ಸೊಸೆಯನ್ನು ಅತ್ಯಾಚಾರಗೈದ ಆರೋಪ: ಮಾಜಿ ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್
ಹೊಸದಿಲ್ಲಿ, ಆ.10: ತನ್ನ ಸೊಸೆಯನ್ನೇ ಬೆದರಿಸಿ ಅತ್ಯಾಚಾರಗೈದ ಆರೋಪ ಹೊತ್ತಿರುವ ಮಾಜಿ ಬಿಜೆಪಿ ಶಾಸಕ ಮನೋಜ್ ಶೊಕೀನ್ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಂಗ್ಲೋಯಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮನೋಜ್ ವಿರುದ್ಧ ಸಂತ್ರಸ್ತೆ ಗುರುವಾರ ಪೊಲೀಸ್ ದೂರು ನೀಡಿದ ನಂತರ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆಯ ದೂರಿನ ಪ್ರಕಾರ ಡಿಸೆಂಬರ್ 31, 2018ರ ರಾತ್ರಿ ಆಕೆ ತನ್ನ ಪತಿ, ಸೋದರ ಹಾಗೂ ಸೋದರ ಸಂಬಂಧಿ ಜತೆ ಮೀರ ಬಾಘ್ ಪ್ರದೇಶದಲ್ಲಿರುವ ಗಂಡನ ಮನೆಗೆ ಹೊರಟಿದ್ದರೂ ಪತಿ ಆಕೆಯನ್ನು ಪಶ್ಚಿಮವಿಹಾರ್ ಪ್ರದೇಶದ ಹೋಟೆಲ್ ಒಂದಕ್ಕೆ ಹೊಸ ವರ್ಷಾಚರಣೆಗೆ ಕರೆದೊಯ್ದಿದ್ದರು. ಅಲ್ಲಿ ಹಲವು ಸಂಬಂಧಿಗಳು ಆಗಲೇ ಬಂದಿದ್ದರು, ಪಾರ್ಟಿ ನಂತರ ಪತಿ ಮನೆಗೆ ತೆರಳಿದ್ದರೂ ಮಧ್ಯ ರಾತ್ರಿ ಕಳೆದು 12.30ರ ಸುಮಾರಿಗೆ ಪತಿ ಆಕೆಯನ್ನು ಬಿಟ್ಟು ಮತ್ತೆ ತನ್ನ ಸ್ನೇಹಿತರೊಂದಿಗೆ ಹೊರ ಹೋಗಿದ್ದರೆನ್ನಲಾಗಿದೆ.
ಸುಮಾರು 1.30ರ ಹೊತ್ತಿಗೆ ಸಂತ್ರಸ್ತೆ ಮಲಗಿದ್ದ ಕೋಣೆಯ ಬಾಗಿಲು ಬಡಿದ ಸದ್ದು ಕೇಳಿ ಆಕೆ ಬಾಗಿಲು ತೆರೆದಾಗ ಮಾವ ಬಾಗಿಲಲ್ಲಿ ನಿಂತು ಮಾತನಾಡುವುದಿದೆ ಎಂದು ಹೇಳಿ ಒಳ ಬಂದು ಆಕೆಯ ಜತೆ ಅನುಚಿತವಾಗಿ ವರ್ತಿಸಿ ನಂತರ ಬಂದೂಕು ತೆಗೆದು ಬೆದರಿಸಿ ಬೊಬ್ಬಿಟ್ಟರೆ ಸೋದರನನ್ನು ಕೊಲ್ಲುವುದಾಗಿ ಹೆದರಿಸಿ ಅತ್ಯಾಚಾರಗೈದಿದ್ದರೆಂದು ಸಂತ್ರಸ್ತೆ ದೂರಿದ್ದಾರೆ.
ಸೋದರನನ್ನು ಉಳಿಸುವ ಸಲುವಾಗಿ ಸಲುವಾಗಿ ದೂರು ನೀಡಲಿಲ್ಲ ಎಂದು ಆಕೆ ಹೇಳಿದ್ದಾರೆ.
ಡಿಸೆಂಬರ್ 2018ರಲ್ಲಿ ಮದುವೆಯಾದ ಬೆನ್ನಿಗೆ ಕೌಟುಂಬಿಕ ಹಿಂಸೆ ಪ್ರಕರಣವನ್ನು ತಾನು ದಿಲ್ಲಿ ಪೊಲೀಸರ ಮಹಿಳೆಯರ ವಿರುದ್ಧದ ಅಪರಾಧ ಘಟಕದಲ್ಲಿ ದಾಖಲಿಸಿದ್ದಾಗಿ, ಆದರೆ ಅಲ್ಲಿ ಜುಲೈ 7ರಂದು ತನ್ನ ಹೆತ್ತವರಿಗೆ ಕಿರುಕುಳವಾದಾಗ ಸಾಕೇತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅಲ್ಲಿಯ ಅಧಿಕಾರಿ ತನ್ನ ಕುಟುಂಬಕ್ಕೆ ರಕ್ಷಣೆಯೊದಗಿಸುವುದಾಗಿ ಹೇಳಿದಾಗ ಹಿಂದಿನ ಘಟನೆಯನ್ನು ವಿವರಿಸಿದ್ದಾಗಿ ಸಂತ್ರಸ್ತೆ ಹೇಳಿದ್ದಾರೆ.
ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.