ದಕ್ಷಿಣ ಕೊರಿಯಾದಿಂದ ಒಂದು ಲಕ್ಷ ಕೊರೋನ ವೈರಸ್ ಪರೀಕ್ಷಾ ಕಿಟ್ ಆಮದು ಮಾಡಿಕೊಂಡ ಆಂಧ್ರಪ್ರದೇಶ
ಸಾಂದರ್ಭಿಕ ಚಿತ್ರ
ಹೈದರಾಬಾದ್ : ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾದ ಕ್ಷಿಪ್ರ ಪರೀಕ್ಷಾ ಕಿಟ್ ಬಳಸಿಕೊಂಡು ಆಂಧ್ರಪ್ರದೇಶ ಶುಕ್ರವಾರದಿಂದ ಕೊರೋನ ಶಂಕಿತರ ಕ್ಷಿಪ್ರ ಪರೀಕ್ಷೆ ಆರಂಭಿಸಿದೆ. ಒಂದು ಲಕ್ಷ ಕಿಟ್ಗಳನ್ನು ಆಮದು ಮಾಡಿಕೊಂಡ ಪರಿಣಾಮವಾಗಿ ಆರೋಗ್ಯ ಇಲಾಖೆ ದಿನಕ್ಕೆ 10 ಸಾವಿರ ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲು ಸಾಧ್ಯವಾಗಲಿದೆ. ಕೇವಲ 10 ನಿಮಿಷಗಳಲ್ಲಿ ಇದರಲ್ಲಿ ಫಲಿತಾಂಶ ದೊರಕುತ್ತದೆ.
ದಕ್ಷಿಣ ಕೊರಿಯಾದಿಂದ ವಿಶೇಷ ವಿಮಾನದಲ್ಲಿ ಈ ಕಿಟ್ಗಳು ಆಗಮಿಸಿವೆ. ಇದುವರೆಗೆ ರಾಜ್ಯದಲ್ಲಿ 572 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 14 ಸಾವು ಸಂಭವಿಸಿದೆ.
ಈ ಕಿಟ್ಗಳನ್ನು ಎಲ್ಲ 13 ಜಿಲ್ಲೆಗಳಿಗೆ ಮೂರು ದಿನಗಳ ಒಳಗಾಗಿ ರವಾನಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕಿಟ್ ನಿರ್ವಹಿಸುವ ಬಗ್ಗೆ ವೈದ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಡಾ.ಕೆ.ಎಸ್.ಜವಾಹರ್ ರೆಡ್ಡಿ ಹೇಳಿದ್ದಾರೆ.
ಈ ಕಿಟ್ನಲ್ಲಿ ಐಜಿಜಿ ಮತ್ತು ಐಜಿಎಂ ಎಂಬ ಎರಡು ಪಟ್ಟಿಗಳಿರುತ್ತವೆ. ಇದರಲ್ಲಿ ರಕ್ತದ ಮಾದರಿ ಪಡೆದು ನಿಯಂತ್ರಣ ಮಿಶ್ರಣವನ್ನು ಸೇರಿಸಿದಾಗ 10 ನಿಮಿಷದಲ್ಲಿ ಈ ಪ್ರಕರಣ ಪಾಸಿಟಿವ್ ಅಥವಾ ನೆಗೆಟಿವ್ ಎಂಬ ಫಲಿತಾಂಶ ಬರುತ್ತದೆ ಎಂದು ಅವರು ವಿವರಿಸಿದರು. ದಕ್ಷಿಣ ಕೊರಿಯಾದ ಎಸ್ಡಿ ಬಯೋಸೆನ್ಸಾರ್ ಕಂಪನಿ ಇದನ್ನು ಉತ್ಪಾದಿಸಿದ್ದು, ಅಮೆರಿಕ ಹಾಗೂ ಯೂರೋಪ್ ದೇಶಗಳಿಗೂ ಇದನ್ನು ರಫ್ತು ಮಾಡಲಾಗುತ್ತಿದೆ. ಐಸಿಎಂಆರ್ ಈ ಕಿಟ್ಗಳಿಗೆ ಅನುಮೋದನೆ ನೀಡಿದೆ. ಗುಣಮಟ್ಟದ ಕಿಟ್ಗಳನ್ನು ಪೂರೈಸುವ ಜತೆಗೆ ಅಗತ್ಯ ಬಿದ್ದಾಗ ಸರ್ಕಾರಕ್ಕೆ ಈ ತಂತ್ರಜ್ಞಾನವನ್ನೂ ಒದಗಿಸಲು ಸಿದ್ಧ ಎಂದು ಕಂಪನಿ ಹೇಳಿದೆ.
ಕೊರೋನ ಪರೀಕ್ಷೆಗೆ ರಾಜ್ಯದಲ್ಲಿ ಏಕೈಕ ಲ್ಯಾಬ್ ಇದ್ದ ಹಿನ್ನೆಲೆಯಲ್ಲಿ ಸರ್ಕಾರ ಸಮರೋಪಾದಿಯಲ್ಲಿ ವಿಜಯವಾಡ, ಕಾಕಿನಾಡ, ಅನಂತಪುರ, ಗುಂಟೂರು, ಕಡಪ ಮತ್ತು ವಿಶಾಖಪಟ್ಟಣಂನಲ್ಲಿ ಕೇವಲ ಎರಡು ವಾರಗಳ ಅಂತರದಲ್ಲಿ ಪ್ರಯೋಗಾಲಯಗಳನ್ನು ಸಜ್ಜುಗೊಳಿಸಿದೆ. ಈ ಲ್ಯಾಬ್ಗಳಲ್ಲಿ ದಿನಕ್ಕೆ 2100 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.