ಮೋದಿಯ ಚುನಾವಣಾ ಗೆಲುವು! | Vartha Bharati- ವಾರ್ತಾ ಭಾರತಿ
ಮುನ್ನೆಲೆಗೆ ತಂದ ಕೆಲವು ಮುಖ್ಯ ಪ್ರಶ್ನೆಗಳು

ಮೋದಿಯ ಚುನಾವಣಾ ಗೆಲುವು!

ಭಾರತ ದೇಶದಲ್ಲಿ ಪ್ರಾಬಲ್ಯದಲ್ಲಿರುವ ಧರ್ಮ, ಜಾತಿ, ಆಚಾರ, ದೇವರು, ನಂಬಿಕೆ ಮೊದಲಾದ ವಿಚಾರಗಳಲ್ಲಿನ ಹಳೇ ಊಳಿಗಮಾನ್ಯ ಚಿಂತನೆಗಳನ್ನು ಸುಲಭವಾಗಿ ಸಂಘ ಪರಿವಾರ ಬಳಸಿಕೊಳ್ಳುತ್ತಿದೆ. ಕಾರ್ಪೊರೇಟ್ ಹಾಗೂ ಭಾರೀ ಆಸ್ತಿವಂತ ಶಕ್ತಿಗಳ ಎಲ್ಲಾ ಬೆಂಬಲವೂ ಅದಕ್ಕಿದೆ. ವಿರೋಧ ಪಕ್ಷಗಳು ವಿರೋಧಿಸಲಾಗದಂತೆ ಶಕ್ತಿಹೀನವಾಗಿ ಕುಳಿತಿರುವ ಸಂದರ್ಭ ಕೂಡ ಅದಕ್ಕೆ ಮತ್ತಷ್ಟು ಪೂರಕವಾಗಿದೆ. ಅಂತಹ ವಿರೋಧ ಪಕ್ಷಗಳನ್ನೇ ನೆಚ್ಚಿಕೊಂಡು ಸಂಘ ಪರಿವಾರದ ಫ್ಯಾಶಿಸ್ಟ್ ಶಕ್ತಿಗಳಿಗೆ ತಡೆಯೊಡ್ಡಬಹುದು ಎಂದುಕೊಳ್ಳುವುದು ಫ್ಯಾಶಿಸ್ಟ್ ಶಕ್ತಿಗಳಿಗೆ ಪೂರಕವಾಗುತ್ತವೆಯೇ ಹೊರತು ಬೇರೇನೂ ಆಗುವುದಿಲ್ಲ.


ಭಾರೀ ಗದ್ದಲದ 2019ರ ಭಾರತದ ಸಾರ್ವತ್ರಿಕ ಚುನಾವಣೆ ಮುಗಿದು ಫಲಿತಾಂಶ ಕೂಡ ಬಂದಾಯಿತು. ಹಲವರು ಆಶ್ಚರ್ಯ ಪಡುವಂತೆ ಮೋದಿಯ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಭಾರೀ ಬಹುಮತದಿಂದ ಮುಂದಿನ ಐದು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. 2019ರಲ್ಲಿ ಒಟ್ಟು 900 ದಶಲಕ್ಷ ಮತದಾರರಲ್ಲಿ 468 ದಶಲಕ್ಷ ಪುರುಷರು 432 ದಶಲಕ್ಷ ಮಹಿಳೆಯರು 38,325 ಜನ ತೃತೀಯ ಲಿಂಗಿಗಳು ಸೇರಿದ್ದರು. 2014ರ ಸಾರ್ವತ್ರಿಕ ಚುನಾವಣೆಗಿಂತಲೂ 84.3 ದಶಲಕ್ಷ ಮತದಾರರು ಹೆಚ್ಚಾಗಿದ್ದರು.

 ಈ ಬಾರಿ ಶೇ. 67ರಷ್ಟು ಮತ ಚಲಾವಣೆಯಾಗಿತ್ತು. ಇದು ಇದುವರೆಗಿನ ಸರಾಸರಿ ಚಲಾವಣೆಯಾದ ಮತಗಳಲ್ಲೇ ಅತೀ ಹೆಚ್ಚು ಎಂದು ಹೇಳಲಾಗುತ್ತಿದೆ. ಬಿಜೆಪಿ ತನ್ನ ಶೇಕಡಾವಾರು ಮತಗಳಿಕೆಯನ್ನು ಹಾಗೂ ಸಂಖ್ಯೆಗಳನ್ನೂ ಕೂಡ ಹೆಚ್ಚಿಸಿಕೊಂಡಿದೆ. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ದೇಶದ 200 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ. 50ರಷ್ಟು ಮತಗಳನ್ನು ತನ್ನದಾಗಿಸಿ ಕೊಂಡಿದೆ. ಈ ಬಾರಿ ಅದು 2014ರ ಲೋಕಸಭಾ ಚುನಾವಣೆಗಿಂತಲೂ ಶೇ. 6ರಷ್ಟು ಶೇಕಡಾವಾರು ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಆದರೆ ನೋಟಾ ಮತಗಳಲ್ಲಿ ಹೆಚ್ಚಳವಾಗಲೀ ಕಡಿಮೆಯಾಗಲೀ ಗಮನಾರ್ಹ ರೀತಿಯಲ್ಲಿ ಕಾಣಿಸುತ್ತಿಲ್ಲ. ಸುಮಾರು 200ಕ್ಕೂ ಹೆಚ್ಚು ಉತ್ತರಭಾರತದ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಯಂತ್ರಗಳ ಹ್ಯಾಕಿಂಗ್ ಹಾಗೂ ಬದಲಾಯಿಸುವುದು ಕೂಡ ನಡೆದಿವೆ ಎಂಬ ವರದಿಗಳೂ ಕೂಡ ಇವೆ.

