕ್ಷ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ,1.50 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಹಾಲಿ ಜಾರಿಯಲ್ಲಿದೆ. ಹೀಗೆ ರೈಲ್ವೆಯು ಒಟ್ಟು ನಾಲ್ಕು ಲಕ್ಷ ಉದ್ಯೋಗಗಳನ್ನು ಒದಗಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ತಿಳಿಸಿದರು.
ಸದ್ಯ ಭಾರತೀಯ ರೈಲ್ವ್ವೆಯು 15.06 ಲಕ್ಷ ಸಿಬ್ಬಂದಿಗಳ ಮಂಜೂರಾತಿಯನ್ನು ಹೊಂದಿದ್ದು,ಈ ಪೈಕಿ 2.82 ಲಕ್ಷ ಹುದ್ದೆಗಳು ಖಾಲಿಯಿದ್ದವು. ಈ ಪೈಕಿ 1.51 ಲಕ್ಷ ಹುದ್ದೆಗಳನ್ನು ಕಳೆದ ವರ್ಷ ಭರ್ತಿ ಮಾಡಲಾಗಿದ್ದು,1.31 ಲಕ್ಷ ಹುದ್ದೆಗಳು ಖಾಲಿಯಿವೆ. 2019ಮತ್ತು 2020ರಲ್ಲಿ ಅನುಕ್ರಮವಾಗಿ 53,000 ಮತ್ತು 46,000 ಉದ್ಯೋಗಿಗಳು ನಿವೃತ್ತರಾಗುವುದರಿಂದ ಸುಮಾರು 99,000 ಹುದ್ದೆಗಳು ತೆರವಾಗಲಿವೆ ಎಂದ ಗೋಯಲ್,ಮುಂದಿನ ಎರಡು ವರ್ಷಗಳಲ್ಲಿ 2.3 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಮದು ತಿಳಿಸಿದರು.
1.31 ಲಕ್ಷ ಹುದ್ದೆಗಳಿಗೆ ಹೊಸದಾಗಿ ನೇಮಕಾತಿಯ ಮೊದಲ ಹಂತ ಫೆಬ್ರವರಿ-ಮಾರ್ಚ್ನಲ್ಲಿ ಆರಂಭವಾಗಿ,2020 ಎಪ್ರಿಲ್-ಮೇನಲ್ಲಿ ಪೂರ್ಣಗೊಳ್ಳಲಿದೆ. ಸರಕಾರದ ಮೀಸಲಾತಿ ನೀತಿಯಂತೆ ಈ ಹಂತದಲ್ಲಿ ಸುಮಾರು 19,715,9,857 ಮತ್ತು 35,485 ಹುದ್ದೆಗಳು ಪರಿಶಿಷ್ಟ ಜಾತಿಗಳು,ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾಗಿರುತ್ತವೆ ಎಂದರು. ಸಂಸತ್ತು ಇತ್ತೀಚಿಗೆ ಅಂಗೀಕರಿಸಿರುವ 103ನೇ ಸಂವಿಧಾನ ತಿದ್ದುಪಡಿಯಂತೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸುಮಾರು 13,100 ಹುದೆಗಳನ್ನು ಮೀಸಲಿರಿಸಲಾಗುವುದು ಎಂದರು.
ಸುಮಾರು 99,000 ಹುದ್ದೆಗಳಿಗೆ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆಯು 2020,ಮೇ-ಜೂನ್ನಲ್ಲಿ ಆರಂಭಗೊಂಡು 2021,ಜುಲೈ-ಆಗಸ್ಟ್ನಲ್ಲಿ ಅಂತ್ಯಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ದೇಶಾದ್ಯಂತ 22 ರೈಲು ಸೇವೆಗಳ ವಿಸ್ತರಣೆಯನ್ನೂ ಅವರು ಪ್ರಕಟಿಸಿದರು.