ಮೋದಿ ವಿರುದ್ಧ ಸ್ಪರ್ಧಿಸಲು ಇಷ್ಟಪಡುತ್ತೇನೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದೇಕೆ ?
ಪಾಟ್ನ, ಎ.14:ತಾನು ಪ್ರಧಾನಿ ನರೇಂದ್ರ ಮೋದಿಯ ಎದುರು ಸ್ಪರ್ಧಿಸಲು ಇಷ್ಟಪಡುತ್ತೇನೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡು ಬಿಹಾರದ ಪಾಟ್ನಸಾಹಿಬ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಶತ್ರುಘ್ನ ಸಿನ್ಹ ಹೇಳಿದ್ದಾರೆ.
ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿನ್ಹ, ಅವರು ಮೂರ್ಖರ ಸ್ವರ್ಗದಲ್ಲೇ ವಿಹರಿಸುತ್ತಾ ಇರಲಿ. ಕ್ಷೇತ್ರದ ಮತದಾರರು ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಈ ಕ್ಷೇತ್ರದಲ್ಲಿ ಮೋದಿ ಕಣಕ್ಕಿಳಿಯಬೇಕಿತ್ತು. ಅವರ ಎದುರು ಸ್ಪರ್ಧಿಸಲು ತನಗೆ ಬಹಳ ಇಷ್ಟ ಎಂದು ಹೇಳಿದರು.
ವಾರಣಾಸಿಯ ಜೊತೆಗೆ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲೂ ಮೋದಿ ಸ್ಪರ್ಧಿಸುತ್ತಾರೆ ಎಂಬ ವರದಿ ಕೇಳಿಬರುತ್ತಿದೆ. ಏನೂ ಸಮಸ್ಯೆಯಿಲ್ಲ. ಅವರೆದುರು ಸ್ಪರ್ಧಿಸಲು ತನಗೆ ಬಹಳ ಇಷ್ಟ ಎಂದು ಸಿನ್ಹ ಹೇಳಿದರು. ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿದರೂ ಬಿಜೆಪಿಯೆದುರು ಸೋಲುತ್ತಾರೆ ಎಂಬ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ವಾಸ್ತವ ವಿಷಯವನ್ನು ಬಚ್ಚಿಟ್ಟು, ಮೋದಿ ಮತ್ತು ಅಮಿತ್ ಶಾರನ್ನು ಖುಷಿ ಪಡಿಸಲು ಕೆಲವರು ಹತಾಶೆಯಿಂದ ನುಡಿಯುವ ಮಾತಾಗಿದೆ ಎಂದರು.
ಈ ಕ್ಷೇತ್ರದಲ್ಲಿ ನಗರಪಾಲಿಕೆ ಚುನಾವಣೆಯಲ್ಲಿ ಗೆಲ್ಲಲೂ ಸಾಧ್ಯವಿಲ್ಲದ ಅಭ್ಯರ್ಥಿ(ಕೇಂದ್ರ ಸಚಿವ ರವಿಶಂಕರ್ ಪ್ರಸಾದ್)ಯನ್ನು ಕಣಕ್ಕಿಳಿಸುವ ಬದಲು ಧೈರ್ಯವಿದ್ದರೆ ಅವರು (ಸುಶಿಲ್ ಮೋದಿ) ಕಣಕ್ಕಿಳಿಯಬೇಕಿತ್ತು ಎಂದು ಸುಶೀಲ್ ಮೋದಿಯ ಹೆಸರನ್ನು ಉಲ್ಲೇಖಿಸದೆ ಶತ್ರುಘ್ನ ಸಿನ್ಹ ಸವಾಲೆಸೆದರು.