ಮೋದಿ ಘೋಷಣೆ ಕೂಗುತ್ತಿದ್ದ ಬಿಜೆಪಿ ಬೆಂಬಲಿಗರ ಬಳಿ ಕಾರು ನಿಲ್ಲಿಸಿದ ಪ್ರಿಯಾಂಕಾ: ನಂತರ ನಡೆದದ್ದೇನು?
ಹೊಸದಿಲ್ಲಿ,ಮೇ.14: ಇಂದೋರ್ನಲ್ಲಿ ತನ್ನ ರೋಡ್ಶೋ ಮಧ್ಯೆ ಮೋದಿ ಪರ ಘೋಷಣೆ ಕೂಗುತ್ತಿದ್ದ ಬಿಜೆಪಿ ಬೆಂಬಲಿಗರನ್ನು ಅಭಿನಂದಿಸುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ಬೆಂಬಲಿಗರನ್ನು ಅಚ್ಚರಿಗೆ ದೂಡಿದರು. ಮೋದಿ ಪರ ಘೋಷಣೆಗಳನ್ನು ಕೇಳಿದ ಪ್ರಿಯಾಂಕಾ ತನ್ನ ಹಿಂಬಾಲಕ ವಾಹನಗಳನ್ನು ನಿಲ್ಲಿಸಿ ತಾನು ಕುಳಿತಿದ್ದ ಕಾರಿನಿಂದ ಹೊರಬಂದು ಬಿಜೆಪಿ ಕಾರ್ಯಕರ್ತರೊಂದಿಗೆ ಹಸ್ತಲಾಘವ ಮಾಡಿದರು. “ನೀವು ನಿಮ್ಮ ಜಾಗದಲ್ಲಿ, ನಾನು ನನ್ನ ಜಾಗದಲ್ಲಿ. ಒಳ್ಳೆಯದಾಗಲಿ” ಎಂದು ಪ್ರಿಯಾಂಕಾ ಹೇಳಿದಾಗ ತಬ್ಬಿಬ್ಬುಗೊಂಡ ಬಿಜೆಪಿ ಬೆಂಬಲಿಗರು ಆಕೆಗೂ ಒಳ್ಳೆಯದಾಗಲಿ ಎಂದು ಆಶಿಸಿದ ನಂತರ ಕಾಂಗ್ರೆಸ್ ನಾಯಕಿ ಅಲ್ಲಿಂದ ಮುಂದೆ ಸಾಗಿದರು. ಇದೇ ಮೊದಲ ಬಾರಿ ಮಧ್ಯ ಪ್ರದೇಶಕ್ಕೆ ರಾಜಕೀಯ ಭೇಟಿ ನೀಡಿರುವ ಪ್ರಿಯಾಂಕಾ ಪ್ರಧಾನಿ ಮೋದಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಮೋದಿಯನ್ನು ಓರ್ವ ತಪಸ್ವಿ ಎಂದು ವ್ಯಾಖ್ಯಾನಿಸಿರುವ ಪ್ರಿಯಾಂಕಾ, ಮೋದಿಯವರು ದಶಕಗಳ ಕಾಲ ತಪಸ್ಸು ಮಾಡಿದರೂ ತನ್ನ ಹಠಮಾರಿತನವನ್ನು ಕಳೆದುಕೊಳ್ಳದ ಓರ್ವ ತಪಸ್ವಿ ಎಂದು ಅಭಿಪ್ರಾಯಿಸಿದ್ದಾರೆ.