ಮಾರ್ಕ್ಸ್ ಹಾಗೂ ಅಂಬೇಡ್ಕರ್ ತತ್ವಗಳ ಸಂಯೋಜನೆಗಿದು ಸಕಾಲ

ಜಾತಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಲು ಹಾಗೂ ವರ್ಗ ವ್ಯವಸ್ಥೆಯನ್ನು ರದ್ದುಪಡಿಸುವುದಕ್ಕಾಗಿ ಏಕಾತ್ಮಕವಾದ ಸಿದ್ಧಾಂತವೊಂದನ್ನು ರೂಪಿಸುವುದಕ್ಕಾಗಿ ಭಾರತವು ಮಾರ್ಕ್ಸ್ ಹಾಗೂ ಅಂಬೇಡ್ಕರ್ ತತ್ವಗಳನ್ನು ಪರಸ್ಪರ ಸಂಯೋಜಿಸಬೇಕಾದ ಅಗತ್ಯವಿದೆ.

ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್)ವು ಇತ್ತೀಚೆಗೆ 'ಜೈ ಭೀಮ್-ಲಾಲ್ ಸಲಾಂ' ಘೋಷಣೆಯನ್ನು ಮೊಳಗಿಸುವ ಮೂಲಕ ಹೊಸ ದಿಕ್ಕಿನೆಡೆಗೆ ಸಾಗತೊಡಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹಾಗೂ ಅದರ ತೆಲಂಗಾಣ ಘಟಕವು ವಿಶೇಷವಾಗಿ ಈ ಘೋಷಣೆಯ ಬಗ್ಗೆ ತೀವ್ರ ಆಸಕ್ತಿಯನ್ನು ತಾಳಿದೆ. ಪಕ್ಷದ ಇನ್ನೊಂದು ಆಕರ್ಷಣೀಯ ಘೋಷಣೆಯಾದ 'ಲಾಲ್-ನೀಲ್ ಯೂನಿಟಿ ಝಿಂದಾಬಾದ್', ಕಮ್ಯುನಿಸ್ಟರ ಕೆಂಪು ಹಾಗೂ ಅಂಬೇಡ್ಕರ್‌ವಾದಿಗಳ ನೀಲಿ ಬಣ್ಣಗಳ ನಡುವಿನ ಏಕತೆಯನ್ನು ಸಾರುತ್ತದೆ. ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪಕ್ಷವು ವಿಶಾಲವಾಗಿ ಸ್ವೀಕರಿಸಿರುವುದನ್ನು ಇದು ಸೂಚಿಸುತ್ತದೆ.

ಜನವರಿಯಲ್ಲಿ ತೆಲಂಗಾಣದಲ್ಲಿ ಬಹುಜನ ಎಡರಂಗವು ಸ್ಥಾಪನೆಯಾಗಿರುವುದನ್ನು ಇದೇ ಗ್ರಹಿಕೆಯಲ್ಲಿ ನೋಡಬೇಕಾಗಿದೆ. ಸಿಪಿಎಂ ನೇತೃತ್ವದ ಈ ಸಂಘಟನೆಯು ಇತರ 27 ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳನ್ನು ಒಳಗೊಂಡಿದೆ. ಮುಂದಿನ ವರ್ಷ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟ ಸ್ಪರ್ಧಿಸಬಯಸಿದೆ. ಮೈತ್ರಿಕೂಟವು ತೆಲಂಗಾಣದ ಎಲ್ಲಾ 119 ವಿಧಾನಸಭಾ ಸ್ಥಾನಗಳು ಹಾಗೂ 17 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲಿದೆಯೆಂದು ಬಹುಜನ ಎಡರಂಗದ ನಾಯಕತ್ವವು ಈಗಾಗಲೇ ಘೋಷಿಸಿದೆ. ಎಪ್ರಿಲ್‌ನಲ್ಲಿ ನಡೆದ ಸಿಪಿಎಂನ 22ನೇ ಅಧಿವೇಶನದಲ್ಲಿ ಈ ಸಂಘಟನೆಯ ರಚನೆಗೆ ಸಿಪಿಎಂ ತನ್ನ ಅನುಮೋದನೆಯನ್ನು ನೀಡಿದೆ.

