ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಯಾವುದು ಗೊತ್ತೇ?
ಹೊಸದಿಲ್ಲಿ, ಅ.17: ದೇಶದ ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2015-16ರಲ್ಲಿ ಪಕ್ಷದ ಘೋಷಿತ ಆಸ್ತಿ 894 ಕೋಟಿ ರೂಪಾಯಿ ಆಗಿದೆ ಎಂದು ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಟಿಸಿದೆ.
ಇದೇ ಅವಧಿಯಲ್ಲಿ 759 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡ ಕಾಂಗ್ರೆಸ್ ಪಕ್ಷ ಎರಡನೆ ಸ್ಥಾನದಲ್ಲಿದೆ. ಬಿಜೆಪಿ ಇದೇ ಅವಧಿಯಲ್ಲಿ 25 ಕೋಟಿ ರೂ. ಸಾಲವನ್ನು ತೋರಿಸಿದ್ದರೆ, ಕಾಂಗ್ರೆಸ್ನ ಸಾಲದ ಪ್ರಮಾಣ 329 ಕೋಟಿ ರೂಪಾಯಿ.
2004-05ರಿಂದ 2015-16 ವರೆಗಿನ ಅವಧಿಯಲ್ಲಿ ರಾಜಕೀಯ ಪಕ್ಷಗಳು ಘೋಷಿಸಿದ ಆಸ್ತಿ ಮತ್ತು ಸಾಲದ ಘೋಷಣೆಯ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ಆಸ್ತಿಯಲ್ಲಿ ಸ್ಥಿರಾಸ್ತಿ, ನಗದು, ವಾಹನಗಳು, ಹೂಡಿಕೆ, ಠೇವಣಿ, ನೀಡಿದ ಸಾಲ ಮತ್ತು ಮುಂಗಡ ಸೇರಿದ್ದರೆ, ಸಾಲದಲ್ಲಿ ಬ್ಯಾಂಕ್ ಸಾಲ, ಭದ್ರತಾ ರಹಿತ ಸಾಲ ಮತ್ತು ಓವರ್ಡ್ರಾಫ್ಟ್ ಸೇರಿದೆ.
ಎಡಿಆರ್ 11 ವರ್ಷಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದ್ದು, 2014-15ಕ್ಕಿಂತ ಮೊದಲು ಕಾಂಗ್ರೆಸ್ ಅತ್ಯಧಿಕ ಆಸ್ತಿ ಹೊಂದಿತ್ತು. ಬಳಿಕದ ವರ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿದೆ.
ಬಂಡವಾಳ ಅಥವಾ ಮೀಸಲು ನಿಧಿಯನ್ನು ಪರಿಗಣಿಸಿದರೆ, ಅಂದರೆ ಒಟ್ಟು ಆಸ್ತಿಯಿಂದ ಸಾಲವನ್ನು ಕಳೆದು ವೆಚ್ಚಕ್ಕೆ ಲಭ್ಯವಿರುವ ನಿಧಿಯನ್ನು ಪರಿಗಣಿಸಿದರೆ, ಬಿಜೆಪಿ 869 ಕೋಟಿ ರೂಪಾಯಿ ನಿಧಿ ಹೊಂದಿದೆ. ಬಹುಜನ ಸಮಾಜ ಪಕ್ಷ 557 ಕೋಟಿ ರೂ. ಹಾಗೂ ಸಿಪಿಐ 432 ಕೋಟಿ ರೂ. ಹೊಂದಿವೆ.
ಕಳೆದ ಹನ್ನೊಂದು ವರ್ಷಗಳಲ್ಲಿ ಬಿಜೆಪಿಯ ಮೀಸಲು ನಿಧಿ ಶೇಕಡ 700ರಷ್ಟು ಏರಿಕೆ ಕಂಡಿದೆ. ಕಾಂಗ್ರೆಸ್ನ ನಿಧಿ ಕೇವಲ ಶೇ.169ರಷ್ಟು ಹೆಚ್ಚಿದೆ. ಆದರೆ ಅತ್ಯಧಿಕ ಪ್ರಮಾಣದ ಏರಿಕೆಯಾಗಿರುವುದು ತೃಣಮೂಲ ಕಾಂಗ್ರೆಸ್ (ಶೇ.13,447) ಮತ್ತು ಬಿಎಸ್ಪಿ (ಶೇ.1,194) ಪಕ್ಷಗಳದ್ದು ಎಂದು ವರದಿ ಹೇಳಿದೆ.