ಬಿಜೆಪಿ ಸ್ವೀಕರಿಸಿದ ದೇಣಿಗೆ ಎಷ್ಟು ಗೊತ್ತೇ?
ಹೊಸದಿಲ್ಲಿ, ನ.13: ಲೋಕಸಭಾ ಚುನಾವಣೆಗೆ ಮುನ್ನ 2018-19ನೇ ಹಣಕಾಸು ವರ್ಷದಲ್ಲಿ ಆಡಳಿತಾರೂಢ ಬಿಜೆಪಿ, 20 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ದೇಣಿಗೆಗಳಾಗಿ ದಾಖಲೆಯ 743 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ. ಸೋಮವಾರ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಘೋಷಣೆಯಲ್ಲಿ ಈ ಅಂಶವನ್ನು ಪಕ್ಷ ಬಹಿರಂಗಪಡಿಸಿದೆ.
ಇದುವರೆಗೆ ಪಕ್ಷದ ಇತಿಹಾಸದಲ್ಲೇ ಹರಿದು ಬಂದ ಗರಿಷ್ಠ ದೇಣಿಗೆ ಇದಾಗಿದ್ದು, ಇತರ ಎಲ್ಲ ರಾಷ್ಟ್ರೀಯ ಪಕ್ಷಗಳು ಸ್ವೀಕರಿಸಿದ ದೇಣಿಗೆಗಿಂತಲೂ ಅಧಿಕ ಎನ್ನುವ ಅಂಶ ಎಡಿಆರ್ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ದೇಸದಲ್ಲಿ ಜಾರಿಯಲ್ಲಿರುವ ರಾಜಕೀಯ ದೇಣಿಗೆ ಕಾನೂನಿನಂತೆ 20 ಸಾವಿರಕ್ಕಿಂತ ಅಧಿಕ ಮೊತ್ತದ ದೇಣಿಗೆಗಳ ಮೂಲವನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕು. ಕಂಪೆನಿಗಳು, ವ್ಯಕ್ತಿಗಳು ಹಾಗೂ ಮತದಾರರ ಟ್ರಸ್ಟ್ಗಳಿಂದ ಸ್ವೀಕರಿಸಲು ಅವಕಾಶವಿದೆ. ಚುನಾವಣಾ ಬಾಂಡ್ಗಳ ಮೂಲಕ ಸ್ವೀಕರಿಸಿದ ಹಣ ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ ಹಾಗೂ ಅದರ ಮೂಲಗಳನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕಿಲ್ಲ.
ಬಿಜೆಪಿ ಸ್ವೀಕರಿಸಿ 743 ಕೊಟಿ ರೂಪಾಯಿ, ಕಾಂಗ್ರೆಸ್ ಸೇರಿದಂತೆ ಇತರ ಆರು ರಾಜಕೀಯ ಪಕ್ಷಗಳು ಸ್ವೀಕರಿಸಿದ ಒಟ್ಟು ದೇಣಿಗೆಗಿಂತಲೂ ಅಧಿಕ. ಕಾಂಗ್ರೆಸ್ ಪಕ್ಷ 147 ಕೋಟಿ ರೂ. ಇಂಥ ದೇಣಿಗೆ ಸ್ವೀಕರಿಸಿದ್ದು ಎರಡನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಪ್ರೋಗ್ರೆಸ್ಸಿವ್ ಎಲೆಕ್ಟೊರಲ್ ಟ್ರಸ್ಟ್ ಬಿಜೆಪಿಗೆ 357 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಇದು ಒಟ್ಟು ದೇಣಿಗೆಯ ಶೇಕಡ 50ರಷ್ಟು.
ಬಿಜೆಪಿ ಸ್ವೀಕರಿಸಿದ ದೇಣಿಗೆ ಕಳೆದ 16 ವರ್ಷಗಳಷ್ಟೇ ಗರಿಷ್ಠವಾಗಿದ್ದು, ಕಾಂಗ್ರೆಸ್ ಸ್ವೀಕರಿಸಿದ 147 ಕೋಟಿ ರೂಪಾಯಿ ಕೂಡಾ ಈ ಅವಧಿಯ ಗರಿಷ್ಠ ಸಂಗ್ರಹ. ಕಳೆದ ಒಂದು ದಶಕದಲ್ಲಿ ದೇಣಿಗೆ ಸಂಗ್ರಹದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ತೀರಾ ಮುಂದಿದೆ ಎಂಬ ಅಂಶ ಕೂಡಾ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ.
ಆದರೆ ಈ ದೊಡ್ಡ ಪ್ರಮಾಣದ ದೇಣಿಗೆಗಳು ಪಕ್ಷದ ಒಟ್ಟು ವಾರ್ಷಿಕ ಆದಾಯದ ಸಣ್ಣ ಪಾಲು. ಉದಾಹರಣೆಗೆ 2017-18ರಲ್ಲಿ ಬಿಜೆಪಿ 437 ಕೋಟಿ ರೂಪಾಯಿ ದೊಡ್ಡ ದೇಣಿಗೆ ಸಂಗ್ರಹಿದ್ದರೆ, ಅದರ ಒಟ್ಟು ಆದಾಯ 1,027 ಕೋಟಿ ರೂಪಾಯಿ. ಅಂತೆಯೇ ಕಾಂಗ್ರೆಸ್ ಪಕ್ಷ ಸ್ವೀಕರಿಸಿದ ದೊಡ್ಡ ದೇಣಿಗೆ 27 ಕೋಟಿ ರೂಪಾಯ ಆಗಿದ್ದರೆ, ಒಟ್ಟು ಆದಾಯ 199 ಕೋಟಿ ಆಗಿತ್ತು.