ಬಹುಜನ ಮೈತ್ರಿಕೂಟವು ಸ್ಥಾಪನೆಯಾಗಿರುವುದು ಇತರ ಹಲವುರಾಜ್ಯಗಳಲ್ಲಿ ಸರಕಾರ ರಚನೆಗಾಗಿ ರಾಜಕೀಯ ಪಕ್ಷಗಳು ಚುನಾವಣಾ ಮೈತ್ರಿಯನ್ನು ಏರ್ಪಡಿಸುವಂತಹ ರೀತಿಯದ್ದಲ್ಲ. ಸಿಪಿಎಂನ ಸಿದ್ಧಾಂತದ ಮರುಸ್ಥಾಪನೆಯ ತಳಹದಿಯನ್ನು ಇದು ಹೊಂದಿದೆ. ಅಂಬೇಡ್ಕರ್ ದಲಿತ ಚಳವಳಿಗೆ ಹೊಸರೂಪ ನೀಡುವ ಉದ್ದೇಶವನ್ನು ಕೂಡಾ ಇದು ಹೊಂದಿದೆ.

 ಬಹುಜನ ಎಡರಂಗ ಮೈತ್ರಿಕೂಟದ ಅಧ್ಯಕ್ಷರಾಗಿ ದಲಿತರಾದ ನಲ್ಲ ಸೂರ್ಯ ಪ್ರಕಾಶ್ ನೇಮಕಗೊಂಡಿರುವುದು ಮೈತ್ರಿಕೂಟದ ರಚನೆಗೆ ವಿಶ್ವಸನೀಯತೆಯನ್ನು ತಂದುಕೊಟ್ಟಿದೆ. ಪ್ರಕಾಶ್ ಅವರು ಬಹುಜನ ಸಮಾಜ ಪಕ್ಷದ ಮಾಜಿ ಅಧ್ಯಕ್ಷರೂ ಹೌದು. ಈ ನೂತನ ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದರೂ ಅಥವಾ ಗೆಲ್ಲದಿದ್ದರೂ, ಇತರ ರಾಜಕೀಯ ಪಕ್ಷಗಳ ಮೇಲೆ ಅದು ಮಹತ್ವದ ಪರಿಣಾಮ ಬೀರುವುದಂತೂ ಖಚಿತವಾಗಿದೆ.

ಗುರುತು ರಾಜಕೀಯ ಹಾಗೂ ಕಮ್ಯುನಿಸ್ಟರು
 ನಿರ್ದಿಷ್ಟವಾಗಿ ಹೇಳುವುದಾದರೆ 2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೇರಿದ ಬಳಿಕ ಸಿಪಿಎಂ ಪಕ್ಷವು ಉತ್ತರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್ ಹೀಗೆ ವಿವಿಧ ರಾಜ್ಯಗಳಲ್ಲಿ ದಲಿತರ ಹಕ್ಕುಗಳಿಗಾಗಿನ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಈ ಎಡಪಕ್ಷದ ರಾಜ್ಯ ಘಟಕಗಳಲ್ಲಿ ದಲಿತ ಹಾಗೂ ಇತರ ಹಿಂದುಳಿದ ಸಮುದಾಯಗಳಿಗೆ ಸೇರಿದ ನಾಯಕರು ಗಣನೀಯ ಸಂಖ್ಯೆಯಲ್ಲಿಯೂ ಇದ್ದಾರೆ. ಆದರೆ ಸಿಪಿಎಂನ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಘಟಕವಾದ ಪಾಲಿಟ್‌ಬ್ಯೂರೋದಲ್ಲಿ ದಲಿತರು ಹಾಗೂ ಆದಿವಾಸಿ ನಾಯಕರ ಕೊರತೆಯಿರುವುದು ಕಳವಳಕರ ವಿಷಯವಾಗಿದೆ. 17 ಮಂದಿ ಸದಸ್ಯರ ಘಟಕವಾದ ಪಾಲಿಟ್‌ಬ್ಯೂರೋದಲ್ಲಿ, ಇತರ ಹಿಂದುಳಿದ ವರ್ಗ(ಓಬಿಸಿ)ಗಳಿಗೆ ಸೇರಿದ ಸದಸ್ಯರು ಉತ್ತಮ ಸಂಖ್ಯೆಯಲ್ಲಿದ್ದಾರೆ. ಉದಾಹರಣೆಗೆ, ಸಿಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಕೇರಳದ ಶೂದ್ರ ಸಮುದಾಯಕ್ಕೆ ಸೇರಿದ್ದರೆ, ವಿ.ಎಸ್.ಅಚ್ಯುತಾನಂದನ್ ಹಾಗೂ ಪಿಣರಾಯಿ ವಿಜಯನ್ ಈಳವ ಸಮುದಾಯದವರು. ಪಾಲಿಟ್‌ಬ್ಯೂರೋದಲ್ಲಿ ಮಹಿಳಾ ಹಾಗೂ ಮುಸ್ಲಿಂ ಪ್ರತಿನಿಧಿಗಳು ಕೂಡಾ ಇದ್ದಾರೆ, ಆದರೆ ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿ ಪ್ರತಿನಿಧಿಯಿಲ್ಲ. ಭಾರತದಲ್ಲಿ ಅತ್ಯಂತ ದಮನಿತರ ಪರವಾಗಿ ಹೋರಾಡಿರುವ ಇತಿಹಾಸ ಹೊಂದಿರುವ ಈ ಪಕ್ಷದ ವಿಶ್ವಸನೀಯತೆಗೆ ಇದು ಗಂಭೀರವಾದ ಸವಾಲನ್ನೊಡ್ಡಿದೆ.

