ಗಂಡ-ಹೆಂಡತಿಯ ಹೊಡೆದಾಟಕ್ಕೆ ಐದು ತಿಂಗಳ ಮಗು ಬಲಿ
ಹೊಸದಿಲ್ಲಿ, ಅ.10: ಗಂಡ-ಹೆಂಡತಿಯ ಹೊಡೆದಾಟಕ್ಕೆ ಐದು ತಿಂಗಳ ಮಗುವೊಂದು ಬಲಿಯಾದ ಘಟನೆ ಪೂರ್ವ ದಿಲ್ಲಿ ಕಾಂಡ್ಲಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಮಗುವಿನ ತಂದೆ ಮಗುವಿನ ತಾಯಿಗೆ ಕೋಲಿನಿಂದ ಥಳಿಸಲಾರಂಭಿಸಿದಾಗ ಕಬ್ಬಿಣದ ವಸ್ತುವೊಂದು ತಾಯಿಯ ಮಡಿಲಲ್ಲಿದ್ದ ಮಗುವಿನ ಹಣೆಗೆ ಬಡಿದು ರಕ್ತ ಸೋರಲಾರಂಭಿಸಿತ್ತು. ಆಗ ಗಾಬರಿಗೊಂಡ ಹೆತ್ತವರು ಹತ್ತಿರದ ಕ್ಲಿನಿಕ್ಗೆ ಮಗುವನ್ನು ಕರೆದುಕೊಂಡು ಹೋದರು. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಸಣ್ಣಪುಟ್ಟ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆಯ ತನಕ ಮಗು ಚೆನ್ನಾಗಿತ್ತು. ಆದರೆ, ಆ ಬಳಿಕ ಜೋರಾಗಿ ಅಳಲಾರಂಭಿಸಿದಾಗ ಹೆತ್ತವರು ಮತ್ತೊಮ್ಮೆ ಕ್ಲಿನಿಕ್ಗೆ ಧಾವಿಸಿದರು. ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಮಗುವನ್ನು ಸೇರಿಸುವಂತೆ ತಿಳಿಸಿದರು. ಮಗುವನ್ನು ಪರೀಕ್ಷಿಸಿದ ಖಾಸಗಿ ಆಸ್ಪತ್ರೆ ವೈದ್ಯರು ಮಗು ಮೃತಪಟ್ಟಿದ್ದಾಗಿ ಘೋಷಿಸಿದರು. ಪೊಲೀಸ್ ತಂಡ ಆಸ್ಪತ್ರೆಗೆ ಧಾವಿಸಿ ಮಗುವನ್ನು ತಮ್ಮ ಕಸ್ಟಡಿಗೆ ಪಡೆಯಿತು. ಮಗುವಿನ ಮೃತದೇಹವನ್ನು ಲಾಲ್ಬಹದ್ದೂರ್ ಆಸ್ಪತ್ರೆಗೆ ಸಾಗಿಸಿ ಶವಮಹಜರು ನಡೆಸಲಾಯಿತು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಮೃತಪಟ್ಟಿರುವ ವಿಚಾರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಯಿತು.
ಮಗುವಿನ ತಲೆಗೆ ಹೊಡೆದಿರುವ ತಂದೆ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿ ತಂದೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಮಗುವಿನ ತಂದೆ ಗಾಝಿಯಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಆಪರೇಶನ್ ಥಿಯೇಟರ್ನ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಕೆಲಸವಿಲ್ಲದೇ ಮನೆಯಲ್ಲಿದ್ದ. ಮಗುವಿನ ತಾಯಿ ಖಾಸಗಿ ಕ್ಲಿನಿಕ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದು ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಇವರಿಗೆ ಐದು ತಿಂಗಳ ಒಂದೇ ಮಗುವಿತ್ತು.