ಇದು ವಿನೂತನ ರೀತಿಯ ರಕ್ಷಣೆ: ಗೋವುಗಳಿರುವಂತೆಯೇ ಟ್ರಕ್ ಗೆ ಬೆಂಕಿಹಚ್ಚಿದ ಗೋರಕ್ಷಕರು !
ರಾಜಸ್ಥಾನ, ಜೂ.12: ಜಿಲ್ಲಾಧಿಕಾರಿಯ ಅನುಮತಿ ಪತ್ರದೊಂದಿಗೆ ಗೋಸಾಗಾಟ ಮಾಡುತ್ತಿದ್ದ ಮೂರು ಟ್ರಕ್ ಗಳನ್ನು ತಡೆದ ದುಷ್ಕರ್ಮಿಗಳು ಗೋವುಗಳು ಟ್ರಕ್ ನೊಳಗೆ ಇರುವಂತೆಯೇ ಟ್ರಕ್ ಗೆ ಬೆಂಕಿ ಹಚ್ಚಿದ ಘಟನೆ ರಾಜಸ್ಥಾನದ ಬಾರ್ಮರ್ ಎಂಬಲ್ಲಿ ನಡೆದಿದೆ.
ಅಕ್ರಮವಾಗಿ ಗೋಸಾಗಾಟ ನಡೆಸಲಾಗುತ್ತಿದೆ ಎಂದು ಆರೋಪಿಸಿ ಗೋರಕ್ಷಕರು 5 ಟ್ರಕ್ ಗಳನ್ನು ತಡೆದಿದ್ದರು. ಆದರೆ ಜೈಸಲ್ಮೇರ್ ನಿಂದ ತಮಿಳುನಾಡಿಗೆ ಗೋಸಾಗಾಟ ಮಾಡಲು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆಯಲಾಗಿತ್ತು.
ಬಾರ್ಮರ್ ನಲ್ಲಿ ಟ್ರಕ್ ಗಳನ್ನು ತಡೆದ ಗೋರಕ್ಷಕರು ಗೋವುಗಳು ಒಳಗಿರುವಂತೆಯೇ ಟ್ರಕ್ ಗಳಿಗೆ ಬೆಂಕಿ ಹಚ್ಚಿದರು. ಕೂಡಲೇ ಸ್ಥಳೀಯರು ಕಾರ್ಯಪ್ರವೃತ್ತರಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು 3 ಗಂಟೆಗಳ ಕಾಲ ಗೋರಕ್ಷಕರು ಬಂದ್ ಮಾಡಿದ್ದರು.
ಈ ಸಂದರ್ಭ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸಲು ಯತ್ನಿಸಿದ್ದು, ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಸುಮಾರು 4 ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 50 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ರಾಜಸ್ಥಾನದಿಂದ ಜಿಲ್ಲಾಧಿಕಾರಿಯ ಅನುಮತಿಯ ಮೇರೆಗೆ ಗೋಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.