ಪಾಲಿಟ್‌ಬ್ಯೂರೋದಲ್ಲಿ ದಲಿತ ಹಾಗೂ ಆದಿವಾಸಿ ನಾಯಕರ ಕೊರತೆಗೆ, ಭಾಗಶಃ ಸಿಪಿಎಂ ಪಕ್ಷವು ತನ್ನ ಸಾಂಘಿಕ ಸಂರಚನೆಯಲ್ಲಿ ಅನುಸರಿಸುತ್ತಿರುವ ಪ್ರಜಾತಾಂತ್ರಿಕ ಕೇಂದ್ರೀಯವಾದದ ತತ್ವ ಕಾರಣವೆನ್ನಲಾಗಿದೆ. ಈ ತತ್ವದ ಪ್ರಕಾರ ಪಕ್ಷದ ನೀತಿಯನ್ನು ಕೇಂದ್ರಮಟ್ಟದಲ್ಲಿ ನಿರ್ಧರಿಸಲಾಗುವುದು ಹಾಗೂ ಅದಕ್ಕೆ ಸದಸ್ಯರು ಬದ್ಧರಾಗಿರಬೇಕಾಗುತ್ತದೆ. ನಾಯಕತ್ವವು ಜಾತಿ ಅಥವಾ ಧರ್ಮದಿಂದ ಮುಕ್ತವಾದ ರಾಜಕೀಯ ನಿಲುವನ್ನು ಹೊಂದಿರುವುದು ಕೂಡಾ ಇದಕ್ಕೆ ಭಾಗಶಃ ಕಾರಣವಾಗಿದೆ. ಪಕ್ಷದ ಉನ್ನತ ನೀತಿ ನಿರೂಪಕ ಘಟಕವಾದ ಪಾಲಿಟ್‌ಬ್ಯೂರೋದಲ್ಲಿ ದಲಿತರು ಹಾಗೂ ಆದಿವಾಸಿಗಳ ಸೇರ್ಪಡೆಯಾಗಬೇಕೆಂಬ ಬೇಡಿಕೆಯು, ಗುರುತು ರಾಜಕೀಯದ ಭಾಗವೆಂದು ಪಕ್ಷದ ನಾಯಕತ್ವವು ಭಾವಿಸಿದೆ.

