---

ಪಾಕಿಸ್ತಾನದ ವ್ಯವಸ್ಥೆ ಮತ್ತು ಸೈನ್ಯ ಇಮ್ರಾನ್ ಖಾನ್ ಅವರಿಗೆ ಎಷ್ಟು ಸ್ವಾತಂತ್ರ್ಯವನ್ನು ನೀಡಲಿದೆ ಎಂಬುದನ್ನೇ ಸಕಲವೂ ಆಧರಿಸಿದೆ.

ಇಮ್ರಾನ್ ಖಾನ್ ಮತ್ತು ಅವರ ‘ನಯಾ’ ಪಾಕಿಸ್ತಾನ

ಆಡಳಿತದ ಯಾವ ಹಂತದ ಯಾವ ಅನುಭವವೂ ಇಲ್ಲದ ಈ ಪ್ರಧಾನಿ ತನ್ನ ಜೊತೆಗೆ ಅತ್ಯಂತ ಅನನುಭವಿಗಳಾಗಿರುವ ಮತ್ತು ಮೊದಲಬಾರಿಗೆ ಮಂತ್ರಿಗಳಾಗುತ್ತಿರುವವರ ತಂಡದ ಮೂಲಕ ಪಾಕಿಸ್ತಾನದ ಆಡಳಿತ ನಡೆಸಲಿದ್ದಾರೆ. ಖಾನ್ ಅವರ ಬೆಂಬಲಿಗರ ಪ್ರಕಾರ ಈ ವಿದ್ಯಮಾನವೂ ಸಹ ಅವರ ‘ನಯಾ’ ಪಾಕಿಸ್ತಾನದ ಭಾಗವಾಗಿದ್ದು ರಾಜಕೀಯ ಮತ್ತು ಸಾರ್ವಜನಿಕ ಪ್ರಾತಿನಿಧ್ಯದಲ್ಲಿ ಹೊಸ ತಿಳಿವಿನ ಗಾಳಿಯನ್ನು ಪಸರಿಸಲಿದೆ. ಆದರೆ ಪಾಕಿಸ್ತಾನದ ರಾಜಕೀಯಕ್ಕೆ 1988ರಲ್ಲಿ ಹೊಸದಾಗಿ ಪ್ರವೇಶ ಮಾಡಿದಾಗ ಬೆನಝೀರ್ ಭುಟ್ಟೋ ಎದುರಿಸಿದ ಪ್ರತಿರೋಧಕ್ಕಿಂತಲೂ ಬಲವಾದ ವಿರೋಧಪಕ್ಷವನ್ನು ಸದನದಲ್ಲಿ ಇಮ್ರಾನ್ ಖಾನ್ ಎದುರಿಸಬೇಕಿರುತ್ತದೆ.


