ಜಮ್ಮು: ಇಬ್ಬರು ಉಗ್ರರ ಹತ್ಯೆ
ಶ್ರೀನಗರ, ಎ.13: ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಜೆಇಎಂ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ.
ಮೃತ ಉಗ್ರರನ್ನು ಜೈಷೆ ಮುಹಮ್ಮದ್ ಸಂಘಟನೆಯ ಸದಸ್ಯರಾದ ಅಬಿದ್ ಮತ್ತು ಶಾಜಹಾನ್ ಮೀರ್ ಎಂದು ಗುರುತಿಸಲಾಗಿದೆ. ಇಬ್ಬರೂ ಶೋಫಿಯಾನ್ನ ನಿವಾಸಿಗಳಾಗಿದ್ದು ಉಗ್ರರ ಸಂಘಟನೆಗೆ ಸೇರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಫಿಯಾನ್ನ ಗಹಾಂಡ್ ಗ್ರಾಮದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದರು.
ಆಗ ಭಯೋತ್ಪಾದಕರು ಭದ್ರತಾ ಪಡೆಯತ್ತ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಗುಂಡಿನ ದಾಳಿ ನಡೆಸಿದ್ದು ಇಬ್ಬರು ಉಗ್ರರು ಹತರಾಗಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story