ಬಿಲ್ಲವರು - ಮುಸ್ಲಿಮರು ಪರಸ್ಪರ ವೈರಿಗಳೇ ? | Vartha Bharati- ವಾರ್ತಾ ಭಾರತಿ

ಬಿಲ್ಲವರು - ಮುಸ್ಲಿಮರು ಪರಸ್ಪರ ವೈರಿಗಳೇ ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದೀಚೆಗೆ ನಡೆದ ಕೋಮುಗಲಭೆಗಳ ಅಥವಾ ಕೋಮು ಆಧಾರಿತ ಕೊಲೆ, ಹಲ್ಲೆಗಳ ಚರಿತ್ರೆಯನ್ನು ಅವಲೋಕಿಸಿ ನೋಡಿ, ಅಂಕಿ ಅಂಶಗಳನ್ನಿಟ್ಟುಕೊಂಡು ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದರೆ ಅತೀ ಹೆಚ್ಚು ಕೊಲೆಗಳು ನಡೆದದ್ದು ಬಿಲ್ಲವ ಮತ್ತು ಮುಸ್ಲಿಂ ಯುವಕರದ್ದು, ಅತೀ ಹೆಚ್ಚು ಜೈಲು ಸೇರಿದವರ ಪಟ್ಟಿಯಲ್ಲಿಯೂ ಇವೆರಡು ಸಮುದಾಯದ ಯುವಕರಿಗೇ ಅಗ್ರಪಾಲು.

 ಇವುಗಳ ಹಿಂದೆ ಯಾರಿದ್ದಾರೆ ಎಂಬ ವಿವರಣೆಯೇ ಅಗತ್ಯವಿಲ್ಲವೆನ್ನುವಷ್ಟು ಅದು ಜನಜನಿತ. ಇದು ಈಗೀಗ ಎಷ್ಟು ಅತಿರೇಕಕ್ಕೆ ತಲುಪಿದೆಯೆಂದರೆ ಹಿಂದುತ್ವ ಫ್ಯಾಶಿಸಂನ ಅಮಲಿಗೊಳಗಾಗಿ ಬಿಲ್ಲವರೇ ಬಿಲ್ಲವರನ್ನು ಕೊಚ್ಚಿ ಕೊಲೆಗಯ್ಯುವಷ್ಟು. ಮುಸ್ಲಿಂ ಮತ್ತು ಬಿಲ್ಲವರೇ ಅವಿಭಜಿತ ಜಿಲ್ಲೆಯ ಅತೀ ದೊಡ್ಡ ಸಮುದಾಯಗಳೂ ಹೌದು. ನನಗೆ ಅನೇಕ ಬಾರಿ ಅನಿಸುವುದಿದೆ, ಇಲ್ಲಿನ ಕೋಮುಗಲಭೆಗಳನ್ನು ಹಿಂದೂ ಮುಸ್ಲಿಂ ಗಲಭೆಗಳೆನ್ನುವುದಕ್ಕಿಂತ ಬಿಲ್ಲವ-ಮುಸ್ಲಿಮ್ ಗಲಭೆಗಳೆನ್ನುವುದೇ ಹೆಚ್ಚು ಸೂಕ್ತ ಎಂದು.

ಹೀಗೆ ಇವೆರಡೂ ಸಮುದಾಯಗಳು ಪರಸ್ಪರರ ರಕ್ತ ಚೆಲ್ಲಾಡಲು, ರುಂಡ ಚೆಂಡಾಡಲು ಯಾವುದಾದರೂ ಬಲವಾದ ಚಾರಿತ್ರಿಕ ಕಾರಣಗಳಿವೆಯೇ ಎಂದು ನೋಡಿದರೆ ಅದೂ ಇಲ್ಲ. ಈ ಎರಡು ಸಮುದಾಯಗಳು ಆಜನ್ಮ ವೈರಿಗಳೂ ಅಲ್ಲ. ಬದಲಾಗಿ ಈ ಎರಡು ಸಮುದಾಯಗಳ ಮಧ್ಯೆ ಚಾರಿತ್ರಿಕವಾಗಿ ಮಧುರ ಸಂಬಂಧಗಳಿತ್ತು. ಒಂದೆರಡು ಚಾರಿತ್ರಿಕ ಉದಾಹರಣೆಗಳನ್ನು ನೋಡೋಣ.