ಆದರೆ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇದು ವಾಸ್ತವಿಕ ನಿಲುವಾಗಲಾರದು. ಉದಾಹರಣೆಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ನ ರಾಹುಲ್ ಗಾಂಧಿ ತಮ್ಮ ಜಾತಿಯನ್ನೇ ಮುಂದಿಟ್ಟುಕೊಳ್ಳುತ್ತಾರೆ. ಮೋದಿ ಪದೇ ಪದೇ ತಮ್ಮ ಹಿಂದುಳಿದ ಜಾತಿಯ ಹಿನ್ನೆಲೆಯ ಬಗ್ಗೆ ಮಾತನಾಡಿದರೆ, ರಾಹುಲ್ ತಮ್ಮ ಬ್ರಾಹ್ಮಣ ವಂಶದ ಪರಂಪರೆಯ ಬಗ್ಗೆ ಮಾತನಾಡುತ್ತಾರೆ. ಸಿಪಿಎಂನ ಯೆಚೂರಿ ಅಥವಾ ಕಾರಟ್ ತಮ್ಮ ಜಾತಿಯ ಬಗ್ಗೆ ಮಾತನಾಡಲು ಇಚ್ಛಿಸುತ್ತಿಲ್ಲ. ಆದಾಗ್ಯೂ, ಅವರ ಜಾತಿಯ ಬಗ್ಗೆ ಚರ್ಚೆಯಾಗುತ್ತಲೇ ಇದೆ.

 ಇದರ ಜೊತೆಗೆ, ಭಾರತದ ರಾಜಕೀಯ ಸಿದ್ಧಾಂತವು ಹೆಚ್ಚುಹೆಚ್ಚಾಗಿ ಜಾತಿ ಕೇಂದ್ರೀತವಾಗತೊಡಗಿದೆ. ನನ್ನ ದೃಷ್ಟಿಕೋನದ ಪ್ರಕಾರ, ಭಾರತದಲ್ಲಿ ಜಾತಿಯು ವಿಸ್ತೃತವಾಗಿ ಎರಡು ಶ್ರೇಣಿಗಳಾಗಿ ವಿಭಜಿಸಲ್ಪಟ್ಟಿವೆ. ಉತ್ಪಾದಕ ಜಾತಿಗಳು (ಎಲ್ಲಾ ಶೂದ್ರರು, ಇತರ ಹಿಂದುಳಿದ ವರ್ಗಗಳು, ದಲಿತರು ಹಾಗೂ ಆದಿವಾಸಿಗಳು) ಹಾಗೂ ಉತ್ಪಾದಕತೆ ವಿರೋಧಿ ಜಾತಿಗಳು (ಮುಖ್ಯವಾಗಿ ಬ್ರಾಹ್ಮಣರು ಹಾಗೂ ಬನಿಯಾಗಳು). ವಿವಿಧ ಜಾತಿಗಳ ಬಗ್ಗೆ ಬಹಳಷ್ಟು ದತ್ತಾಂಶಗಳನ್ನು ಸಂಗ್ರಹಿಸಿ, ನನ್ನ ಪುಸ್ತಕ 'ಪೋಸ್ಟ್-ಹಿಂದೂ ಇಂಡಿಯಾ'ದಲ್ಲಿ ಉತ್ಪಾದಕತಾ ಪ್ರಕ್ರಿಯೆಯಲ್ಲಿ ಜಾತಿಗಳ ಕಾರ್ಮಿಕ ಶಕ್ತಿಯ ಬಳಕೆಗೆ ಸಂಬಂಧಿಸಿ, ಜಾತಿಗಳ ವರ್ಗ ಸ್ವರೂಪವನ್ನು ಆಧರಿಸಿ ನಾನು ಶ್ರೇಣೀಕರಣವನ್ನು ಮಾಡಿದ್ದೇನೆ.

