ಹೋಳಿ ಆಚರಣೆಯ ವೇಳೆ ದುಷ್ಕರ್ಮಿಯಿಂದ ಅತ್ಯಾಚಾರ: ಬಾಲಕಿ ಮೃತ್ಯು
ಉನ್ನಾವೊ,ಮಾ.12: ದುಷ್ಕರ್ಮಿಯೊಬ್ಬನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಬುಧವಾರ ವರದಿಯಾಗಿದೆ.
ಮಂಗಳವಾರ ಮಧ್ಯಾಹ್ನ ಹೋಳಿ ಹಬ್ಬದ ಆಚರಣೆ ವೇಳೆ ಈ ಕೃತ್ಯ ನಡೆದಿದೆ. ಬಾಲಕಿಯನ್ನು ಅತ್ಯಾಚಾರಗೈದ ಬಳಿಕ ಆರೋಪಿಯು ಆಕೆ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದನು. ಬಾಲಕಿಯು ಪ್ರಜ್ಞೆ ತಪ್ಪಿದ್ದರಿಂದ ಆಕೆ ಸತ್ತಿದ್ದಾಳೆಂದು ಭಾವಿಸಿ ಆತ ಸ್ಥಳದಿಂದ ಪರಾರಿಯಾದನೆಂದು ಪೊಲೀಸರು ತಿಳಿಸಿದ್ದಾರೆ.
ಆನಂತರ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಬಾಲಕಿಯನ್ನು ಮೊದಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಆನಂತರ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು. ತೀವ್ರ ರಕ್ತಸ್ರಾವವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕಾನ್ಪುರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಲ್ಲಿ ಆಕೆ ತೀವ್ರ ಗಾಯಗಳಿಂದಾಗಿ ಕೊನೆಯುಸಿರೆಳೆದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿರುವುದಾಗಿ ಅವರು ಹೇಳಿದ್ದಾರೆ.
ಪ್ರಿಯಾಂಕಾ ಆಕ್ರೋಶ
ಘಟನೆಯ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದ ಆದಿತ್ಯನಾಥ ಸರಕಾರದ ಆಳ್ವಿಕೆಯಲ್ಲಿ ಮಕ್ಕಳ ವಿರುದ್ಧ ಅಪರಾಧಗಳು ಹೆಚ್ಚುತ್ತಿವೆಯೆಂದು ಅವರು ಹೇಳಿದ್ದಾರೆ.