ಪಾಕಿಸ್ತಾನದಲ್ಲಿ ಹೊಸದಾಗಿ ಚುನಾಯಿತ ಪ್ರಧಾನಿಯಾಗಿ ಆಯ್ಕೆಯಾದ ಇಮ್ರಾನ್ ಖಾನ್‌ರನ್ನು ಜಗತ್ತಿನ ಇತರ ಚುನಾಯಿತ ಜನತಾವಾದಿ (ಪಾಪ್ಯುಲಿಸ್ಟ್)ಬಲಪಂಥೀಯ ನಾಯಕರಾದ ಟರ್ಕಿಯ ಎರ್ದೋಗಾನ್ ಮತ್ತು ಫಿಲಿಫೈನ್ಸ್‌ನ ಡ್ಯೂಟಿರಾಟೆಯಂಥವರ ಜೊತೆ ಹೋಲಿಸಲಾಗುತ್ತಿದೆ. ಇವು ಕ್ಲೀಷೆಯಿಂದ ಕೂಡಿದ ಮತ್ತು ಸರಳೀಕೃತ ಹೋಲಿಕೆಗಳಾಗಿವೆ. ಜಗತ್ತಿನ ಎಲ್ಲ ಬಲಪಂಥೀಯ ನಾಯಕರು ಕೆಲವು ಸಮಾನವಾದ ಧೋರಣೆಗಳನ್ನು ಹೊಂದಿರುತ್ತಾರಾದ್ದರಿಂದ ಒಬ್ಬರಲ್ಲಿ ಕಂಡುಬರುವ ಕೆಲವು ಗುಣಲಕ್ಷಣಗಳು ಇನ್ನೊಬ್ಬರಲ್ಲೂ ಕಂಡುಬರಬಹುದು. ಆದರೆ ಆಯಾ ನಾಯಕರ ಉಗಮದ ನಿರ್ದಿಷ್ಟ ಸಂದರ್ಭ, ಪರಿಸ್ಥಿತಿ ಮತ್ತು ಚರಿತ್ರೆಗಳು ಇಂತಹ ಹೋಲಿಕೆಗಳನ್ನು ಅರ್ಥಹೀನ ಮತ್ತು ದುರ್ಬಲಗೊಳಿಸುತ್ತವೆ. ಹೀಗಾಗಿ ಇಮ್ರಾನ್ ಖಾನ್ ಅವರನ್ನು ಮೋದಿಯಂತಲೋ, ಟ್ರಂಪ್ ಎಂತಲೋ ಸಮೀಕರಿಸುವ ಮೂಲಕ ಪ್ರತಿಯೊಬ್ಬ ನಾಯಕರ ಉಗಮವನ್ನು ಸಾಧ್ಯಗೊಳಿಸುವ ಅಸಂಖ್ಯಾತ ನಿರ್ದಿಷ್ಟತೆಗಳನ್ನು ಕಡೆಗಣಿಸಿದಂತಾಗುತ್ತದೆ. ವಾಸ್ತವದಲ್ಲಿ ಖಾನ್ ಅವರು ಯಾರು ಮತ್ತು ಅವರು ಏನಾಗಬಹುದು ಎಂಬುದನ್ನು ಪಾಕಿಸ್ತಾನದಲ್ಲಿ ಅವರಿಗಿಂತಲೂ ಬಲವಾಗಿರುವ ಸೈನ್ಯದಂಥ ಸಂಸ್ಥೆಗಳು ಅವರಿಗೆ ಏನಾಗಲು ಅವಕಾಶ ಮಾಡಿಕೊಡುತ್ತವೆ ಎಂಬುದನ್ನೇ ಆಧರಿಸಿವೆ.

ಮೊದಲನೆಯದಾಗಿ ಪಾಕಿಸ್ತಾನದಲ್ಲಿ ನಡೆದ 11ನೇ ಸಾರ್ವತ್ರಿಕ ಚುನಾವಣೆಗಳು ಮುಕ್ತವೂ ಆಗಿರಲಿಲ್ಲ ನ್ಯಾಯ ಸಮ್ಮತವೂ ಆಗಿರಲಿಲ್ಲ. ಚುನಾವಣೆಗೆ ಹಲವು ತಿಂಗಳು ಮುನ್ನವೇ ಚುನಾವಣಾ ಪೂರ್ವ ರಿಗ್ಗಿಂಗ್ ನಡೆದಿತ್ತು. ಇದನ್ನು ವಿಸ್ತೃತವಾಗಿ ಮಾಡಲಾಗಿರುವ ದಾಖಲೆಗಳು, ದಕ್ಕಿರುವ ಪುರಾವೆಗಳು, ಜನಸಮಾನ್ಯರ ಕಥನಗಳು ಮತ್ತು ಆರೋಪಗಳು ಹೇಳುತ್ತವೆ. ಮೇಲಾಗಿ, ಚುನಾವಣೆ ನಡೆದ ಜುಲೈ 25ರಂದು ಫಲಿತಾಂಶಗಳನ್ನು ಘೋಷಿಸಿದ ರೀತಿಯಲ್ಲಿ ಸಹ ಪಾರದರ್ಶಕತೆಯ ಕೊರತೆಯಿತ್ತು. ಇದು ಒಂದು ಅತ್ಯಂತ ಪೈಪೋಟಿಯಿಂದ ಕೂಡಿದ ಚುನಾವಣೆಯಾಗಿತ್ತು. ಹೀಗಾಗಿ ಹತ್ತಾರು ಕ್ಷೇತ್ರಗಳಲ್ಲಿ ಗೆದ್ದ ಮತ್ತು ಸೋತವರ ನಡುವಿನ ಅಂತರ ಬಹಳ ಕಡಿಮೆಯಿತ್ತು. ಆದರೆ ಅಂಥ ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿಗಳು ಈ ಅಂತರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಚಲಾಯಿತ ಮತಗಳನ್ನು ಪರಿಗಣನೆಗೇ ತೆಗೆದುಕೊಳ್ಳದೆ ತಿರಸ್ಕರಿಸಿದ್ದರು ಮತ್ತು ಅಲ್ಲಿ ಮರುಎಣಿಕೆಗಾಗಿ ಮಾಡಿದ ಅಹವಾಲುಗಳನ್ನೂ ಸಹ ತಿರಸ್ಕರಿಸಲಾಯಿತು.

