ಬ್ಲೂವೇಲ್ ನಿಂದ ಪಾರಾಗಲು ಉತ್ತರ ಪತ್ರಿಕೆಯ ಮೊರೆಹೋದ ವಿದ್ಯಾರ್ಥಿ !
ಭೋಪಾಲ್, ಸೆ.22: ಬ್ಲೂವೇಲ್ ಚಾಲೆಂಜ್ ಎಂಬ ಮರಣಕ್ರೀಡೆಯ 49 ಹಂತಗಳನ್ನು ‘ಯಶಸ್ವಿಯಾಗಿ’ ಪೂರೈಸಿ, 50ನೆಯ ಹಂತವಾದ ಆತ್ಮಹತ್ಯೆಯ ಸವಾಲು ಸ್ವೀಕರಿಸುವ ಸಂದರ್ಭದಲ್ಲಿ 10ನೆಯ ತರಗತಿಯ ಓರ್ವ ವಿದ್ಯಾರ್ಥಿಯನ್ನು ಶಿಕ್ಷಕರು ರಕ್ಷಿಸಿದ ಘಟನೆ ವರದಿಯಾಗಿದೆ.
ಈ ವಿದ್ಯಾರ್ಥಿ ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ - ತಾನು ಈಗಾಗಲೇ 49 ಹಂತಗಳನ್ನು ದಾಟಿದ್ದೇನೆ. ಇದೀಗ 50ನೆಯ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮನೆಮಂದಿಯನ್ನು ಕೊಲ್ಲುವುದಾಗಿ ಅವರು ಬೆದರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದ. ಉತ್ತರಪತ್ರಿಕೆಯನ್ನು ಗಮನಿಸಿದ ಸಂಸ್ಕೃತ ಶಿಕ್ಷಕಿ ಹೇಮಲತಾ ಸ್ರಿಂಗಿ ಎಂಬವರು ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ಬಗ್ಗೆ ಶಾಲಾಡಳಿತ ಮಂಡಳಿ ಹಾಗೂ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಬಾಲಕ ಹಾಗೂ ಆತನ ಪೋಷಕರಿಗೆ ‘ಕೌನ್ಸೆಲಿಂಗ್’ ನಡೆಸಲಾಗಿದ್ದು ಆತ ಇನ್ನೆಂದೂ ಬ್ಲೂವೇಲ್ ಚಾಲೆಂಜ್ನ ಗೊಡವೆಗೇ ಹೋಗುವುದಿಲ್ಲ ಎಂದು ಭರವಸೆ ನೀಡಿದ್ದಾನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ರಾಜಸ್ತಾನದ ಜೋಧ್ಪುರದಲ್ಲಿ 17ರ ಹರೆಯದ ಹುಡುಗಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ರಕ್ಷಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಬಂದಿರುವುದಾಗಿ ಆಕೆ ತಿಳಿಸಿದ್ದಾಳೆ. ಭೋಪಾಲದ ಚಕ್ರವರ್ತಿ ರಾಜಗೋಪಾಲಾಚಾರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರಥಮ ವರ್ಷದ ವಿದ್ಯಾರ್ಥಿಯೋರ್ವ ತಾನು ಬ್ಲೂವೇಲ್ ಚಾಲೆಂಜ್ನ ಪ್ರಥಮ ಹಂತವನ್ನು ಯಶಸ್ವಿಯಾಗಿ ದಾಟಿರುವುದಾಗಿ ತನ್ನ ಮಿತ್ರರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶ ಕಳಿಸಿದ್ದಾನೆಂದು ವರದಿಯಾಗಿದೆ.