'ಗೋಲಿ ಮಾರೋ ಸಾಲೋಂ ಕೊ' ಘೋಷಣೆ ಕೂಗುತ್ತಾ ದಿಲ್ಲಿ ರಸ್ತೆಗಳಲ್ಲಿ ಬಿಜೆಪಿ ಶಾಸಕನ ಜಾಥಾ
ವೀಡಿಯೋ ವೈರಲ್
ಹೊಸದಿಲ್ಲಿ: ದಿಲ್ಲಿಯ ಲಕ್ಷ್ಮೀ ನಗರ್ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ವರ್ಮ ಅವರು ತಮ್ಮ ಕ್ಷೇತ್ರದ ಮಂಗಲ್ ಬಜಾರ್ ಪ್ರದೇಶದಲ್ಲಿ 'ಗೋಲಿ ಮಾರೋ ಸಾಲೋಂ ಕೊ' ಘೋಷಣೆಗಳನ್ನು ಕೂಗುತ್ತಾ ರಸ್ತೆಗಳಲ್ಲಿ ಸಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೋವನ್ನು ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದರು.
ವೀಡಿಯೋದಲ್ಲಿ ಶಾಸಕ ವರ್ಮ ತಮ್ಮ ಬೆಂಬಲಿಗರ ಜತೆ ಸಾಗುತ್ತಾ "ಪೊಲೀಸ್ ಕೆ ಹತ್ಯಾರೋಂ ಕೋ ಗೋಲಿ ಮಾರೋ ಸಾಲೋಂ ಕೊ'', "ಜೋ ಹಿಂದು ಹಿತ್ ಕಿ ಬಾತ್ ಕರೇಗಾ, ವೋ ಹೀ ದೇಶ್ ಮೆ ರಾಜ್ ಕರೇಗಾ'' ಎಂಬ ಘೊಷಣೆಗಳನ್ನು ಕೂಗುತ್ತಾ ಸಾಗುತ್ತಿರುವುದು ಕಾಣಿಸುತ್ತದೆ.
ಈ ವೀಡಿಯೋದ ಸತ್ಯಾಸತ್ಯತೆ ಕುರಿತು ತಿಳಿದಿಲ್ಲವಾದರೂ ಸಿಎನ್ಎನ್ ನ್ಯೂಸ್ 18 ಪತ್ರಕರ್ತ ಉದಯ್ ಸಿಂಗ್ ರಾಣಾ ಕೂಡ ಮಂಗಳವಾರ ತಮ್ಮ ಪ್ರದೇಶದಲ್ಲಿ ನಡೆದ ಈ ಘಟನೆ ಕುರಿತು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಅಭಯ್ ವರ್ಮ, ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ, ಪ್ರದೇಶದಲ್ಲಿ ಕಲ್ಲು ತೂರಾಟ ಘಟನೆಗಳು ನಡೆದಿರುವ ಕುರಿತು ತಿಳಿದು ಉದ್ವಿಗ್ನತೆ ಶಮನಗೊಳಿಸಲು ತೆರಳಿದ್ದಾಗಿ ಹೇಳಿದ್ದಾರಲ್ಲದೆ ಯಾವುದೇ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿರುವ ವರದಿಗಳನ್ನು ನಿರಾಕರಿಸಿದ್ದಾರೆ.
ये लक्ष्मी नगर भाजपा का विधायक क्या कर रहा है? @AmitShah शांति बहाली के लिये सर्वदलीय मीटिंग का दिखावा करते हैं और उनके विधायक दंगा भड़काने में लगे हैं। pic.twitter.com/zxl5C90VH9
— Sanjay Singh AAP (@SanjayAzadSln) February 25, 2020