ಮೂರು ರಾಜ್ಯಗಳಲ್ಲಿ 21,000 ಕಡಿಮೆ ಜನನ ತೂಕ ಶಿಶುಗಳ ಪತ್ತೆ: ಮೇನಕಾ ಗಾಂಧಿ
ಹೊಸದಿಲ್ಲಿ,ಮಾ.1: ಆಂಧ್ರಪ್ರದೇಶ,ಮಧ್ಯಪ್ರದೇಶ ಮತ್ತು ಛತ್ತೀಸ್ಗಡಗಳಲ್ಲಿ 21,000 ಕಡಿಮೆ ಜನನ ತೂಕ ಶಿಶುಗಳನ್ನು ಗುರುತಿಸಲಾಗಿದ್ದು,ಈ ಶಿಶುಗಳು ಅಕ್ಟೋಬರ್ 2017 ಮತ್ತು ಅಕ್ಟೋಬರ್ 2018ರ ನಡುವೆ ಜನಿಸಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಅವರು,ತನ್ನ ಸಚಿವಾಲಯವು ಈ ಶಿಶುಗಳ ಮೇಲೆ ನಿಕಟ ನಿಗಾಯಿರಿಸಿದೆ ಮತ್ತು ಈ ಪೈಕಿ 15,000 ಶಿಶುಗಳ ತೂಕವನ್ನು ಸಾಮಾನ್ಯ ಮಟ್ಟಕ್ಕೆ ಹೆಚ್ಚಿಸಲಾಗಿದೆ ಎಂದರು.
2.5 ಕೆ.ಜಿ.ಗೂ ಕಡಿಮೆ ತೂಕದ ನವಜಾತ ಶಿಶುಗಳನ್ನು ಕಡಿಮೆ ಜನನ ತೂಕ ಶಿಶುಗಳು ಎಂದು ಪರಿಗಣಿಸಲಾಗುತ್ತದೆ.
ಸ್ವತಂತ್ರ ಏಜೆನ್ಸಿಯೊಂದು ಈ ಮೂರು ರಾಜ್ಯಗಳಲ್ಲಿಯ ಕಡಿಮೆ ಜನನ ತೂಕ ಶಿಶುಗಳನ್ನು ಗುರುತಿಸಿದ್ದು,ಈ ಕಾರ್ಯವನ್ನು ಏಪ್ರಿಲ್ ವೇಳೆಗೆ ಇಡೀ ದೇಶಕ್ಕೆ ವಿಸ್ತರಿಸಲು ಉದ್ದೇಶಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
ಮಾ.8ರಿಂದ 22ರವರೆಗೆ ದೇಶಾದ್ಯಂತ ‘ಪೋಷಣ ಪಖವಾಡಾ’ವನ್ನು ಆಯೋಜಿಸುವ ಮೂಲಕ ತನ್ನ ಸಚಿವಾಲಯವು ರಾಷ್ಟ್ರೀಯ ಪೋಷಣ ಅಭಿಯಾನದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಿದೆ ಎಂದು ತಿಳಿಸಿದ ಮೇನಕಾ ಗಾಂಧಿ,ಈ ಅವಧಿಯಲ್ಲಿ ಮಹಿಳೆಯರಲ್ಲಿ ರಕ್ತಹೀನತೆಯನ್ನು ಮುಖ್ಯವಾಗಿಟ್ಟುಕೊಂಡು 25 ಕೋ.ಜನರನ್ನು ತಲುಪುವುದು ನಮ್ಮ ಉದ್ದೇಶವಾಗಿದೆ ಮತ್ತು ರಕ್ತಹೀನತೆಯಿರುವ ಒಂದು ಕೋಟಿ ಮಹಿಳೆಯರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು.