ಸಂಚಾರ ನಿಯಮ ಉಲ್ಲಂಘನೆಗೆ ದಂಡ: ಮತ್ತೆ ಹೊಸ ದಾಖಲೆ
ಹೊಸದಿಲ್ಲಿ, ಸೆ.13: ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವಲ್ಲಿ ಪೈಪೋಟಿ ನಡೆದಿದ್ದು, ದಿಲ್ಲಿಯ ಟ್ರಕ್ ಚಾಲಕನೊಬ್ಬನಿಗೆ 2 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.
ಮಿತಿಮೀರಿದ ಲೋಡ್ ಹಾಗೂ ಇತರ ಸಂಚಾರ ನಿಮಯ ಉಲ್ಲಂಘನೆಗೆ 1.31 ಲಕ್ಷ ರೂಪಾಯಿ ದಂಡ ಹಾಗೂ 69,500 ರೂಪಾಯಿ ಜುಲ್ಮಾನೆ ವಿಧಿಸಲಾಗಿದೆ. ಸೆಪ್ಟೆಂಬರ್ 1ರಂದು ಹೊಸ ನಿಯಮಾವಳಿ ಜಾರಿಗೆ ಬಂದ ಬಳಿಕ ದೇಶದಲ್ಲಿ ವಿಧಿಸಿದ ಅತ್ಯಧಿಕ ದಂಡಮೊತ್ತ ಇದಾಗಿದೆ.
ಹರ್ಯಾಣಾ ನೋಂದಣಿಯ ಟ್ರಕ್ನ ಚಾಲಕನಿಗೆ ದಿಲ್ಲಿಯ ಜಿ.ಟಿ. ಕರ್ನಲ್ ರಸ್ತೆಯಲ್ಲಿ ಈ ಭಾರಿ ಮೊತ್ತದ ದಂಡ ವಿಧಿಸಲಾಗಿದ್ದು, ಟ್ರಕ್ ಮಾಲಕ ಇದನ್ನು ಪಾವತಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ರಾಜಸ್ಥಾನದಲ್ಲಿ ಟ್ರಕ್ ಮಾಲಕರೊಬ್ಬರಿಗೆ 1.41 ಲಕ್ಷ ರೂ. ದಂಡ ವಿಧಿಸಿದ್ದು ಹಾಗೂ ಒಡಿಶಾದಲ್ಲಿ ಆಟೊ ಚಾಲಕನಿಗೆ 80 ಸಾವಿರ ರೂಪಾಯಿ ದಂಡ ವಿಧಿಸಿದ್ದು ಈ ಮೊದಲಿನ ದಾಖಲೆಯಾಗಿತ್ತು.
ಕೇಂದ್ರದ ಹೊಸ ದಂಡನಾ ಕ್ರಮಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ದಂಡ ಪ್ರಮಾಣ ಇಳಿಸುವ ಆದೇಶಗಳನ್ನು ರಾಜ್ಯ ಸರ್ಕಾರಗಳು ಹೊರಡಿಸುತ್ತಿವೆ.