ಸಂಸದೆ ಪ್ರಜ್ಞಾ ಸಿಂಗ್ ರಿಗೆ 'ಟೆರರಿಸ್ಟ್ ಗೋ ಬ್ಯಾಕ್' ಘೋಷಣೆ ಕೂಗಿದ ವಿದ್ಯಾರ್ಥಿಗಳು
ಭೋಪಾಲ್ : ದಿಲ್ಲಿ-ಭೋಪಾಲ್ ಸ್ಪೈಸ್ ಜೆಟ್ ವಿಮಾನದಲ್ಲಿ ಸೀಟಿನ ವಿಚಾರದಲ್ಲಿ ತಕರಾರೆಬ್ಬಿಸಿ ಸುದ್ದಿಯಾಗಿದ್ದ ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕುರ್ ಬುಧವಾರ ಭೋಪಾಲ್ನ ಮಖನ್ಲಾಲ್ ಚತುರ್ವೇದಿ ನ್ಯಾಷನಲ್ ಯುನಿವರ್ಸಿಟಿಗೆ ಆಗಮಿಸಿದಾಗ ಅಲ್ಲಿನ ವಿದ್ಯಾರ್ಥಿಗಳು `ಟೆರರಿಸ್ಟ್ ಗೋ ಬ್ಯಾಕ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಅಟೆಂಡೆನ್ಸ್ ಕೊರತೆಯಿಂದಾಗಿ ಕಾಲೇಜಿನಿಂದ ಸಸ್ಪೆಂಡ್ ಆಗಿ ಪ್ರತಿಭಟನೆ ನಡೆಸುತ್ತಿರುವ ಇಬ್ಬರು ವಿದ್ಯಾರ್ಥಿಗಳಾದ ಶ್ರೇಯಾ ಪಾಂಡೆ ಹಾಗೂ ಮನು ಶರ್ಮ ಅವರನ್ನು ಭೇಟಿಯಾಗಲು ವಿವಿಯ ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮ ಕ್ಯಾಂಪಸ್ಸಿಗೆ ಸಂಸದೆ ಆಗಮಿಸಿದಾಗ ಈ ಘಟನೆ ನಡೆದಿದೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಭೇಟಿಯಾಗಲು ಪ್ರಜ್ಞಾ ಠಾಕುರ್ ಮಾಡಿದ ಯತ್ನ ಬಿಜೆಪಿ ಬೆಂಬಲಿಗರು ಹಾಗೂ ವಿದ್ಯಾರ್ಥಿಗಳ ನಡುವೆ ಜಟಾಪಟಿಗೆ ಕಾರಣವಾಯಿತಲ್ಲದೆ 'ಆತಂಕ್ ವಾದಿ ವಾಪಸ್ ಜಾವೋ' ಎಂಬ ಘೋಷಣೆಗಳೂ ಮೊಳಗಿದವು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿ ಶಾಂತಿ ನೆಲೆಸುವಂತೆ ಮಾಡಿದರು.
ಘಟನೆ ಕುರಿತು ಆಕ್ರೋಶದಿಂದ ಮಾತನಾಡಿದ ಸಂಸದೆ ತಾವು ಕಾನೂನು ತಜ್ಞರನ್ನು ಸಂಪರ್ಕಿಸಿ ಸಂಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
#WATCH Bhopal: NSUI workers raise "aatankwadi wapas jayo" & "Pragya Thakur, go back" slogans at Makhanlal Chaturvedi University. BJP MP Pragya Thakur had gone there to meet female students who were sitting on a 'dharna' against the university, over attendance issue. (25.12.19) pic.twitter.com/HKU1tZqoBY
— ANI (@ANI) December 25, 2019