ಮಲಬಾರ್ ಪ್ರಾಂತದ ಕುಪ್ರಸಿದ್ಧ 'ಮುಲಕ್ಕರ' ಅರ್ಥಾತ್ 'ಸ್ತನತೆರಿಗೆ'ಯ ಬಗ್ಗೆ ಹೆಚ್ಚಿನವರು ಕೇಳಿರಬಹುದು, ಓದಿರಬಹುದು.ಕೆಳವರ್ಗದ ಅದರಲ್ಲೂ ಬಹುಮುಖ್ಯವಾಗಿ ಕೇರಳದ ಪ್ರಮುಖ ಹಿಂದುಳಿದ ಸಮುದಾಯಗಳಲ್ಲೊಂದಾದ ಈಳವ ಸಮುದಾಯದ ಮಹಿಳೆಯರೇ ಅದರ ಬಹುದೊಡ್ಡ ಬಲಿಪಶುಗಳಾಗಿದ್ದರು. ಈಳವರೆಂದರೆ ಇದೇ ಬಿಲ್ಲವರೇ ಹೊರತು ಬೇರೆ ಯಾರೂ ಅಲ್ಲ.

ತಿರುವಾಂಕೂರಿನ ಮೇಲುಜಾತಿ ರಾಜಸಂಸ್ಥಾನ ನಂಬೂದಿರಿ ಬ್ರಾಹ್ಮಣ ಶಾಹಿಯ ಕೊಳಕು ಅಭಿರುಚಿಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಹಿಂದುಳಿದ ಈಳವ ಸಮುದಾಯದ ಮೇಲೆ ಅಮಾನವೀಯ ಸ್ತನ ತೆರಿಗೆಯನ್ನು ಹೇರಿತ್ತು. ಈಳವ ಮಹಿಳೆಯರು ತಮ್ಮ ಸ್ತನಗಳನ್ನು ತೆರೆದೇ ನಡೆದಾಡಬೇಕಿತ್ತು. ಒಂದು ವೇಳೆ ಸ್ತನ ಮುಚ್ಚಿದರೆ ಅದಕ್ಕಾಗಿ ಮುಲಕ್ಕರ ಅಥವಾ ಸ್ತನ ತೆರಿಗೆಯನ್ನು ಕಟ್ಟಬೇಕಿತ್ತು. ಅದರ ವಿರುದ್ಧ ಮೊತ್ತ ಮೊದಲು ಕಾನೂನು ಜಾರಿ ಮಾಡಿದ್ದು ಇಂದು ಸಂಘ ಪರಿವಾರದ ಚಿತಾವಣೆಗೊಳಗಾಗಿ ಕೆಲವು ಬಿಲ್ಲವ ಯುವಕರು ಧ್ವೇಷಕಾರುತ್ತಿರುವ ಟಿಪ್ಪುಸುಲ್ತಾನ್.

ಟಿಪ್ಪು ಸುಲ್ತಾನ್ ಆಡಳಿತಾವಧಿಯಲ್ಲಿ ಮಲಬಾರ್ ಪ್ರಾಂತವು ಮೈಸೂರು ಸಂಸ್ಥಾನಕ್ಕೊಳಪಟ್ಟಿತ್ತು. ಮಲಬಾರ್ ಪ್ರದೇಶದಲ್ಲಿ ಒಮ್ಮೆ ತಿರುಗಾಡುತ್ತಿದ್ದಾಗ ಅಲ್ಲಿ ಕೆಲವು ಮಹಿಳೆಯರು ತಮ್ಮ ಎದೆಯನ್ನು ತೆರೆದೇ ನಡೆಯುತ್ತಿದ್ದುದನ್ನು ಕಂಡು ಟಿಪ್ಪುವಿಗೆ ಅತೀವ ವೇದನೆಯಾಯಿತು. ಅದರ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವಂತೆ ಟಿಪ್ಪು1787ರಲ್ಲಿ ಮಲಬಾರ್ ಪ್ರಾಂತದ ಗವರ್ನರ್‌ನಿಗೆ ಬರೆದ ಪತ್ರ ಇಂತಿದೆ.

