‘ಭಾರತ್ ಮಾತಾ ಕಿ ಜೈ ಎಂದು ಕೂಗದವರ ಮತಗಳಿಗೆ ಬೆಲೆ ಇಲ್ಲ’ ಹೇಳಿಕೆ: ಕ್ಷಮೆ ಕೋರಿದ ಬಿಜೆಪಿ ಅಭ್ಯರ್ಥಿ
ಆದಮ್ಪುರ, ಸೆ. 10: ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗದವರ ಮತಕ್ಕೆ ಬೆಲೆಯಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ಬಿಜೆಪಿಯ ಹರ್ಯಾಣದ ಅಭ್ಯರ್ಥಿ ಹಾಗೂ ಟಿಕ್ಟಾಕ್ ಸ್ಟಾರ್ ಸೋನಾಲಿ ಫೋಗಟ್ ಬುಧವಾರ ತನ್ನ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.
‘‘ನಾನು ಕೆಲವರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದರೆ ಕ್ಷಮೆ ಕೋರುತ್ತೇನೆ. ದೇಶಕ್ಕೆ ಗೌರವ ನೀಡಲು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಬೇಕು ಎಂದು ನಾವು ಬಯಸುತ್ತೇವೆ’’ ಎಂದು ಅವರು ಹೇಳಿದ್ದಾರೆ. ವ್ಯಾಪಕವಾಗಿ ಪ್ರಸಾರವಾದ ಟಿಕ್ಟಾಕ್ ವೀಡಿಯೊದಲ್ಲಿ ಸೋನಾಲಿ ಪೋಗಟ್ ಹರ್ಯಾಣದ ಬಲ್ಸಮಂದ್ ಗ್ರಾಮದಲ್ಲಿ ಭಾಷಣ ಆರಂಭಿಸುವ ಮೊದಲು ಜನರಲ್ಲಿ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗುವಂತೆ ಆಗ್ರಹಿಸಿದ್ದಾರೆ.
ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಪೋಗಟ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಹಾಗೂ ಘೋಷಣೆ ಕೂಗದೇ ಇರುವುದು ನಾಚಿಕೆಯ ವಿಚಾರ ಎಂದು ಹೇಳುತ್ತಾರೆ. ‘‘ನೀವೆಲ್ಲರೂ ಪಾಕಿಸ್ತಾನದಿಂದ ಬಂದವರೇ ? ನೀವು ಭಾರತೀಯರಾಗಿದ್ದರೆ, ಭಾರತ್ ಮಾತಾ ಕಿ ಜೈ’’ ಎಂದು ಘೋಷಣೆ ಕೂಗುತ್ತಿದ್ದೀರಿ ಎಂದು ಹೇಳುವುದು ವೀಡಿಯೊದಲ್ಲಿ ಕೇಳಿ ಬಂದಿದೆ. ಅವರ ಘೋಷಣೆಯನ್ನು ಕೆಲವರು ಅನುಸರಣೆ ಮಾಡದೇ ಇರುವಾಗ, ‘‘ಕ್ಷುಲ್ಲಕ ರಾಜಕೀಯಕ್ಕಾಗಿ ನಮ್ಮ ದೇಶದ ಬಗ್ಗೆ ಜಯಕಾರ ಕೂಗಲು ಸಾಧ್ಯವಾಗದ ನಿಮ್ಮಂತಹ ಭಾರತೀಯರ ಬಗ್ಗೆ ನನಗೆ ನಾಚಿಕೆ ಆಗುತ್ತಿದೆ. ಭಾರತ್ ಮಾತಾ ಕಿ ಜೈ ಎಂದು ಹೇಳಲು ಸಾಧ್ಯವಾಗದವರ ಮತಗಳಿಗೆ ಯಾವುದೇ ಮೌಲ್ಯ ಇಲ್ಲ’’ ಎಂದು ಅವರು ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ.