ಮಹಾರಾಷ್ಟ್ರದಲ್ಲಿ ಒಂದೇ ದಿನ 114 ಪೊಲೀಸರಿಗೆ ಕೋವಿಡ್-19 ಸೋಂಕು, ಓರ್ವ ಅಧಿಕಾರಿ ಸಾವು
ಮುಂಬೈ,ಮೇ 30: ಮಹಾರಾಷ್ಟ್ರದಲ್ಲಿ ಶನಿವಾರ ಬೆಳಿಗ್ಗೆಯವರೆಗಿನ 24 ಗಂಟೆಗಳ ಅವಧಿಯಲ್ಲಿ 114 ಪೊಲೀಸರು ಹೊಸದಾಗಿ ಕೋವಿಡ್-19 ಸೋಂಕಿಗೆ ತುತ್ತಾಗಿದ್ದು,ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,330ಕ್ಕೇರಿದೆ. ಈ ಅವಧಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೊರೋನ ವೈರಸ್ ಸೋಂಕಿಗೆ ಬಲಿಯಾಗಿದ್ದು,ಇಲಾಖೆಯಲ್ಲಿ ಒಟ್ಟು ಸಾವುಗಳ ಸಂಖ್ಯೆ 26ಕ್ಕೇರಿದೆ.
ಕೊರೋನ ವೈರಸ್ ಪಿಡುಗನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ರಾಜ್ಯ ಸರಕಾರವು ಕಳೆದ ತಿಂಗಳು 55 ವರ್ಷಕ್ಕೂ ಹೆಚ್ಚಿನ ಪ್ರಾಯದ ಹಾಗೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಗಳಂತಹ ಅನಾರೋಗ್ಯಗಳನ್ನು ಹೊಂದಿರುವ 52 ವರ್ಷ ಮೀರಿದ ಮುಂಬೈ ಪೊಲೀಸ್ ಸಿಬ್ಬಂದಿಗಳಿಗೆ ಮನೆಗಳಲ್ಲಿಯೇ ಇರುವಂತೆ ಸೂಚಿಸಿತ್ತು.
ಪೊಲೀಸ್ ಅಧಿಕಾರಿಗಳು,ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗಳು ಹಾಗೂ ಸ್ವಚ್ಛತಾ ಕಾರ್ಮಿಕರು ತಮ್ಮ ಕರ್ತವ್ಯಗಳ ಸ್ವರೂಪದಿಂದಾಗಿ ಕೊರೋನ ವೈರಸ್ ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ.
ಮಹಾರಾಷ್ಟ್ರವು ದೇಶದಲ್ಲೇ ಅತ್ಯಂತ ಪೀಡಿತ ರಾಜ್ಯವಾಗಿದ್ದು,ಶುಕ್ರವಾರ 2,682 ಹೊಸ ಕೊರೋನ ವೈರಸ್ ಪ್ರಕರಣಗಳು ಮತ್ತು 116 ಸಾವುಗಳು ವರದಿಯಾಗಿದ್ದವು. ಇವು ಅಂದಿನವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಗಳಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಮತ್ತು ಸಾವುಗಳ ಸಂಖ್ಯೆ ಅನುಕ್ರಮವಾಗಿ 62,228 ಮತ್ತು 2,098ಕ್ಕೇರಿವೆ. ಮುಂಬೈ ಮಹಾನಗರವೊಂದರಲ್ಲೇ ಶುಕ್ರವಾರ 1,447 ಹೊಸ ಪ್ರಕರಣಗಳು ಮತ್ತು 38 ಸಾವುಗಳು ವರದಿಯಾಗಿದ್ದು,ಒಟ್ಟು ಸಂಖ್ಯೆ ಅನುಕ್ರಮವಾಗಿ 36,932 ಮತ್ತು 1,173ಕ್ಕೇರಿವೆ.