''ಮಲಬಾರ್ ಪ್ರದೇಶದ ಕೆಲವು ಹೆಣ್ಮಕ್ಕಳು ತಮ್ಮ ಎದೆಯನ್ನು ತೆರೆದುಕೊಂಡೇ ಅಡ್ಡಾಡುವುದನ್ನು ಕಂಡು ನನಗೆ ತುಂಬಾ ದುಃಖವಾಯಿತು. ಅಂತಹ ದೃಶ್ಯವು ನೋಟವನ್ನು ಮತ್ತು ಸೌಂದರ್ಯದ ತತ್ವವನ್ನು ಘಾಸಿಗೊಳಿಸುತ್ತದೆ. ಅದು ಸದಭಿರುಚಿ ಮತ್ತು ನೈತಿಕತೆಗೆ ವಿರುದ್ಧವಾದುದು. ಈ ಹೆಣ್ಮಕ್ಕಳು ಒಂದು ನಿರ್ದಿಷ್ಟ ತುಳಿತಕ್ಕೊಳಗಾದ ಸಮುದಾಯದವರೆಂದೂ ಅವರು ಸೊಂಟದ ಮೇಲ್ಭಾಗವನ್ನು ತೆರೆದೇ ಇರುವುದು ಅವರ ಪದ್ಧತಿಯೆಂದು ಹೇಳಿದ್ದೀರಿ. ಅಂದಿನಿಂದ ನನಗೆ ಆಶ್ಚರ್ಯವಾಗುತ್ತಿದೆ. ಆದರೆ ಇದು ಅನಾದಿ ಕಾಲದಿಂದಲೂ ಬಂದ ಪದ್ಧತಿಯ ಪ್ರಶ್ನೆಯೋ ಅಥವಾ ಆ ಪಂಗಡದ ಬಡತನದ ಪ್ರಶ್ನೆಯೋ? ಅದು ಬಡತನದ ಪ್ರಶ್ನೆಯಾದರೆ ಅವರ ಹೆಣ್ಮಕ್ಕಳು ಕ್ರಮಬದ್ಧವಾಗಿ ಬಟ್ಟೆ ಧರಿಸಲು ಸಾಧ್ಯವಾಗುವಂತೆ ನೀವು ಅವರ ಆರ್ಥಿಕ ಆವಶ್ಯಕತೆಗಳೆಲ್ಲವನ್ನೂ ಪೂರೈಸಬೇಕೆಂಬುವುದು ನನ್ನ ಅಭಿಲಾಷೆ.''

''ಒಂದುವೇಳೆ ಅದು ಪುರಾತನ ಕಾಲದಿಂದಲೂ ಆಚರಣೆಯಲ್ಲಿರುವ ಪದ್ಧತಿಯಾಗಿದ್ದರೆ ನೀವು ಅವರ ಧಾರ್ಮಿಕ ಮುಖಂಡರ ಮೇಲೆ ನಿಮ್ಮ ಪ್ರಭಾವವನ್ನು ಬಳಸಿ ಅಂತಹ ದುಷ್ಟ ಸಂಪ್ರದಾಯಗಳನ್ನು ಕೊನೆಗೊಳಿಸಿರಿ. ಈ ವಿಚಾರದಲ್ಲಿ ನೀವು ಮಂಡಿಸುವ ವಾದಗಳು ಆ ನೀಚ ಸಂಪ್ರದಾಯವು ನಿಂತಿರುವ ಮೂಲಭೂತ ಅಂಶಗಳ ಮೇಲೆ ಅವಲಂಬಿತವಾಗಿರಲಿ. ಆದರೆ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಈ ಸಂಪ್ರದಾಯಗಳು ಹೆಣ್ಮಕ್ಕಳ ಮೇಲೆ ವಿಧಿಸಿರುವ ನಿರ್ಬಂಧನೆಗಳನ್ನು ಗಂಡಸರ ಮೇಲೆಯೂ ವಿಧಿಸಿದೆಯೇ? ಇಲ್ಲದಿದ್ದರೆ ಹೆಣ್ಮಕ್ಕಳ ಮೇಲೆ ವಿಧಿಸಿರುವ ಇಂತಹ ಸಂಪ್ರದಾಯವು ಪಕ್ಷಪಾತದಿಂದ ಕೂಡಿದುದು. ಜನಾಂಗದ ಬಡತನದಿಂದ ಈ ಸಂಪ್ರದಾಯ ಹುಟ್ಟಿಕೊಂಡಿರುವುದೇ? ಈ ಎರಡೂ ಸಂದರ್ಭಗಳಲ್ಲಿ ರಾಜ್ಯಾಧಿಕಾರವು ಮಧ್ಯಪ್ರವೇಶಿಸಬಹುದು. ಒಂದುವೇಳೆ ಈ ಸಂಪ್ರದಾಯವು ಬಡತನ ಅಥವಾ ಶಿಕ್ಷೆಯ ದೆಸೆಯಿಂದ ಹುಟ್ಟಿಕೊಂಡಿರದೆ, ಸನಾತನ ಸಂಪ್ರದಾಯದಿಂದ ಹುಟ್ಟಿಕೊಂಡಿದ್ದರೂ ಆ ಬಗ್ಗೆ ಈಗಿನ ಪೀಳಿಗೆಯ ಅಭಿಪ್ರಾಯವೇನು? ಅವರು ತಮ್ಮ ತಾಯಂದಿರು ಅರೆನಗ್ನವಾಗಿ ನೋಡುಗರ ಅಪಹಾಸ್ಯ, ಅಸಹ್ಯಗಳಿಗೆ ಗುರಿಯಾಗುವಂತೆ ಮಾಡಿದ ಈ ನೀಚ ಸಂಪ್ರದಾಯದ ಕುರಿತು ಏನನ್ನುತ್ತಾರೆ?''
(ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್, ಪುಟ ಸಂಖ್ಯೆ : 226, ಭಗವಾನ್ ಎಸ್. ಗಿದ್ವಾನಿ)

