ಕಪ್ಪು ಸಮುದ್ರದಲ್ಲಿ ಅಮೆರಿಕದ ವಿಮಾನ ತಡೆಯಲು ರಶ್ಯ ಯುದ್ಧ ವಿಮಾನ
ಮಾಸ್ಕೋ, ಜು. 5: ಕಪ್ಪು ಸಮುದ್ರದ ಆಕಾಶದಲ್ಲಿ ರಶ್ಯದ ವಾಯುಪ್ರದೇಶದತ್ತ ಧಾವಿಸುತ್ತಿದ್ದ ಅಮೆರಿಕದ ಪಿ-8ಎ ಪಾಸಿಡಾನ್ ಬೇಹುಗಾರಿಕಾ ವಿಮಾನವೊಂದನ್ನು ತಡೆಯಲು ತಾನು ಸುಖೋಯ್ ಎಸ್ಯು-27 ಯುದ್ಧ ವಿಮಾನವನ್ನು ನಿಯೋಜಿಸಬೇಕಾಯಿತು ಎಂದು ರಶ್ಯದ ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ.
‘‘ಅಮೆರಿಕದ ವಿಮಾನವನ್ನು ತಡೆಯುವುದಕ್ಕಾಗಿ ಸದರ್ನ್ ಮಿಲಿಟರಿ ಜಿಲ್ಲೆಯ ವಾಯು ರಕ್ಷಣೆಯ ಭಾಗವಾಗಿ ಎಸ್ಯು-27 ಯುದ್ಧವಿಮಾನವನ್ನು ನಿಯೋಜಿಸಲಾಗಿದೆ. ಅಮೆರಿಕದ ವಿಮಾನದಿಂದ ಸುರಕ್ಷಿತ ಅಂತರದಲ್ಲಿ ವಿಮಾನವನ್ನು ಸಿಬ್ಬಂದಿ ಚಲಾಯಿಸಿದ್ದಾರೆ. ಬಳಿಕ, ಅಮೆರಿಕದ ವಿಮಾನವು ತಕ್ಷಣ ತನ್ನ ದಿಕ್ಕನ್ನು ಬದಲಾಯಿಸಿ ಪರಾರಿಯಾಯಿತು’’ ಎಂದು ರಕ್ಷಣಾ ಸಚಿವಾಲಯ ಹೇಳಿರುವುದಾಗಿ ‘ಸ್ಪೂತ್ನಿಕ್’ ವರದಿ ಮಾಡಿದೆ.
ಅಮೆರಿಕವು ಈಗ ಕಪ್ಪು ಸಮುದ್ರದಲ್ಲಿ ನಡೆಯುತ್ತಿರುವ ನ್ಯಾಟೋದ ‘ಸೀ ಬ್ರೀಝ್’ ನೌಕಾಪಡೆ ಕಸರತ್ತಿನಲ್ಲಿ ಭಾಗವಹಿಸುತ್ತಿದೆ. ಇದಕ್ಕೆ ಪ್ರತಿಯಾಗಿ, ರಶ್ಯವು ತನ್ನ ಜಲಪ್ರದೇಶದಲ್ಲಿ ತನ್ನದೇ ‘ಯುದ್ಧ ತರಬೇತಿ ಕಸರತ್ತು’ಗಳನ್ನು ನಡೆಸುತ್ತಿದೆ.
Next Story