ಇಸ್ರೋ ಬಾಹ್ಯಾಕಾಶ ನಿಲ್ದಾಣ ಯೋಜನೆ ಸ್ವಾಗತಾರ್ಹ : ಮಾಧವನ್
ಹೈದರಾಬಾದ್, ಜೂ.14: ಇಸ್ರೋದ ಪ್ರಸ್ತಾವಿತ ಬಾಹ್ಯಾಕಾಶ ನಿಲ್ದಾಣ ಕಾರ್ಯಕ್ರಮ ಅತ್ಯಾಕರ್ಷಕ ಯೋಜನೆ ಎಂದು ಬಣ್ಣಿಸಿರುವ ಇಸ್ರೋದ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್, ಇದು ಬಾಹ್ಯಾಕಾಶ ಅಖಾಡದಲ್ಲಿ ಭಾರತದ ನಾಯಕತ್ವವನ್ನು ಸಮರ್ಥಿಸಲು ಪೂರಕವಾಗಿರುತ್ತದೆ ಎಂದಿದ್ದಾರೆ.
2022ರಲ್ಲಿ ಅಂತರಿಕ್ಷಕ್ಕೆ ಮಾನವನನ್ನು ಕರೆದೊಯ್ಯಲು ಭಾರತಕ್ಕೆ ಅರ್ಹತೆ ಮತ್ತು ಸಾಮರ್ಥ್ಯವಿದೆ. ಗಗನಯಾನ ಯೋಜನೆಯ ಬಳಿಕ ಅಂತರಿಕ್ಷ ನಿಲ್ದಾಣ ಸ್ಥಾಪನೆ ಮುಂದಿನ ತಾರ್ಕಿಕ ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಇಂತಹ ಪ್ರಮುಖ ಯೋಜನೆಗಳನ್ನು ರೂಪಿಸಿ ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವುದು ದೀರ್ಘಾವಧಿಯ ಕಾರ್ಯಕ್ರಮವಾಗಿರುತ್ತದೆ ಎಂದು ಮಾಧವನ್ ಹೇಳಿದರು.
ಈಗ ಇರುವ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಏಕೈಕ ಬಾಹ್ಯಾಕಾಶ ನಿಲ್ದಾಣವಾಗಿರುವ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್(ಐಎಸ್ಎಸ್) ಸ್ಥಾಪಿಸಲು ಸುಮಾರು 120 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಿದ್ದು ಇದರ ನಿರ್ವಹಣೆಗೆ ವಾರ್ಷಿಕ 6ರಿಂದ 7 ಬಿಲಿಯನ್ ಡಾಲರ್ ವೆಚ್ಚವಾಗುತ್ತದೆ. ಆದರೆ ನಮಗೆ ಅಂತಹ ಬಾಹ್ಯಾಕಾಶ ನಿಲ್ದಾಣದ ಅಗತ್ಯವಿಲ್ಲ. ನಮಗೆ ಕಡಿಮೆ ವೆಚ್ಚದ ಬಾಹ್ಯಾಕಾಶ ನಿಲ್ದಾಣ ಸಾಕಾಗುತ್ತದೆ. 20 ಟನ್ ಬಾಹ್ಯಾಕಾಶ ನಿಲ್ದಾಣವನ್ನು ಇಸ್ರೋ ಸ್ಥಾಪಿಸಬಹುದು ಎಂದು ನಾಯರ್ ಹೇಳಿದ್ದಾರೆ.