ಕೊರೋನ ಪಾಸಿಟಿವ್ ಹಿನ್ನೆಲೆ: ಐಶ್ವರ್ಯಾ ರೈ, ಅವರ ಪುತ್ರಿ ಆಸ್ಪತ್ರೆಗೆ ದಾಖಲು
ಮುಂಬೈ: ಕೊರೋನ ವೈರಸ್ ಸೋಂಕು ತಗಲಿರುವ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಬಳಿಕ ಇದೀಗ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಅವರನ್ನೂ ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ- ಮಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕೂ ಮಂದಿಗೆ ಕಳೆದ ವಾರ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಅಮಿತಾಭ್ ಹಾಗೂ ಅಭಿಷೇಕ್ ಅವರನ್ನು ಕಳೆದ ವಾರವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಶ್ವರ್ಯಾ ಹಾಗೂ ಆರಾಧ್ಯ ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದರು.
ಇದಕ್ಕೂ ಮುನ್ನ ಅಮಿತಾಭ್ ಬಚ್ಚನ್, ಮಗನ ಜತೆ ಇರುವ ಚಿತ್ರ ಟ್ವೀಟ್ ಮಾಡಿದ್ದರು. “ಶುಭಾಶಯ, ಅನಾರೋಗ್ಯದ ಸಂದರ್ಭದಲ್ಲಿ ನಮ್ಮ ಆಪ್ತರು ಮತ್ತು ಆತ್ಮೀಯರು, ಹಿತೈಷಿಗಳು, ಅಭಿಮಾನಿಗಳು ನಮಗೆ ಅದಮ್ಯ ಪ್ರೀತಿ ಹರಿಸಿದ್ದೀರಿ. ಆತ್ಮೀಯ ಕಾಳಜಿ ಮತ್ತು ಪ್ರಾರ್ಥನೆ..ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಗಳು..ಈ ಪರಿಸ್ಥಿತಿಯಲ್ಲಿ ಆಸ್ಪತ್ರೆಯ ಶಿಷ್ಟಾಚಾರ ನಿರ್ಬಂಧಾತ್ಮಕ. ಆದ್ದರಿಂದ ವೈಯಕ್ತಿಕ ಸ್ಪಂದನೆ ಸಾಧ್ಯವಿಲ್ಲ. ಆದರೆ ನಾವು ನಿಮ್ಮನ್ನು ನೋಡುತ್ತಿದ್ದೇವೆ, ಓದುತ್ತಿದ್ದೇವೆ ಹಾಗೂ ಕೇಳುತ್ತಿದ್ದೇವೆ. ಎಲ್ಲರಿಗೂ ಧನ್ಯವಾದಗಳು..” ಎಂದು ಬಿಗ್-ಬಿ ಟ್ವೀಟ್ ಮಾಡಿದ್ದರು.
ಐಶ್ವರ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದನ್ನು ಅಭಿಷೇಕ್ ಬಚ್ಚನ್ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ತಾಯಿ ಸೇರಿದಂತೆ ಕುಟುಂಬದ ಇತರ ಎಲ್ಲರೂ ಆರೋಗ್ಯದಿಂದಿದ್ದು, ಎಲ್ಲರಿಗೂ ಕೊರೋನ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.