ಚುನಾವಣೆಗೆ ಪೂರ್ವದಲ್ಲಿ ಹಲವಾರು ಪರಿಚಿತ ರಿಗ್ಗಿಂಗ್ ಸಾಧನಗಳನ್ನು ಬಳಸಿ ಚುನಾವಣಾ ಪ್ರಕ್ರಿಯೆಯನ್ನು ತಿರುಚಲಾಯಿತು. ಮಾಜಿ ಪ್ರಧಾನಿ ನವಾಝ್ ಶರೀಫ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿ ಜೈಲುಪಾಲು ಮಾಡಲಾಯಿತು. ಇಡೀ ಮಾಧ್ಯಮದ ಮೇಲೆ ಸೈನ್ಯವು ಪ್ರತ್ಯಕ್ಷ ಅಥವಾ ಪರೋಕ್ಷವಾದ ನಿಯಂತ್ರಣವನ್ನು ಇಟ್ಟುಕೊಂಡಿತ್ತು. ನ್ಯಾಯಾಂಗವು ಬಹಿರಂಗವಾಗಿಯೇ ಪಕ್ಷಪಾತಿ ನಿಲುವನ್ನು ಪ್ರದರ್ಶಿಸಿತು. ಇದರ ಜೊತೆಜೊತೆಗೆ, ಶರೀಫ್ ಅವರ ‘ಪಾಕಿಸ್ತಾನ್ ಮುಸ್ಲಿಮ್ ಲೀಗ್’ ಪಕ್ಷದ ಬೆಂಬಲಿಗರ ಮತಗಳನ್ನು ಒಡೆಯಲು ವ್ಯವಸ್ಥೆಯೇ ಹೊಸ ಹೊಸ ಪಕ್ಷಗಳನ್ನು ಹುಟ್ಟುಹಾಕಿತು. ಇದಕ್ಕೆ ಕಣ್ಣಿಗೆ ರಾಚುವಂತಹ ಉದಾಹರಣೆಯೆಂದರೆ ಸೈನ್ಯದ ಬೆಂಬಲದೊಂದಿಗೆ ರಚಿತವಾದ ‘ತೆಹ್ರೀಕ್-ಇ-ಲಬ್ಬೈಕ್-ಪಾಕಿಸ್ತಾನ್’ ಪಕ್ಷ. ಈ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದಾಗಿ ಮತಗಳು ಹಂಚಿಕೆಯಾಗಿ ಗೆಲ್ಲಬಹುದಾಗಿದ್ದ 13 ಸೀಟುಗಳನ್ನು ನವಾಝ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷ ಕಳೆದುಕೊಂಡಿತು. ಮತೊಂದು ಉದಾಹರಣೆಯೆಂದರೆ ಈ ಹಿಂದೆ ಶರೀಫ್ ಅವರ ಪಕ್ಷಕ್ಕೆ ಸೇರಿದ್ದ ಹಲವಾರು ಶಾಸನಾ ಸಭಾ ಸದಸ್ಯರನ್ನು ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಬೆಂಬಲಿಸುವಂತೆ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮನ ಒಲಿಸಲಾಯಿತು. ಇಂಥವರನ್ನು ಈಗ ಪಾಕಿಸ್ತಾನದಲ್ಲಿ ಬಿಕರಿಗಿರುವ ಗೆಲ್ಲುವ ಕುದುರೆಗಳು (ದಿ ಎಲೆಕ್ಟಬಲ್ಸ್) ಎಂದು ಲೇವಡಿ ಮಾಡಲಾಗುತ್ತಿದೆ.

