ನಿರಂತರ ಅತ್ಯಾಚಾರ: 24 ದಿನಗಳ ಬಳಿಕ ಬಾಲಕಿ ರಕ್ಷಣೆ
ಜಲ್ನಾ (ಮಹಾರಾಷ್ಟ್ರ): ಬಾಲಕಿಯೋರ್ವಳನ್ನು ಆಕೆಯ ಮಾವನೇ ಮನೆಯಲ್ಲಿ ಕೂಡಿ ಹಾಕಿ 24 ದಿನಗಳ ಕಾಲ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯನ್ನು ಶನಿವಾರ ರಕ್ಷಿಸಲಾಗಿದೆ.
17 ವರ್ಷದ ಬಾಲಕಿ ಜ. 14ರಂದು ಮನೆಯಿಂದ ಕಾಣೆಯಾಗಿದ್ದಳು. ಆಕೆಯನ್ನು ಬುಲ್ದಾನ ಜಿಲ್ಲೆಯ ಮೇಖರ್ ತಾಲೂಕಿನ ಗ್ರಾಮದಲ್ಲಿ ಕೂಡಿಹಾಕಿರುವುದು ತನಿಖೆಯಿಂದ ತಿಳಿದುಬಂದಿದೆ.
"ಪೊಲೀಸರು ಬಾಲಕಿಯ ರಕ್ಷಣೆಗಾಗಿ ಮುಂದಾದಾಗ ಆರೋಪಿ ತಲೆಮರೆಸಿಕೊಂಡಿದ್ದ. ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪದೇ ಪದೇ ಸ್ಥಳ ಬದಲಿಸುತ್ತಿದ್ದ. ಫೆ. 8ರಂದು ಆತನನ್ನು ಔರಂಗಾಬಾದ್ ಬಸ್ ನಿಲ್ದಾಣದಲ್ಲಿ ಸೆರೆ ಹಿಡಿದು ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಶ್ಯಾಮಸುಂದರ್ ಕೌತಾಳೆ ಹೇಳಿದ್ದಾರೆ.
ಆರೋಪಿ ನನ್ನನ್ನು ಮನೆಯಲ್ಲಿ ಕೂಡಿಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಆತ ಹೊರಗೆ ಹೋಗುತ್ತಿದ್ದಾಗ ಬೀಗ ಹಾಕಿ ಹೋಗುತ್ತಿದ್ದ ಎಂದು ಬಾಲಕಿ ವಿವರಿಸಿದ್ದಾಳೆ.
Next Story