ಕೇರಳದ ಪ್ರಸಿದ್ಧ ಸಂತ, ಸಮಾಜ ಸುಧಾರಕ ಸ್ವಾಮಿ ನಾರಾಯಣ ಗುರುಗಳು ಹುಟ್ಟುವುದಕ್ಕಿಂತ ಸುಮಾರು ಮುಕ್ಕಾಲು ಶತಮಾನದ ಹಿಂದೆಯೇ ಇಂತಹ ನೀಚ ಪದ್ಧತಿಯ ವಿರುದ್ಧ ಕಾನೂನು ಜಾರಿ ಮಾಡಿದವರು ಟಿಪ್ಪು ಸುಲ್ತಾನ್. ಇಂತಹ ಕಾನೂನು ಜಾರಿ ಮಾಡಿ ಹನ್ನೆರಡು ವರ್ಷಗಳೊಳಗೆ ಟಿಪ್ಪು ಹುತಾತ್ಮರಾದರು. ಆ ಬಳಿಕ ಪುನಃ ಹಳೆಯ ನೀಚ ಪದ್ಧತಿಯು ಮುಂದುವರಿಯಿತು. ಮತ್ತೆ ಆ ನೀಚ ಪದ್ಧತಿಯ ವಿರುದ್ಧ ಕಾನೂನು ಜಾರಿ ಮಾಡಲು ಒಂದು ಶತಮಾನವೇ ಬೇಕಾಯಿತು.

 ಬಿಲ್ಲವ ಸಮುದಾಯದ ಪರಮೋಚ್ಚ ಗುರುಗಳಾದ ಸ್ವಾಮಿ ನಾರಾಯಣ ಗುರುಗಳು ಮುಸ್ಲಿಮರನ್ನು ದ್ವ್ವೆೇಷಿಸಲಿಲ್ಲ, ಬದಲಾಗಿ ಪ್ರೀತಿಸಿದರು. ಅವರು ಬಂಡೆದ್ದದ್ದು ಬ್ರಾಹ್ಮಣ ಶಾಹಿ ಶಕ್ತಿಗಳ ವಿರುದ್ಧ. ದುರಂತವೇನೆಂದರೆ ಇಂದು ಬಿಲ್ಲವ ಯುವ ಸಮೂಹ ಗುರುಗಳು ಬಂಡೆದ್ದ ಬ್ರಾಹ್ಮಣ ಶಾಹಿ ಶಕ್ತಿಗಳ ಕುತಂತ್ರಕ್ಕೆ ಬಲಿಬಿದ್ದು ಮುಸ್ಲಿಮರನ್ನು ತಮ್ಮ ಆಜನ್ಮ ವೈರಿಗಳಂತೆ ದ್ವೇಷಿಸುತ್ತಿದೆ. ಸ್ವಾಮಿ ನಾರಾಯಣ ಗುರುಗಳು ಇಸ್ಲಾಮಿನ ಬಗ್ಗೆ ಎಂತಹ ಉದಾತ್ತ ಪ್ರೀತಿ ಹೊಂದಿದ್ದರು ಎಂಬುವುದಕ್ಕೆ ಅವರು ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಬರೆದ ಒಂದು ಕವನದ ನಾಲ್ಕು ಸಾಲುಗಳು ಇಂತಿವೆ.
''ಪುರುಷಾಕೃತಿ ಪೂಂಡ ದೈವಮೋ/ ನರವಿಭ್ಯಾಕೃತಿ ಪೂಂಡ ಧರ್ಮಮೋ/
ಪರಮೇಶ ಪವಿತ್ರ ಪುತ್ರನೋ/ಕರುಣಾಮಾನ್ ನಬಿ ಮುತ್ತು ರತ್ನಮೋ...''

