ಸಂವಿಧಾನದ ಪ್ರಥಮ ಪ್ರತಿ ಮುದ್ರಿಸಿದ ಯಂತ್ರ ಗುಜರಿಗೆ ಮಾರಾಟ!
ಚಿತ್ರ ಕೃಪೆ: Survey of India
ಹೊಸದಿಲ್ಲಿ, ಜ.25: ದೇಶ 70ನೇ ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದ್ದರೆ, ಭಾರತದ ಸಂವಿಧಾನದ ಮೊದಲ 1000 ಪ್ರತಿಗಳನ್ನು ಫೋಟೊಲಿಥೋಗ್ರಾಫಿಕ್ ಮರುಮುದ್ರಣ ವಿಧಾನದ ಮೂಲಕ ಮುದ್ರಿಸಿದ್ದ ಡೆಹ್ರಾಡೂನ್ ಮೂಲದ ಸರ್ವೆ ಆಫ್ ಇಂಡಿಯಾ ಈ ಪೈಕಿ ಒಂದು ಪ್ರತಿಯನ್ನು ಸಂರಕ್ಷಿಸಿ ಇಟ್ಟಿದೆ. ಆದರೆ ಇದನ್ನು ಮುದ್ರಿಸಿದ ಎರಡು ಯಂತ್ರಗಳನ್ನು 1.5 ಲಕ್ಷ ರೂಪಾಯಿಗೆ ಗುಜರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಲಿಥೋಗ್ರಾಫಿಕ್ ಪ್ಲೇಟ್ಗಳನ್ನು ಕೂಡಾ ಹರಾಜಿನ ಮೂಲಕ ಹಿಂದೆಯೇ ಗುಜರಿ ಡೀಲರ್ಗಳಿಗೆ ಮಾರಾಟ ಮಾಡಲಾಗಿತ್ತು ಎಂದು ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಹೇಳಿದ್ದಾರೆ.
ಸೊವರಿನ್ ಮತ್ತು ಮೊನಾರ್ಕ್ ಮಾದರಿಯ ಎರಡು ಮುದ್ರಣ ಯಂತ್ರಗಳು ಇಂಗ್ಲೆಂಡಿನ ಆರ್ಡಬ್ಲ್ಯು ಕಾರ್ಬೆಟ್ರಿ ಆ್ಯಂಡ್ ಸನ್ಸ್ನಲ್ಲಿ ಉತ್ಪಾದನೆಯಾಗಿದ್ದವು. ಇವುಗಳನ್ನು ಭಾರತೀಯ ಸಂವಿಧಾನದ ಪ್ರಥಮ ಪ್ರತಿಗಳನ್ನು ಮುದ್ರಿಸಲು ಬಳಸಲಾಗಿತ್ತು. ಇವುಗಳನ್ನು ಕದಲಿಸಿ ಕಳೆದ ವರ್ಷ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಮುದ್ರಣಾಗಾರಕ್ಕೆ ಭೇಟಿ ನೀಡಿದಾಗ ಗೋಡೆಯಲ್ಲಿ ಮೊನಾರ್ಕ್ ಯಂತ್ರದ ಲ್ಯೂಬ್ರಿಕೇಶನ್ ಶೆಡ್ಯೂಲ್ ಮಾತ್ರ ಕಂಡುಬಂತು.
ಡೆಹ್ರಾಡೂನ್ನ ಹಾತಿಬರ್ಕಲಾ ಪ್ರದೇಶದಲ್ಲಿರುವ ಸರ್ವೆ ಆಫ್ ಇಂಡಿಯಾದ ನಾರ್ತರ್ನ್ ಪ್ರಿಂಟಿಂಗ್ ಗ್ರೂಪ್ ಆಫೀಸ್ನಲ್ಲಿ ಎರಡು ಮೂಲ ಕೈಬರಹದ ಪ್ರತಿಗಳಿಂದ ಲಿಥೋಗ್ರಾಫ್ ಪ್ರಿಂಟಿಂಗ್ ವಿಧಾನದ ಮೂಲಕ ಮೊದಲ 1000 ಪ್ರತಿಗಳನ್ನು ಮುದ್ರಿಸಲಾಗಿತ್ತು. ಕ್ಯಾಲಿಗ್ರಾಫರ್ ಪ್ರೇಮ್ಬೆಹಾರಿ ನಾರಾಯಣ ರಿಯಾಝಾದಾ (ಸಕ್ಸೇನಾ) ಅವರು ಇಂಗ್ಲಿಷ್ನಲ್ಲಿ ಮತ್ತು ವಸಂತ್ ಕೃಷ್ಣ ವೈದ್ಯ ಹಿಂದಿಯಲ್ಲಿ ಸಂವಿಧಾನದ ಕೈಬರಹದ ಪ್ರತಿಗಳನ್ನು ಸಿದ್ಧಪಡಿಸಿದ್ದರು. ಇವುಗಳಿಗೆ ಚಿತ್ರಗಳನ್ನು ಕಲಾವಿದರಾದ ನಂದಾಲಾಲ್ ಬೋಸ್, ಬಿಯೋಹರ್ ರಾಮ ಮನೋಹರ ಸಿನ್ಹಾ ಮತ್ತು ಶಾಂತಿನಿಕೇತನದ ಇತರ ಕಲಾವಿದರು ರಚಿಸಿದ್ದರು.
ಮೊದಲ ಮುದ್ರಿತ ಪ್ರತಿಯನ್ನು ನಾರ್ತನ್ ಪ್ರಿಂಟಿಂಗ್ ಡಿವಿಷನ್ನ ಕಪಾಟಿನಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಎರಡು ಹಳೆಯ ಯಂತ್ರಗಳನ್ನು ನಿರ್ವಹಿಸುವ ವೆಚ್ಚ ಅಧಿಕವಾಗಿದ್ದರಿಂದ ಹಾಗೂ ತಂತ್ರಜ್ಞಾನ ಹಳೆಯದಾಗಿದ್ದರಿಂದ ಅದನ್ನು ಮಾರಾಟ ಮಾಡಲಾಗಿದೆ ಎಂದು ಸರ್ವೆಯರ್ ಜನರಲ್ ಆಫ್ ಇಂಡಿಯಾ ಲೆಫ್ಟಿನೆಂಟ್ ಜನರಲ್ ಗಿರೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ ಇದನ್ನು ಯಾರು ಖರೀದಿಸಿದ್ದಾರೆ ಎಂಬ ವಿವರ ಲಭ್ಯವಾಗಿಲ್ಲ.