ಗಡಿಯಲ್ಲಿ ಪಾಕಿಸ್ತಾನದಿಂದ ಶೆಲ್ ದಾಳಿ: ಬಿಎಸ್ಎಫ್ ಅಧಿಕಾರಿ, ಬಾಲಕಿ ಸಾವು
ಶ್ರೀನಗರ,ಎ.1: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೇನೆ ಶೆಲ್ ದಾಳಿ ನಡೆಸಿದ ಪರಿಣಾಮ ಬಿಎಸ್ಎಫ್ನ ಓರ್ವ ಅಧಿಕಾರಿ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಘಟನೆಯ ನಂತರ ಗಡಿಭಾಗದ ನಿವಾಸಿಗಳು ಆತಂಕದಲ್ಲಿ ದಿನದೂಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಬಾಲಕಿಯನ್ನು ಐದರ ಹರೆಯದ ಸೊಬಿಯಾ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಶಹಪುರ ಉಪವಿಭಾಗದ ಗ್ರಾಮದಲ್ಲಿರುವ ಸೊಬಿಯಾ ನಿವಾಸದ ಸಮೀಪ ಪಾಕಿಸ್ತಾನ ಹಾರಿಸಿದ ಶೆಲ್ ಸ್ಫೋಟಿಸಿದ ಪರಿಣಾಮ ಆಕೆ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಯೋಧರು ಸೇರಿದಂತೆ ಹನ್ನೊಂದು ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಶೆಲ್ ದಾಳಿಯಿಂದ ಆರು ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story