ಭಾವಾರ್ಥ: ಪುರುಷ ರೂಪ ತಾಳಿಬಂದ ದೇವನೋ/ಮನುಷ್ಯಾಕೃತಿಯಲ್ಲಿ ಅವತರಿಸಿದ ಧರ್ಮವೋ/ಪರಮೇಶ್ವರನ ಪವಿತ್ರ ಪುತ್ರನೋ/ ಕರುಣಾಳು ಪ್ರವಾದಿ ಮುತ್ತು ರತ್ನವೋ...

ಸ್ವಾಮಿ ನಾರಾಯಣ ಗುರುಗಳ ಶಿಷ್ಯನಾಗಿದ್ದ ತತ್ವಜ್ಞಾನಿ ಕವಿ ಕುಮಾರನ್ ಆಶಾನ್ ಈಳವ ಸಮುದಾಯದ ಮಹಾನ್ ಕ್ರಾಂತಿಕವಿಯಾಗಿದ್ದರು. ಅವರನ್ನು ಕೇರಳದಲ್ಲಿ ಮಹಾಕವಿಯೆಂದೇ ಗೌರವಿಸಲಾಗುತ್ತದೆ. ಅವರು ಕೂಡಾ ಬ್ರಾಹ್ಮಣ್ಯ ಶಕ್ತಿಗಳ ವಿರುದ್ಧ ಬಂಡೆದ್ದು ಬರೆದ ಕವಿ. ಅವರು ಭಾರತಕ್ಕೆ ಇಸ್ಲಾಮಿನ ಆಗಮನದ ಕುರಿತು ತನ್ನೊಂದು ಕವಿತೆಯಲ್ಲಿ ಹೀಗೆ ಬರೆಯುತ್ತಾರೆ.

ಆಟ್ಟುಮ್, ವಿಲಕ್ಕುಮ್, ವಯಿಯಾಟ್ಟುಮ್/ ಮಟ್ಟುಮೀ ಕೂಟರ್ ಸಹಿಚ್ಚು ಪೊರುದಿಮುಟ್ಟಿ/ವಿಟ್ಟದಾಮ್ ಹಿಂದು ಮದಮ್/ಜಾದಿಯಿಲ್ ತಾನ್ನ ಕೆಟ್ಟು ಕಯಿಙ ನಂಬೂದಿರಿ ಮದಮ್/ ಕೇರಳತ್ತಿಂಗಳ್ ಮುಸಲ್ಮಾನ್ ಮಾರ್/
ಪಶ್ಚಿಮ ಪಾರಂಙಳಿಲ್ ನಿನ್ನೋ/
ವನ್ ಕಡಲ್ ಚೀರುಮ್ ತಿರಗಳ್ ಕಡನ್ನೋ/ ಹಿಮಾಲಯಮೇರಿ ವನ್ನವರೇರೆಯಿಲ್ಲ/ರೇರೆಚ್ಚೆರುಮನ್ ಪೋಯಿ ತೊಪ್ಪಿಯಿಟ್ಟಾಲ್/ಚಿತ್ರಯವನೆತ್ತಿ ಚಾರುತ್ತರುತ್ತಿಡಾಮ್ / ಚೆಟ್ಟುಮ್ ಪೇಡಿಕ್ಕಂಡ ತಂಬುರಾರೆ......

