ಲಕ್ನೋ: ಬಾಲಕಿಯ ಅತ್ಯಾಚಾರ, ಹತ್ಯೆ
ಲಕ್ನೋ, ಆ. 25: ಉತ್ತರಪ್ರದೇಶದ ಲಖಿಮ್ಪುರ ಖೇರಿ ಜಿಲ್ಲೆಯಲ್ಲಿ ಮಂಗಳವಾರ 17 ವರ್ಷದ ಬಾಲಕಿಯ ವಿರೂಪಗೊಂಡ ಮೃತದೇಹ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಾವು ಆರೋಪಿಗಳನ್ನು ಗುರುತಿಸಲು ಹಾಗೂ ಬಂಧಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ಶೀಘ್ರದಲ್ಲಿ ಮಹತ್ವದ ತಿರುವು ದೊರಕುವ ನಿರೀಕ್ಷೆ ಇದೆ’’ ಎಂದು ಪೊಲೀಸ್ ವರಿಷ್ಠ ಸತೇಂದರ್ ಕುಮಾರ್ ಖೇರಿ ತಿಳಿಸಿದ್ದಾರೆ.
ಬಾಲಕಿ ಶಿಷ್ಯ ವೇತನದ ಅರ್ಜಿ ತುಂಬಿಸಲು ನಗರಕ್ಕೆ ತೆರಳುವುದಾಗಿ ಸೋಮವಾರ ಮನೆಯಿಂದ ತೆರಳಿದ್ದಳು. ಆದರೆ, ಆಕೆ ಮನೆಗೆ ಹಿಂದಿರುಗದೇ ಇದ್ದಾಗ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಬಾಲಕಿಯ ಕುಟುಂಬಿಕರು ತಿಳಿಸಿದ್ದಾರೆ.
‘‘ಏನು ಹೇಳುವುದು, ಯಾರ ಮೇಲೆ ಸಂಶಯಿಸುವುದು ಎಂಬುದು ನನಗೆ ನಿಜವಾಗಿಯೂ ತಿಳಿಯುತ್ತಿಲ್ಲ. ಆಕೆ ಸೋಮವಾರ ಬೆಳಗ್ಗೆ 8.30ಕ್ಕೆ ಇಲ್ಲಿಂದ ತೆರಳಿದ್ದಳು. ನಮಗೆ ಯಾರ ಮೇಲೂ ಸಂಶಯ ಇಲ್ಲ’’ ಎಂದು ಬಾಲಕಿಯ ಚಿಕ್ಕಪ್ಪ ಮಾಧ್ಯಮಕ್ಕೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ನಡೆಯುತ್ತಿರುವ ಎರಡನೇ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇದಾಗಿದೆ.