‘ಟಿಕ್ ಟಾಕ್’ ಪವಾಡ: 3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತಿ ಪತ್ತೆ!
ಚೆನ್ನೈ, ಜು.3: ಮೂರು ವರ್ಷಗಳ ಹಿಂದೆ ತನ್ನನ್ನು ತೊರೆದು ಹೋದ ಪತಿಯನ್ನು ಕಂಡುಹಿಡಿಯುವಲ್ಲಿ ಇಲ್ಲಿನ ಮಹಿಳೆಯೊಬ್ಬರಿಗೆ ‘ಟಿಕ್ ಟಾಕ್’ ಆ್ಯಪ್ ನೆರವಾಗಿದೆ.
ತಮಿಳುನಾಡಿನ ವಿಲ್ಲುಪುರಂನಲ್ಲಿ ಘಟನೆ ನಡೆದಿದೆ. ಇಲ್ಲಿನ ನಿವಾಸಿಗಳಾದ ಜಯಪ್ರದಾ ಮತ್ತು ಸುರೇಶ್ ದಂಪತಿಗೆ ಇಬ್ಬರು ಮಕ್ಕಳಿದ್ದರು. 3 ವರ್ಷಗಳ ಹಿಂದೆ ಕೆಲಸಕ್ಕೆಂದು ಮನೆ ಬಿಟ್ಟು ತೆರಳಿದ್ದ ಸುರೇಶ್ ನಂತರ ಹಿಂದಿರುಗಿರಲಿಲ್ಲ. ಸುರೇಶ್ ರ ಬಗ್ಗೆ ಜಯಪ್ರದಾ ಅವರ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದ್ದರು. ಸತತ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿತ್ತು. ಇತ್ತೀಚೆಗೆ ಜಯಪ್ರದಾರ ಸಂಬಂಧಿಕರೊಬ್ಬರು ಟಿಕ್ ಟಾಕ್ ವಿಡಿಯೋ ಒಂದನ್ನು ನೋಡಿ ಆಶ್ಚರ್ಯಕ್ಕೊಳಗಾಗಿದ್ದರು. ಅದರಲ್ಲಿದ್ದ ವ್ಯಕ್ತಿ ಸುರೇಶ್ ರನ್ನೇ ಹೋಲುತ್ತಿದ್ದಾರೆ ಎಂದು ಅವರಿಗನಿಸಿತ್ತು.
ಈ ಬಗ್ಗೆ ಎಚ್ಚರಗೊಂಡ ಸಂಬಂಧಿಕರು ಜಯಪ್ರದಾರಿಗೆ ವಿಡಿಯೋ ತೋರಿಸಿದರು. ಕೂಡಲೇ ಜಯಪ್ರದಾ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಹೊಸೂರಿನಲ್ಲಿ ಸುರೇಶ್ ರನ್ನು ಪತ್ತೆ ಹಚ್ಚಿದ್ದಾರೆ.