ಸಾರಾಂಶ: ಓಡಿಸುವುದನ್ನು, ತಡೆಯುವುದನ್ನು, ದಾರಿಯಲ್ಲಿ ಕಂಡಾಗ ಅಟಕಾಯಿಸುವುದನ್ನು, ಮತ್ತೆಲ್ಲವನ್ನೂ ಸಹಿಸಿ ತಾಳ್ಮೆಗೆಟ್ಟ ಆ ಜನಗಳು ಹಿಂದೂ ಧರ್ಮವನ್ನು ತ್ಯಜಿಸಿದರು. ಜಾತಿ ಪದ್ಧತಿಯಲ್ಲಿ ಕೆಟ್ಟು ಕೆರ ಹಿಡಿದ ನಂಬೂದಿರಿಗಳ ಧರ್ಮವನ್ನು ತ್ಯಜಿಸಿದರು. ಕೇರಳದ ಮುಸ್ಲಿಮರ್ಯಾರೂ ಪಶ್ಚಿಮ ಘಟ್ಟಗಳ ದಾಟಿ ಬಂದವರಲ್ಲ, ಭೋರ್ಗರೆವ ಕಡಲ ತೆರೆಗಳ ದಾಟಿ ಬಂದವರೂ ಅಲ್ಲ, ಹಿಮಾಲಯ ಏರಿ ಬಂದವರೂ ಅಲ್ಲ. ಮೇಲುಜಾತಿ ನೀಚರನ್ನು ಕಂಡಾಗ ದಾರಿ ತಪ್ಪಿಸಿ ನಿಲ್ಲುತ್ತಿದ್ದವರು ಹೋಗಿ ಶಿರವಸ್ತ್ರ ಧರಿಸಿ ( ಇಸ್ಲಾಂ ಸ್ವೀಕರಿಸಿ) ಇನಿತೂ ಅಂಜದೇ ಧೈರ್ಯದಿ ನಿಂತವರು.

ಇವು ಮುಸ್ಲಿಂ- ಬಿಲ್ಲವರ ಮಧ್ಯೆ ಇದ್ದಂತಹ ಚಾರಿತ್ರಿಕ ಮಧುರ ಸಂಬಂಧಗಳ ಕೆಲವು ಸ್ಯಾಂಪಲ್ ಗಳಷ್ಟೆ.
 
ಮುಂಬೈಯ ಪ್ರಸಿದ್ಧ ಅಂಬೇಡ್ಕರಿಸ್ಟ್- ಮಾರ್ಕಿಸ್ಟ್ ಚಿಂತಕ ಡಾ. ಆನಂದ ತೇಲ್ ತುಂಬ್ಡೆಯವರು ಹೀಗೆ ಬರೆಯುತ್ತಾರೆ. ''ಮುಸ್ಲಿಮರು ಮತ್ತು ಕೆಳಜಾತಿಯವರನ್ನು ಪರಸ್ಪರ ಹೊಡೆದಾಡಿಸಿ ಕೊಲ್ಲುವ ಮೂಲಕ ಬ್ರಾಹ್ಮಣ ಶಾಹಿ ಶಕ್ತಿಗಳು ತಮ್ಮ ಪುರಾತನ ಗುಪ್ತ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುತಿವೆೆ. ಭಾರತದ ಬಹುತೇಕ ಮುಸ್ಲಿಮರು ಇಲ್ಲಿನ ಕೆಳವರ್ಗದವರೇ ಆಗಿದ್ದಾರೆ. ಅವರು ಇದೇ ಬ್ರಾಹ್ಮಣ ಶಾಹಿಗಳ ಶೋಷಣೆ ತಡೆಯಲಾರದೇ ಇಸ್ಲಾಂಗೆ ಮತಾಂತರಗೊಂಡವರು. ಮೂಲತಃ ಒಂದೇ ಸಮುದಾಯವಾಗಿರುವ ನಮ್ಮನ್ನು ನಮ್ಮವರೊಂದಿಗೆ ಕಚ್ಚಾಡಿಸುತ್ತಿದ್ದಾರೆ.''

ಈ ಸತ್ಯಗಳನ್ನು ಹಿಂದುತ್ವ ಫ್ಯಾಶಿಸಂನ ಕಪಿಮುಷ್ಟಿಯೊಳಗೆ ಬಂಧಿತರಾಗಿ ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿರುವ ಕೆಳವರ್ಗದ (ಕರಾವಳಿ ಕರ್ನಾಟಕದ ಬಿಲ್ಲವ) ಯುವಜನತೆ ಅರ್ಥೈಸಬೇಕು. ಅಂತೆಯೇ ಪ್ರತೀಕಾರದ ಭಾವನೆ ತೋರುತ್ತಿರುವ ಮುಸ್ಲಿಂ ಯುವಜನತೆಯೂ ಅರ್ಥೈಸಬೇಕು. ಎಲ್ಲಿಯವರೆಗೆ ನಾವಿದನ್ನು ಅರ್ಥೈಸುವುದಿಲ್ಲವೋ ಅಲ್ಲಿಯವರೆಗೆ ದಕ್ಷಿಣ ಕನ್ನಡದಲ್ಲಿ ಶಾಂತಿಯೆಂಬುವುದು ಮರೀಚಿಕೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top