6 ಮಂದಿಯಿಂದ ನಿರಂತರ 5 ದಿನ ಬಾಲಕಿಯ ಅತ್ಯಾಚಾರ
ಅಮರಾವತಿ, ಜೂ. 24: ಹದಿನಾರು ವರ್ಷದ ಬಾಲಕಿಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮೂವರು ಅಪ್ರಾಪ್ತ ಬಾಲಕರ ಸಹಿತ ಆರು ಮಂದಿ ನಿರಂತರ 5 ದಿನಗಳ ಕಾಲ ಅತ್ಯಾಚಾರ ನಡೆಸಿದ ಘಟನೆ ಆಂಧ್ರಪ್ರದೇಶದ ಒಂಗೋಲೆಯಲ್ಲಿ ನಡೆದಿದೆ.
ಆರು ಮಂದಿ ಆರೋಪಿಗಳನ್ನು ರಾಜ್ಯದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷೆ ಬಗ್ಗೆ ಕಳವಳಪಡುವಂತಹ ಘಟನೆಗಳು ನಡೆಯುತ್ತಿರುವುದರಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದ ಗೃಹ ಸಚಿವೆ ಎಂ. ಸುಚರಿತಾ ಭರವಸೆ ನೀಡಿದ್ದಾರೆ.
ಜೂನ್ 17ರಂದು ಅಮರಾವತಿಯ ದಕ್ಷಿಣಕ್ಕೆ 140 ಕಿ.ಮೀ. ದೂರದಲ್ಲಿರುವ ಪಟ್ಟಣ ಒಂಗೋಲೆಯ ಆರ್ಟಿಸಿ ಬಸ್ ಸ್ಟಾಂಡ್ನಲ್ಲಿ ಓರ್ವ ಆರೋಪಿ ಬಾಲಕಿಯನ್ನು ಭೇಟಿಯಾಗಿದ್ದ. ಆತ ಬಾಲಕಿಯನ್ನು ತನ್ನ ಕೊಠಡಿಗೆ ಕರೆ ತಂದಿದ್ದ. ಅಲ್ಲಿ ಆತ ಹಾಗೂ ಆತನ ಐವರು ಗೆಳೆಯರು ಸೇರಿ ಬಾಲಕಿಯ ಮೇಲೆ ಐದು ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.
ಬಾಲಕಿಯನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಸ್ಥಿರವಾಗಿದೆ. ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು 6 ಮಂದಿ ಆರೋಪಿಗಳನ್ನು ಕೂಡ ಬಂಧಿಸಿದ್ದಾರೆ.