ಆದರೆ ಈ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಲಿಲ್ಲವೆಂದೂ, ಅದರ ಪ್ರಧಾನ ಲಕ್ಷ್ಯವೇ ಹೇಗಾದರೂ ಮಾಡಿ ನವಾಝ್ ಶರೀಫ್ ಅವರ ಪಕ್ಷ ಪುನರಾಯ್ಕೆ ಆಗದಂತೆ ತಡೆಯುವುದು ಮಾತ್ರವಾಗಿತ್ತು ಎಂದೇನಾದರೂ ಸಮಾಜ ವಿಜ್ಞಾನಿಗಳು ವಿಶ್ಲೇಷಿಸಿದರೆ ಆ ವಿಶ್ಲೇಷಣೆಯು ಕೇವಲ ಅಪೂರ್ಣ ಮಾತ್ರವಲ್ಲ, ಪ್ರಾಯಶಃ ತಪ್ಪಾದ ವಿಶ್ಲೇಷಣೆಯೂ ಆಗಿರುತ್ತದೆ. ಒಂದು ವೇಳೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆದರೆ ಶರೀಫ್ ಅವರ ಪಿಎಂಎಲ್-ಎನ್ ಪಕ್ಷವು ಪಂಜಾಬ್ ಪ್ರಾಂತದಲ್ಲಿ ಮತ್ತು ಕೇಂದ್ರದಲ್ಲಿ ಬಹುದೊಡ್ಡ ಪಕ್ಷವಾಗಿ ಚುನಾಯಿತಗೊಳ್ಳುತ್ತದೆ ಎಂದೆಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳೂ ಪ್ರತಿಪಾದಿಸಿದ್ದವು. ಹಾಗೇನಾದರೂ ಆಗಿದ್ದಲ್ಲಿ ಚುನಾವಣಾ ಫಲಿತಾಂಶಗಳ ಬಗೆಗಿನ ವಿಶ್ಲೇಷಣೆಗಳು ಸಂಪೂರ್ಣ ಭಿನ್ನವಾಗಿರುತ್ತಿತ್ತು. ಈಗ ಚುನಾವಣೆಗಳನ್ನು ಇಮ್ರಾನ್ ಖಾನ್ ಅವರ ಪರವಾಗಿ ರಿಗ್ ಮಾಡಿರುವುದರಿಂದ ‘‘ಈ ಚುನಾವಣೆಯು ಭ್ರಷ್ಟಾಚಾರದ ವಿರುದ್ಧ ನಡೆದ ಚುನಾವಣೆಯಾಗಿದ್ದು ಇಮ್ರಾನ್ ಖಾನ್ ಅವರ ವಿಜಯವು ಪಾಕಿಸ್ತಾನದ ಮಧ್ಯಮ ವರ್ಗದ ವಿಜಯವನ್ನು ಪ್ರತಿನಿಧಿಸುತ್ತದೆ’’ ಎಂದು ಕೆಲವು ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ಇದು ನಿಜಕ್ಕೂ ವಾಸ್ತವವೇ ಎಂದು ಹೇಳುವುದು ಕಷ್ಟ. ಮತ್ತು ಸಮಾಜಶಾಸ್ತ್ರೀಯ ಪರಿಕರಗಳನ್ನು ಇಟ್ಟುಕೊಂಡು ಈ ಚುನಾವಣೆಯನ್ನು ವಿಶ್ಲೇಷಿಸಬಯಸುವವರು ತಮ್ಮ ತೀರ್ಮಾನಗಳ ಬಗ್ಗೆ ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ತಾಳಬೇಕಿರುತ್ತದೆ. ಏಕೆಂದರೆ ತದ್ವಿರುದ್ಧವಾದ ತೀರ್ಮಾನಗಳಿಗೆ ತಲುಪಲು ಬೇಕಾದ ಪುರಾವೆಗಳು ಮತ್ತು ಪ್ರತಿವಾದಗಳೂ ಸಹ ಹೇರಳವಾಗಿ ಲಭ್ಯವಿದೆ.