ಭಾರತದ ಉತ್ಪಾದಕ ಕಾರ್ಮಿಕರ ಬಗ್ಗೆ ಇರುವ ತಾತ್ಸಾರ ಮನೋಭಾವಕ್ಕೆ ಬ್ರಾಹ್ಮಣ ಪುರೋಹಿತ ಶಾಹಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ಕೆಲವು ಜಾತಿಗಳು ಮೂಲಭೂತ ಉತ್ಪಾದನಾ ಪ್ರಕ್ರಿಯೆಗೆ ಯಾವುದೇ ಕೊಡುಗೆ ನೀಡದೆ ದೀರ್ಘ ಕಾಲದಿಂದ ಬಾಳುತ್ತಿವೆ. ಉದಾಹರಣೆಗೆ ಬ್ರಾಹ್ಮಣರ ತಥಾಕಥಿತ ಬೌದ್ಧಿಕ ಪರಿಶ್ರಮವು (ಪುಸ್ತಕಗಳನ್ನು ಓದುವುದು ಹಾಗೂ ಬರೆಯುವುದು, ಪೌರೋಹಿತ್ಯ ಇತ್ಯಾದಿ), ಶತಮಾನಗಳಿಂದ ಭಾರತದ ಉತ್ಪಾದನಾ ಪ್ರಕ್ರಿಯೆಗೆ ಯಾವುದೇ ರೀತಿಯಲ್ಲಿ ನೆರವಾಗಿಲ್ಲ. ಯಾಕೆಂದರೆ, ಅವರ ಹಾಗೂ ಉಳಿದ ಉತ್ಪಾದಕ ಜಾತಿಗಳ ನಡುವೆ ಜಾತಿಯೆಂಬ ತಡೆಗೋಡೆಯಿರುವುದು ಇದಕ್ಕೆ ಕಾರಣವಾಗಿದೆ. ಅದೇ ರೀತಿ ಸಾಂಪ್ರದಾಯಿಕ ವ್ಯಾಪಾರಿ ವರ್ಗವಾದ ಬನಿಯಾ ಸಮುದಾಯದ ಸದಸ್ಯರು ಉದ್ಯಮರಂಗದಲ್ಲಿ ಬಹಳ ಸಮಯದಿಂದ ಏಕಸ್ವಾಮ್ಯವನ್ನು ಹೊಂದಿದ್ದಾರೆ ಹಾಗೂ ಈಗ ಅವರು ಆರ್ಥಿಕತೆಯ ಮೇಲೂ ಏಕಸ್ವಾಮ್ಯವನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಅವರೆಂದಿಗೂ ಉತ್ಪಾದನೆಗೆ ನೆರವಾಗಿಲ್ಲ.

 ಭಾರತೀಯ ಮಾರ್ಕ್ಸಿಸ್ಟರು ಈ ಹಿಂದೆ ಆರ್ಥಿಕತೆ ಹಾಗೂ ಅಧಿಕಾರದ ಜಾತಿ ಸ್ವರೂಪವನ್ನು ಪರೀಕ್ಷಿಸುವುದನ್ನು ಬಹಳ ಸಮಯದಿಂದ ತಪ್ಪಿಸುತ್ತಲೇ ಬಂದಿದ್ದಾರೆ. ಒಮ್ಮೆ ಅವರು ಅಂಬೇಡ್ಕರ್ ಹಾಗೂ ಮಾರ್ಕ್ಸ್‌ವಾದಗಳನ್ನು ಜೊತೆಯಾಗಿ ಓದತೊಡಗಿದರೆ, ಅವರಿಗೆ ಅದು ಸಾಧ್ಯವೆಂಬುದು ಮನವರಿಕೆ ಯಾಗಲಿದೆ. ವರ್ಗವೆಂಬ ವಿಶ್ಲೇಷಣಾತ್ಮಕ ಶ್ರೇಣಿಯು ಮಾಕ್ಸ್‌ರ್ ವಾದದ ಉಗಮಕ್ಕೆ ಹೇಗೆ ಕೊಡುಗೆ ನೀಡಿತೋ ಅದೇ ರೀತಿ ಅಂಬೇಡ್ಕರ್‌ವಾದಕ್ಕೆ ಜಾತಿಯು ಒಂದು ವಿಶ್ಲೇಷಣಾತ್ಮಕ ಕೊಡುಗೆಯೆನಿಸಿತು.

