ಕೆಲವೇ ವರ್ಷಗಳಲ್ಲಿ ಆದಾಯ ತೆರಿಗೆ ಮೌಲ್ಯಮಾಪನ ಸಂಪೂರ್ಣ ‘ಮುಖರಹಿತ’ವಾಗಲಿದೆ:ಸಿಡಿಬಿಟಿ
ಹೊಸದಿಲ್ಲಿ,ಫೆ.3: ಆದಾಯ ತೆರಿಗೆ ಪ್ರಕ್ರಿಯೆಗಳನ್ನು ಸರಳಗೊಳಿಸಲು ಸರಕಾರವು ಉಪಕ್ರಮಗಳನ್ನು ಕೈಗೊಂಡಿದ್ದು, ಇನ್ನೆರಡು ವರ್ಷಗಳಲ್ಲಿ ತೆರಿಗೆದಾರರು ಅಧಿಕಾರಿಗಳನ್ನು ಮುಖಾಮುಖಿ ಭೇಟಿಯಾಗುವ ಅಗತ್ಯವೇ ಇರುವುದಿಲ್ಲ ಮತ್ತು ಆದಾಯ ತೆರಿಗೆ ಮೌಲ್ಯಮಾಪನವು ಆನ್ಲೈನ್ನಲ್ಲಿಯೇ ನಡೆಯುವ ಮೂಲಕ ಈ ಪ್ರಕ್ರಿಯೆಯು ಸಂಪೂರ್ಣವಾಗಿ ‘ಮುಖರಹಿತ’ವಾಗಲಿದೆ.
ತೆರಿಗೆದಾರರಿಗೆ ಮೊದಲೇ ತುಂಬಿದ ರಿಟರ್ನ್ ಫಾರ್ಮಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಡಿಬಿಟಿ)ಯ ಅಧ್ಯಕ್ಷ ಸುಶೀಲಚಂದ್ರ ಅವರು ರವಿವಾರ ಇಲ್ಲಿ ತಿಳಿಸಿದರು.
ಕಳೆದ ವರ್ಷ ಆದಾಯ ತೆರಿಗೆ ಇಲಾಖೆಯು ಸುಮಾರು 2.06 ಲಕ್ಷ ಆದಾಯ ತೆರಿಗೆ ವೌಲ್ಯಮಾಪನ ಪ್ರಕರಣಗಳನ್ನು ಆನ್ಲೈನ್ ಮೂಲವೇ ನಿರ್ವಹಿಸಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಅವರು,ಆದಾಯ ತೆರಿಗೆ ಇಲಾಖೆಯಲ್ಲಿ ಅತ್ಯಾಧುನಿಕ ಕೇಂದ್ರೀಕೃತ ಸಂಸ್ಕರಣೆ ಕೇಂದ್ರ 2.0 ಸ್ಥಾಪನೆಗೆ ಸರಕಾರವು ಮಂಜೂರಿಯನ್ನು ನೀಡಿದೆ. ಸಿಪಿಸಿ 2.0 ಹಲವಾರು ನೂತನ ಸೌಲಭ್ಯಗಳನ್ನು ಹೊಂದಿರಲಿದೆ. ಮೂಲದಲ್ಲಿ ತೆರಿಗೆ ಕಡಿತ ಪ್ರಕ್ರಿಯೆ ಸಂದರ್ಭ ತೆರಿಗೆದಾರರ ಬಗ್ಗೆ ನಾವು ಸಂಗ್ರಹಿಸುವ ಮಾಹಿತಿಗಳ ಆಧಾರದಲ್ಲಿ ಅವರಿಗೆ ಮೊದಲೇ ತುಂಬಲಾದ ರಿಟರ್ನ್ ಫಾರ್ಮ್ಗಳನ್ನು ನೀಡಲಾಗುವುದು ಮತ್ತು ಅವುಗಳನ್ನು 24 ಗಂಟೆಗಳಲ್ಲಿ ಸಂಸ್ಕರಿಸಲಾಗುವುದು. ರಿಟರ್ನ್ಗಳ ತ್ವರಿತ ಸಂಸ್ಕರಣೆಯು ತೆರಿಗೆ ಪಾಲನೆಯನ್ನು ಹೆಚ್ಚಿಸುತ್ತದೆ. ಎರಡು ವರ್ಷಗಳಲ್ಲಿ ಈ ವ್ಯವಸ್ಥೆ ಜಾರಿಗೊಳ್ಳುವ ನಿರೀಕ್ಷೆಯಿದೆ ಎಂದರು.