ಅದೇನೇ ಇದ್ದರೂ, ಇಮ್ರಾನ್ ಖಾನ್ ಅವರು ಪಾಕಿಸ್ತಾನದ 19ನೇ ಪ್ರಧಾನಿಯಾಗುತ್ತಿದ್ದು ಪಾಕಿಸ್ತಾನ ಮತ್ತು ಅದರ ನೆರೆಹೊರೆ ದೇಶಗಳು ಈ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕಿದೆ. ಆಡಳಿತದ ಯಾವ ಹಂತದ ಯಾವ ಅನುಭವವೂ ಇಲ್ಲದ ಈ ಪ್ರಧಾನಿ ತನ್ನ ಜೊತೆಗೆ ಅತ್ಯಂತ ಅನನುಭವಿಗಳಾಗಿರುವ ಮತ್ತು ಮೊದಲಬಾರಿಗೆ ಮಂತ್ರಿಗಳಾಗುತ್ತಿರುವವರ ತಂಡದ ಮೂಲಕ ಪಾಕಿಸ್ತಾನದ ಆಡಳಿತ ನಡೆಸಲಿದ್ದಾರೆ. ಖಾನ್ ಅವರ ಬೆಂಬಲಿಗರ ಪ್ರಕಾರ ಈ ವಿದ್ಯಮಾನವೂ ಸಹ ಅವರ ‘ನಯಾ’ ಪಾಕಿಸ್ತಾನದ ಭಾಗವಾಗಿದ್ದು ರಾಜಕೀಯ ಮತ್ತು ಸಾರ್ವಜನಿಕ ಪ್ರಾತಿನಿಧ್ಯದಲ್ಲಿ ಹೊಸ ತಿಳಿವಿನ ಗಾಳಿಯನ್ನು ಪಸರಿಸಲಿದೆ. ಆದರೆ ಪಾಕಿಸ್ತಾನದ ರಾಜಕೀಯಕ್ಕೆ 1988ರಲ್ಲಿ ಹೊಸದಾಗಿ ಪ್ರವೇಶ ಮಾಡಿದಾಗ ಬೆನಝೀರ್ ಭುಟ್ಟೋ ಎದುರಿಸಿದ ಪ್ರತಿರೋಧಕ್ಕಿಂತಲೂ ಬಲವಾದ ವಿರೋಧಪಕ್ಷವನ್ನು ಸದನದಲ್ಲಿ ಇಮ್ರಾನ್ ಖಾನ್ ಎದುರಿಸಬೇಕಿರುತ್ತದೆ.

ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಪಕ್ಷಕ್ಕಿಂತ ಸರಕಾರವನ್ನು ವಿರೋಧಿಸಲಿರುವ ಪ್ರತಿಪಕ್ಷಗಳು ಪಾಕಿಸ್ತಾನದ ರಾಜಕೀಯದ ಚದುರಂಗದಾಟದಲ್ಲಿ ಹೆಚ್ಚಿನ ನಿಪುಣತೆಯನ್ನು ಹೊಂದಿದ್ದಾರೆ. ಪಂಜಾಬಿನಲ್ಲೂ ಸಹ ಖಾನ್ ಅವರ ಪಕ್ಷದ ಹುರಿಯಾಳು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾದ ವಾತಾವರಣವಿದೆ. ಅಧಿಕಾರೋನ್ಮತ್ತ, ಮೊಂಡು ಹಠದ, ದುರಹಂಕಾರಿ ಮತ್ತು ಅಸಹಿಷ್ಣು ಗುಣಗಳ ವ್ಯಕ್ತಿತ್ವ ಇರುವವರು ಎಂದು ಪರಿಗಣಿಸಲಾದ ಖಾನ್ ಅವರು ತಮ್ಮ ಈ ದುರ್ಗುಣಗಳಿಂದ ಹೇಗೆ ಹೊರಬರಲಿದ್ದಾರೆ ಎಂಬುದು ಅವರ ಮತ್ತು ಅವರ ಸರಕಾರದ ಶ್ರೇಯೋಭಿವೃದ್ಧಿಯನ್ನು ತೀರ್ಮಾನ ಮಾಡುವ ನಿರ್ಣಯಾತ್ಮಕ ಅಂಶವಾಗಲಿದೆ. ಅದೇನೇ ಇರಲಿ ವಿಜಯಾನಂತರ ಪಾಕಿಸ್ತಾನವನ್ನು ಮತ್ತು ಜಗತ್ತನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ ಇಂತಹ ಯಾವ ಲಕ್ಷಣಗಳೂ ಕಂಡುಬರಲಿಲ್ಲ. ಅದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಎದ್ದುಕಾಣುತ್ತಿದ್ದ ಭಾವ ಅಪನಂಬಿಕೆಯದ್ದು ಮಾತ್ರ. ನಿಯೋಜಿತ ಪ್ರಧಾನಿಯಾಗಿ ಅತ್ಯಂತ ತಾಳ್ಮೆಯಿಂದ ಮಾಡಿದ ಆ ಭಾಷಣದಲ್ಲಿ ಅವರು ಸಾಮಾಜಿಕ ನ್ಯಾಯ, ಒಳಗೊಳ್ಳುವಿಕೆ, ಕ್ಷಮೆ, ಸ್ನೇಹ, ಒಂದು ಸ್ವಚ್ಛ ಹಾಗೂ ಸರಳ ಸರಕಾರ, ಪಾಕಿಸ್ತಾನದ ಎಲ್ಲಾ ನೆರೆ ದೇಶಗಳೊಂದಿಗೆ ಉತ್ತಮ ಸಂಬಂಧಗಳನ್ನು ಕಾದುಕೊಳ್ಳುವ ಬಗ್ಗೆ ಮಾತನಾಡಿದರು ಮತ್ತು ಅದರ ಜೊತೆಗೆ 8ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದರು ಮದೀನಾದಲ್ಲಿ ಸ್ಥಾಪಿಸಿದ ಸರಕಾರವೇ ತನಗೆ ಸ್ಫೂರ್ತಿ ಎಂದು ಉಲ್ಲೇಖಿಸುವ ಮೂಲಕ ಇಸ್ಲಾಮೀಯ ತತ್ವಗಳ ಬಗ್ಗೆ ತನ್ನಲ್ಲಿ ಮೂಡಿರುವ ಹೊಸ ಶ್ರದ್ಧೆಯ ಬಗ್ಗೆಯೂ ಮಾತನಾಡಿದರು.