ಅಂಬೇಡ್ಕರ್‌ವಾದ ಹಾಗೂ ಮಾರ್ಕ್ಸ್‌ವಾದ
ಭಾರತೀಯ ಮಾರ್ಕ್ಸಿಸ್ಟರ ಸಿದ್ಧಾಂತ ಹಾಗೂ ಅಂಗೀಕೃತ ಪದ್ಧತಿಗಳ ಜೊತೆ ಅಂಬೇಡ್ಕರ್‌ವಾದವು ನೈಜವಾಗಿ ಏಕೀಕರಣಗೊಳ್ಳಲು ಕೆಲವು ಸಮಯ ಬೇಕಾದೀತು. ಆದರೆ ಇಲ್ಲಿ ತಕ್ಷಣವೇ ಉದ್ಭವಿಸುವಂತಹ ಮುಖ್ಯವಾದ ಪ್ರಶ್ನೆಯೇನೆಂದರೆ, ನಾಯಕತ್ವದ ವಿಷಯಕ್ಕೆ ಸಂಬಂಧಿಸಿ ಕೇಂದ್ರೀಕೃತವಾದ ನಿರ್ಧಾರ ರಚನೆಯ ನೀತಿಯಿಂದ ಹಾಗೂ ಆದಿವಾಸಿ ಹಾಗೂ ದಲಿತ ಸಮುದಾಯದ ಕನಿಷ್ಠ ಓರ್ವ ಸದಸ್ಯನನ್ನು ಪಾಲಿಟ್‌ಬ್ಯೂರೋಗೆ ಪದೋನ್ನತಿ ಗೊಳಿಸಲಾಗದೆ ಇರುವ ತಮ್ಮ ಅಸಾಮರ್ಥ್ಯದಿಂದ ಅವರು ಹೇಗೆ ಹೊರಬರುತ್ತಾರೆಂಬುದಾಗಿದೆ.

ಕಮ್ಯುನಿಸ್ಟರಲ್ಲಿ ಎಲ್ಲ ವರ್ಗ, ಸಮುದಾಯಗಳನ್ನು ಒಳಗೊಂಡ ಪಾಲಿಟ್‌ಬ್ಯೂರೋ ಇರಬೇಕೆಂಬ ಬೇಡಿಕೆಯು ಬಹಳ ಸಮಯದಿಂದ ಕೇಳಿಬರುತ್ತಲೇ ಇದೆ. 2007ರಲ್ಲಿ ಕೆ.ಜಿ.ಬಾಲಕೃಷ್ಣನ್ ಅವರು ಭಾರತದ ಪ್ರಪ್ರಥಮ ದಲಿತ ನ್ಯಾಯಮೂರ್ತಿ (ಸಿಜೆಐ)ಯಾಗಿ ನೇಮಕಗೊಂಡರು. ಸುಪ್ರೀಂಕೋರ್ಟ್‌ಗೆ ಈ ಕೊರತೆಯನ್ನು ನೀಗಿಸಲು ಸಾಧ್ಯವಾಯಿತಾದರೆ, ಸಿಪಿಎಂಗೆ ಯಾಕಾಗುತ್ತಿಲ್ಲ.

