5,800 ನಕಲಿ ಕಂಪನಿಗಳ ಮೇಲೆ ಸರಕಾರದ ನಿಗಾ
ನೋಟು ಅಮಾನ್ಯದ ಬಳಿಕ ಠೇವಣಿ
ಹೊಸದಿಲ್ಲಿ,ಅ.6: ಕಪ್ಪುಹಣದ ವಿರುದ್ಧದ ತನ್ನ ದಾಳಿಯನ್ನು ಇನ್ನಷ್ಟು ಹರಿತಗೊಳಿಸಿರುವ ಸರಕಾರವು ತಾನು 5,800 ನಕಲಿ ಕಂಪನಿಗಳ ಕುರಿತು ಮಾಹಿತಿಗಳನ್ನು ಸಂಗ್ರಹಿಸಿದ್ದು, ಹೆಚ್ಚುಕಡಿಮೆ ಶೂನ್ಯ ಶಿಲ್ಕುಗಳನ್ನು ಹೊಂದಿದ್ದ ಈ ಕಂಪನಿಗಳ ಬ್ಯಾಂಕ್ ಖಾತೆಗಳಲ್ಲಿ ನೋಟು ಅಮಾನ್ಯದ ಬಳಿಕ 4,574 ಕೋ.ರೂ.ಗಳನ್ನು ಠೇವಣಿ ಮಾಡಲಾಗಿದೆ ಮತ್ತು ನಂತರ 4,552 ಕೋ.ರೂ.ಗಳನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಗುರುವಾರ ತಿಳಿಸಿದೆ.
ಈ ವರ್ಷದ ಆರಂಭದಲ್ಲಿ ರಿಜಿಸ್ಟ್ರಾರ್ ಆಫ್ ಕಂಪನೀಸ್ನಿಂದ ನೋಂದಣಿ ರದ್ದುಗೊಂಡಿರುವ ಶಂಕಿತ 2,09,032 ಕಂಪನಿಗಳ ಪೈಕಿ ಕೆಲವು ಕಂಪನಿಗಳ ಬ್ಯಾಂಕ್ ಖಾತೆ ನಿರ್ವಹಣೆಗಳು ಮತ್ತು ನೋಟು ಅಮಾನ್ಯದ ಬಳಿಕ ವಹಿವಾಟುಗಳ ಬಗ್ಗೆ 13 ಬ್ಯಾಂಕ್ಗಳಿಂದ ಮಹತ್ವದ ಮಾಹಿತಿಗಳು ಲಭಿಸಿವೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಸರಕಾರವು ನೋಂದಣಿ ರದ್ದುಗೊಂಡಿರುವ ಎರಡು ಲಕ್ಷಕ್ಕೂ ಅಧಿಕ ಕಂಪನಿಗಳ ಬ್ಯಾಂಕ್ ಖಾತೆಗಳ ನಿರ್ವಹಣೆಯ ಮೇಲೆ ನಿರ್ಬಂಧಗಳನ್ನು ಹೇರಿತ್ತು.
ಕಪ್ಪುಹಣ ಮತ್ತು ನಕಲಿ ಕಂಪನಿಗಳ ವಿರುದ್ಧದ ಹೋರಾಟದಲ್ಲಿ ಇದೊಂದು ಪ್ರಮುಖ ಸಾಧನೆಯಾಗಿದೆ ಎಂದು ಬಣ್ಣಿಸಿರುವ ಹೇಳಿಕೆಯು, ಮೊದಲ ಹಂತದ ಮಾಹಿತಿಯು 5,800 ಕಂಪನಿಗಳ 13,140 ಖಾತೆಗಳಿಗೆ ಸಂಬಂಧಿಸಿದೆ. ಕೆಲವು ಕಂಪನಿಗಳು ನೂರಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಒಂದು ಕಂಪನಿಯಂತೂ 2,134 ಬ್ಯಾಂಕ್ ಖಾತೆಗಳನ್ನು ಹೊಂದಿದೆ. ಇತರ ಕೆಲವು ಕಂಪನಿಗಳು 900,300 ಇತ್ಯಾದಿ ಸಂಖ್ಯೆಗಳಲ್ಲಿ ಖಾತೆಗಳನ್ನು ಹೊಂದಿವೆ ಎಂದಿದೆ.
ಸಾಲದ ಖಾತೆಗಳನ್ನು ಪ್ರತ್ಯೇಕಿಸಿದ ಬಳಿಕ ಈ ಕಂಪನಿಗಳು 2016,ನ.8ಕ್ಕೆ ಇದ್ದಂತೆ ತಮ್ಮ ಖಾತೆಗಳಲ್ಲಿ ಕೇವಲ 22.05 ಕೋ.ರೂ.ಗಳ ಶಿಲ್ಕು ಹೊಂದಿದ್ದವು ಮತ್ತು ಸಾಲದ ಖಾತೆಗಳೊಂದಿಗೆ ಈ ಕಂಪನಿಗಳು ತಮ್ಮ ಖಾತೆಗಳಲ್ಲಿ ಋಣಾತ್ಮಕ 80.79 ಕೋ.ರೂ. ಗಳ ಆರಂಭಿಕ ಶಿಲ್ಕು ಹೊಂದಿದ್ದವು ಎನ್ನುವುದನ್ನು ಹೇಳಿಕೆಯು ಬೆಟ್ಟು ಮಾಡಿದೆ.
2016,ನ.8ರಂದು ತಮ್ಮ ಖಾತೆಗಳಲ್ಲಿ ಅಲ್ಪ ಅಥವಾ ಋಣಾತ್ಮಕ ಶಿಲ್ಕುಗಳನ್ನು ಹೊಂದಿದ್ದ ಈ ಕಂಪನಿಗಳು ನೋಂದಣಿ ರದ್ದಾಗುವವರೆಗೂ ಕೋಟ್ಯಂತರ ರೂಪಾಯಿಗಳ ಠೇವಣಿ ಮತ್ತು ವಾಪಸಾತಿಗಳನ್ನು ನಡೆಸಿದ್ದು, ಬಳಿಕ ಈ ಖಾತೆಗಳಲ್ಲಿ ಚಿಲ್ಲರೆ ಶಿಲ್ಕುಗಳನ್ನು ಮಾತ್ರ ಬಿಟ್ಟಿದ್ದವು ಎಂದು ಹೇಳಿಕೆಯು ತಿಳಿಸಿದೆ.