ಇಲ್ಲಿ ಟ್ರಾಫಿಕ್ ನಿಯಂತ್ರಿಸುತ್ತಿದೆ 14 ಅಡಿ ಎತ್ತರದ ಯಂತ್ರಮಾನವ !
ಇಂದೋರ್,ಜೂ.20 : ಮಧ್ಯ ಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್ ನಗರದಲ್ಲಿನ ವಾಹನ ದಟ್ಟಣೆಯ ರಸ್ತೆಯೊಂದು ದೇಶದಲ್ಲಿಯೇ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ಪ್ರದೇಶವೆಂದೇ ಪ್ರಸಿದ್ಧ . ಇಂತಹ ಪ್ರದೇಶದಲ್ಲಿ ಒಂದು 14 ಅಡಿ ಎತ್ತರದ ರೋಬೋಟ್ ಟ್ರಾಫಿಕ್ ನಿಯಂತ್ರಿಸುತ್ತಿದೆಯೆಂದರೆ ಅಚ್ಚರಿಯೇ ಸರಿ.
ಐದು ಅಡಿ ಎತ್ತರದ ಪೀಠವೊಂದರಲ್ಲಿ ನಿಂತಿರುವ ಈ 14 ಅಡಿ ಎತ್ತರದ ರೋಬೋಟ್ ಕಳೆದ ಭಾನುವಾರ ನಗರದ ಎಂಆರ್9 ಹಾಗೂ ರಿಂಗ್ ರೋಡ್ ನಲ್ಲಿ ಕಾರ್ಯಾಚರಿಸುತ್ತಿರುವುದನ್ನು ನೋಡಿ ಜನರಿಗೆ ಅತ್ಯಾಶ್ಚರ್ಯವಾಗಿತ್ತು. ಜನರು ಈ ರೋಬೋಟ್ ಅನ್ನು ತದೇಕಚಿತ್ತದಿಂದ ನೋಡಿದರಲ್ಲದೆ ಅದರ ನಿರ್ದೇಶನವನ್ನೂ ಪಾಲಿಸಿದರು.
ಈ ರೋಬೋಟ್ ತನ್ನ ಅಕ್ಷರೇಖೆಯಲ್ಲಿ ಸುತ್ತುತ್ತದೆ ಹಾಗೂ ಕೈಗಳನ್ನು ಅತ್ತಿತ್ತ ಮಾಡುತ್ತದೆ. ಅದರೊಳಗೆ ಒಂದು ಮೈಕ್, ಕ್ಯಾಮರಾ ಹಾಗೂ ವೈ ಫೈ ಇದ್ದು ಇದು ಪೊಲೀಸ್ ಕಂಟ್ರೋಲ್ ರೂಂಗೆ ನೇರ ಸಂಪರ್ಕ ಸಾಧಿಸುತ್ತದೆ.
ಟ್ರಾಫಿಕ್ ನಿಯಮ ಉಲ್ಲಂಘಕರ ಫೋಟೋಗಳನ್ನು ತೆಗೆದು ಅದು ಇ-ಚಲನ್ ಕೂಡ ನೀಡಬಲ್ಲುದು. ಟ್ರಾಫಿಕ್ ಪೊಲೀಸರ ಬದಲು ರೋಬೋಟೊಂದು ಇದೇ ಪ್ರಥಮ ಬಾರಿಗೆ ಮಧ್ಯ ಪ್ರದೇಶದ ನಗರವೊಂದರಲ್ಲಿ ಕಾರ್ಯನಿರ್ವಹಿಸಿದೆ ಎಂದು ಡಿಐಜಿ ಹರಿ ನಾರಾಯಣ್ ಚಾರಿ ಹೇಳಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿದ್ದೇ ಆದಲ್ಲಿ ಮುಂದೆ ಇತರೆಡೆಗಳಲ್ಲಿಯೂ ಇದೇ ರೀತಿಯಲ್ಲಿ ರೋಬೋಟ್ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಒಂದು ರೋಬೋಟ್ ಇಬ್ಬರು ಕಾನ್ಸ್ಟೇಬಲ್ ಗಳ ಕೆಲಸ ನಿರ್ವಹಿಸುತ್ತದೆ. ಈ ರೋಬೋಟ್ ಅಭಿವೃದ್ಧಿ ಕಾರ್ಯವನ್ನು ನಗರ ಪೊಲೀಸರು ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂದೋರ್ ಇಲ್ಲಿನ ತಜ್ಞರು ನಡೆಸಿದ್ದರು. ಈ ಯೋಜನೆಯ ಬಗ್ಗೆ ಗೌಪ್ಯತೆ ಕಾಪಾಡಿ ಸಂಸ್ಥೆಯ ವಿವಿಧ ವಿದ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಎಲ್ಲಾ ತಜ್ಞರು ಹೇಳಿದ್ದಾರೆ.