10 ಕೋಟಿ ಡೋಸ್ ಕೊರೋನ ಲಸಿಕೆ ಉತ್ಪಾದಿಸಲು ಗೇಟ್ಸ್ ಫೌಂಡೇಶನ್ನೊಂದಿಗೆ ಸಿರಮ್ ಇನ್ಸ್ಟಿಟ್ಯೂಟ್ ಒಪ್ಪಂದ
1,125 ಕೋಟಿ ರೂ. ನೀಡಿದ ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್ ಪ್ರತಿ ಒಂದು ಡೋಸ್ ಕೊರೋನ ಲಸಿಕೆಗೆ 224 ರೂಪಾಯಿ
ಬೆಂಗಳೂರು, ಆ. 7: ಭಾರತ ಹಾಗೂ ಇತರ ಕೆಳ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಒದಗಿಸಲು 2021ರ ಒಳಗೆ 10 ಕೋಟಿ ಡೋಸ್ ಕೋವಿಡ್-19 ಲಸಿಕೆಯ ತಯಾರಿಕೆ ಹಾಗೂ ವಿತರಣೆ ಪ್ರಕ್ರಿಯೆಯನ್ನು ತ್ವರಿಗೊಳಿಸಲು ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್ ಹಾಗೂ ಗವಿ ವ್ಯಾಕ್ಸಿನ್ ಅಲಯನ್ಸ್ (ಎಸ್ಐಎ) ನೊಂದಿಗೆ ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೊಸ ಒಪ್ಪಂದ ಮಾಡಿಕೊಂಡಿದೆ.
‘‘ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ಸಮಾನವಾಗಿ ಲಭ್ಯವಾಗುವಂತೆ ಖಾತರಿ ನೀಡಲು 10 ಕೋಟಿ ಡೋಸ್ ಕೋವಿಡ್-19 ಲಸಿಕೆ ಉತ್ಪಾದಿಸುವ ಹಾಗೂ ಅಪಾಯ ಹಂಚಿಕೊಳ್ಳುವ ಪ್ರಮುಖ ಪಾಲುದಾರಿಕೆಗೆ ಬಿಲ್ ಗೇಟ್ಸ್, ಗೇಟ್ಸ್ ಫೌಂಡೇಶನ್ ಹಾಗೂ ಗವಿಸೇಥ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’’ ಎಂದು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಮಾಲಕ ಅದಾರ್ ಪೂನಾವಾಲ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಕೊರೋನ ಸೋಂಕಿನ ಪ್ರಮುಖ ಲಸಿಕೆಯ 2 ಹಾಗೂ 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ದೇಶದ ಔಷಧ ನಿಯಂತ್ರಕ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸಿಐಐಗೆ ಈ ಹಿಂದೆ ಅನುಮತಿ ನೀಡಿತ್ತು.
ಆಕ್ಸ್ಫರ್ಡ್ ಯುನಿವರ್ಸಿಟಿ (ಕೋವಿಶೀಲ್ಡ್) ಹಾಗೂ ನೊವ್ಯಾಕ್ಸ್ನ (ಆಸ್ಟ್ರಾಝೆನೇಕಾ, ಎನ್ವಿಎಕ್ಸ್ಕೊವಿ2373) ಲಸಿಕೆ ಉತ್ಪಾದಿಸಲು ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್ 1,125 ಕೋಟಿ ರೂಪಾಯಿ ನೀಡಿದೆ. ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಪೌಂಡೇಶನ್ನೊಂದಿಗೆ ಎಸ್ಐಐ ಗವಿ-ದಿ ವ್ಯಾಕ್ಸಿನ್ ಅಲೆಯನ್ಸ್ನೊಂದಿಗೆ ಕೂಡ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಸ್ಐಐ ಹೇಳಿದೆ.
ಮೂರು ಸಂಸ್ಥೆಗಳ ನಡುವಿನ ಈ ಒಪ್ಪಂದದ ಪ್ರಕಾರ 92 ಕೆಳ ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳಿಗೆ 3 ಡಾಲರ್ (ಅಂದಾಜು 224 ರೂಪಾಯಿ)ನಲ್ಲಿ 10 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ಉತ್ಪಾದಿಸಿ ಪೂರೈಸಲು ಎಸ್ಐಐಗೆ ನೆರವಾಗಲಿದೆ.