ಖಾನ್ ಅವರ ಉದ್ದೇಶಗಳು ಮತ್ತು ನಿರ್ಣಯಗಳು ಎಷ್ಟೇ ಅರ್ಥಪೂರ್ಣವಾಗಿದ್ದರೂ ಮತ್ತು ಪ್ರಾಮಾಣಿಕವಾಗಿದ್ದರೂ ಅವರ ಖಾಸಗಿ ಮತ್ತು ರಾಜಕೀಯ ಜೀವನವನ್ನು ಆವರಿಸಿರುವ ಹಲವು ಬಗೆಯ ವೈರುಧ್ಯಗಳಿಂದಾಗಿ ಅವರು ಹಲವಾರು ರಾಜಿಗಳನ್ನು ಮಾಡಿಕೊಳ್ಳಲೇ ಬೇಕಾಗಿರುತ್ತದೆ. ಬಹುಮತವನ್ನು ಸಾಧಿಸುವ ಸಲುವಾಗಿ ಯಾರನ್ನು ಅವರು ಈವರೆಗೆ ವಿರೋಧಿಸುತ್ತ ಬಂದಿದ್ದರೋ ಅದೇ ಶಕ್ತಿಗಳೊಂದಿಗೆ ಖಾನ್ ಕೈಗೂಡಿಸುವುದು ಅನಿವಾರ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ರಾಜಕಿಯ ಆರ್ಥಿಕತೆಯೇ ಕೆಲವು ನಿರ್ದಿಷ್ಟ ಸವಾಲುಗಳನ್ನು ಅವರ ಮುಂದೆ ಇರಿಸಲಿದೆ. ಒಂದೆಡೆ ಪಾಕಿಸ್ತಾನದ ವಿದ್ಯಮಾನಗಳ ಮೇಲೆ ಅಪಾರ ಅಧಿಪತ್ಯವನ್ನು ಹೊಂದಿರುವ ಸೈನವು ಖಾನ್ ಅವರನ್ನು ಆಯ್ಕೆಯಾಗಲು ಸಹಕರಿಸಿದ್ದಕ್ಕೆ ತನ್ನ ಪಾಲನ್ನು ಕೇಳಲಿದೆ. ಮತ್ತೊಂದೆಡೆ ಅಪಾರವಾದ ಅರ್ಥಿಕ ಅವಲಂಬನೆ ಮತ್ತು ವಿಷಮ ಸಂಬಂಧ ಹೊಂದಿರುವ ಅನುಭವೀ ವಿರೋಧ ಪಕ್ಷಗಳಿಂದಾಗಿ ಇಮ್ರಾನ್ ಖಾನ್ ಅವರು ಕರಾಚಿಯಲ್ಲೇ ಬಿಟ್ಟುಬರಲು ಬಯಸಿದ್ದ ಹಳೆಯ ಪಾಕಿಸ್ತಾನದ ಬಹಳಷ್ಟು ಅಂಶಗಳು ಅವರ ನಯಾ ಪಾಕಿಸ್ತಾನದಲ್ಲೂ ಮುಂದುವರಿಯಲಿವೆ.

(ಅಕ್ಬರ್ ಝೈದಿಯವರು ಕರಾಚಿಯಲ್ಲಿ ನೆಲೆಸಿರುವ ರಾಜಕೀಯ- ಆರ್ಥಿಕತೆಯ ವಿಶ್ಲೇಷಕರು)

ಕೃಪೆ: Economic and Political Weekly

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top