ಒಂದೇ ಬಾರಿಗೆ, ಪ್ರಚಂಡವಾದ ಬದಲಾವಣೆಗಳಾಗಬೇಕೆಂದು ಇಲ್ಲಿ ಯಾರೂ ವಾದಿಸಲಾರರು. ಭಾರತದ ಬಹುತೇಕ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಲ್ಲಿ ಮೇಲ್ಜಾತಿಗಳವರ ಪ್ರಾಬಲ್ಯವಿರುವುದು ನಿಜವಾದ ಸಂಗತಿ. ಆದರೆ ಈ ಪಕ್ಷಗಳು ಕನಿಷ್ಠ ಪಕ್ಷ ತಮ್ಮ ಅಧಿಕಾರದ ಸಂರಚನೆಯಲ್ಲಿ, ಸಾಂಕೇತಿಕವಾಗಿಯಾದರೂ ಕೆಲವು ಪರಿಶಿಷ್ಟ ಜಾತಿಗಳವರನ್ನು ಸೇರ್ಪಡೆಗೊಳಿಸಿದೆ. ಆದರೆ ಭಾರತದ ಈ ಪ್ರಧಾನ ಕಮ್ಯುನಿಸ್ಟ್ ಪಕ್ಷದಲ್ಲಿ ಅದೂ ಇಲ್ಲ. ಆದರೆ ತನ್ನ ಧೋರಣೆಯನ್ನು ಸಮರ್ಥಿಸುವುದಕ್ಕಾಗಿ, ಭಾರತೀಯ ಕಮ್ಯುನಿಸ್ಟ್ ಪಕ್ಷವು, ದಲಿತರಿಗೆ ''ಔಪಚಾರಿಕವೆಂಬಂತೆ ಪಕ್ಷದಲ್ಲಿ ಭಡ್ತಿಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಾಗದು'' ಎಂಬ ವಾದವನ್ನು ಅದು ಪುನರಾವರ್ತಿಸಲು ಸಾಧ್ಯವಿಲ್ಲ. ಪಕ್ಷದ ಪಾಲಿಟ್‌ಬ್ಯೂರೋದಲ್ಲಿ ದಲಿತರು ಅಥವಾ ಆದಿವಾಸಿಗಳ ಅನುಪಸ್ಥಿತಿಗಿಂತ ಅವರ ಸಾಂಕೇತಿಕವಾದ ಉಪಸ್ಥಿತಿಯಾದರೂ ಇರುವುದು ಹೆಚ್ಚು ಉತ್ತಮವಾಗಿದೆ.

''ಕಮ್ಯುನಿಸ್ಟ್ ಪಕ್ಷದ ಬೌದ್ಧಿಕ ನಾಯಕತ್ವವು ಇಲ್ಲದವರಿಂದ ಬರುತ್ತದೆ'' ಎಂಬ ಕಮ್ಯುನಿಸ್ಟ್ ನಾಯಕ ಲೆನಿನ್‌ರ ಯುರೋ ಕೇಂದ್ರೀತ ಹೇಳಿಕೆಗೆ ಕಮ್ಯುನಿಸ್ಟ್ ನಾಯಕರು ಜೋತು ಬೀಳುತ್ತಲೇ ಇದ್ದಲ್ಲಿ, ಕೋಮುವಾದಿಶಕ್ತಿಗಳಿಗೆ ಭಾರತವನ್ನು ಆಳಲು ಹಾಗೂ ದೇಶದ ಮೂಲಭೂತ ಪ್ರಜಾತಾಂತ್ರಿಕ ಸಂರಚನೆಯನ್ನು ನಾಶಪಡಿಸಲು ಅವರು ರತ್ನಗಂಬಳಿ ಹಾಸಿಕೊಟ್ಟಂತಾಗುತ್ತದೆ. ಯುರೋಪ್‌ನಲ್ಲಿ ಜಾತಿರಹಿತವಾದ ವರ್ಗ ಸಮಾಜವಿತ್ತು. ಅಲ್ಲಿ ಅಂಬೇಡ್ಕರ್‌ರಂತಹ ವ್ಯಕ್ತಿಗಳು ಸೃಷ್ಟಿಯಾಗಲು ಅವಕಾಶವಿರಲಿಲ್ಲ. ಅಲ್ಲಿ ಕೇವಲ ಕಾರ್ಲ್ ಮಾರ್ಕ್ಸ್‌ನ ಸೃಷ್ಟಿಗೆ ಪೂರಕವಾದ ವಾತಾವರಣವಿತ್ತು. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಲು ಹಾಗೂ ವರ್ಗ ವ್ಯವಸ್ಥೆಯನ್ನು ರದ್ದುಪಡಿಸುವುದಕ್ಕಾಗಿ ಏಕಾತ್ಮಕವಾದ ಸಿದ್ಧಾಂತವೊಂದನ್ನು ರೂಪಿಸುವುದಕ್ಕಾಗಿ ಭಾರತವು ಮಾರ್ಕ್ಸ್ ಹಾಗೂ ಅಂಬೇಡ್ಕರ್ ತತ್ವಗಳನ್ನು ಪರಸ್ಪರ ಸಂಯೋಜಿಸಬೇಕಾದ ಅಗತ್ಯವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top