ಪ್ರಮುಖ ವಿರೋಧ ಪಕ್ಷವೆನಿಸಿಕೊಂಡ ಕಾಂಗ್ರೆಸ್ ಲೋಕಸಭೆಯಲ್ಲಿ ಇರುವುದರಲ್ಲಿ ಅತೀ ದೊಡ್ಡ ವಿರೋಧ ಪಕ್ಷವಾಗಿದ್ದರೂ ಪುನಃ ಸತತ ಎರಡನೇ ಬಾರಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಕೂಡ ಗಳಿಸಲಾರದೆ ಹೋಗಿದೆ. ಕೇವಲ 52 ಸ್ಥಾನಗಳಿಗೆ ಅದು ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿದೆ. ಅಧಿಕೃತ ವಿರೋಧ ಪಕ್ಷವಾಗಲು ಲೋಕಸಭೆಯ ಶೇ. 10ರಷ್ಟು ಸ್ಥಾನಗಳನ್ನಾದರೂ ಗಳಿಸಬೇಕು. ಅಂದರೆ ಕನಿಷ್ಠ 55 ಸಂಸದರನ್ನಾದರೂ ಹೊಂದಿರಬೇಕು. ‘ಮಹಾ ಘಟಬಂಧನ್’ ಎನ್ನುವ ಇತರ ವಿರೋಧ ಪಕ್ಷಗಳ ದಿಢೀರ್ ರಾಜಕೀಯ ಪರ್ಯಾಯ ಕೂಡ ನೆಲಕಚ್ಚಿ ಕುಳಿತಿದೆ. ಉತ್ತರ ಪ್ರದೇಶದ ಎಸ್ಪಿ, ಬಿಎಸ್ಪಿಮೈತ್ರಿ ಕೂಡ ಹೆಚ್ಚಿನ ಫಲವನ್ನೇನೂ ನೀಡಿಲ್ಲ. ದಕ್ಷಿಣ ಭಾರತದ ಕರ್ನಾಟಕದಲ್ಲಿ ಕಾಂಗ್ರೆಸ್ ಜನತಾದಳ ಮೈತ್ರಿ ಸರಕಾರವಿದ್ದರೂ ಹತ್ತು ಹಲವು ಪ್ರಗತಿಪರವೆನಿಸಿಕೊಂಡ ಸಂಘಟನೆಗಳು, ವ್ಯಕ್ತಿಗಳು ಕಾಂಗ್ರೆಸ್ ಇಲ್ಲವೇ ಮೈತ್ರಿ ಸರಕಾರದ ಪರವಾಗಿ ಪ್ರಚಾರಗಳನ್ನು ಮಾಡಿದ್ದರೂ ರಾಜ್ಯದ ಒಟ್ಟು 28 ಸ್ಥಾನಗಳಲ್ಲಿ ಬಿಜೆಪಿ 26 ಸ್ಥಾನಗಳನ್ನು ಗಳಿಸಿ ಕಳೆದ ಬಾರಿಗಿಂತ 9 ಹೆಚ್ಚು ಲೋಕಸಭಾ ಸ್ಥಾನಗಳನ್ನು ಗಳಿಸಿದೆ. ಈ ಬಾರಿ ಮತ್ತೊಂದು ವಿಶೇಷವೆಂದರೆ ರಾಜ್ಯದ ಎಲ್ಲಾ ಎಸ್ಸಿ ಎಸ್ಟಿ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು. ಕಾಂಗ್ರೆಸ್, ಜನತಾದಳ ಪಕ್ಷಗಳು ತಲಾ ಒಂದೊಂದು ಸ್ಥಾನಗಳನ್ನು ಗಳಿಸಿ ನೆಲಕಚ್ಚಿ ಮಲಗಬೇಕಾದ ಸ್ಥಿತಿಗೆ ಇಳಿದಿದೆ. ಚಿಂಚೋಳಿ ವಿಧಾನ ಸಭಾ ಸ್ಥಾನವನ್ನೂ ಕೂಡ ಉಪಚುನಾವಣೆಯಲ್ಲಿ ಕಾಂಗ್ರೆಸ್ ಉಳಿಸಿಕೊಳ್ಳದೆ ಹೋಗಿದೆ. ಉಳಿದ ಪಕ್ಷಗಳು ಹೇಳ ಹೆಸರಿಲ್ಲದೇ ಹೋಗಿದ್ದರೂ ಕಾಂಗ್ರೆಸ್ ಅನ್ನು ಸೋಲಿಸುವಲ್ಲಿ ಬಿಜೆಪಿಯನ್ನು ಗೆಲ್ಲಿಸುವಲ್ಲಿ ಕೆಲವೆಡೆಗಳಲ್ಲಿ ಇವುಗಳು ಪಡೆದ ಮತಗಳು ಗಮನಾರ್ಹವಾಗಿದೆ.

ವಾಸ್ತವದಲ್ಲಿ ಈ ಎಲ್ಲಾ ಚುನಾವಣಾ ಅಂಕಿ ಸಂಖ್ಯೆಗಳು, ವಿವರಗಳು ಭಾರತದ ‘ಪ್ರಜಾ ಪ್ರಭುತ್ವ’ದ ನೈಜ ಲಕ್ಷಣಗಳನ್ನೇನೂ ಬಿಂಬಿಸುವುದಿಲ್ಲ. ಒಂದು ವೇಳೆ ಹಾಗೆಂದುಕೊಂಡರೆ ಅದು ತಪ್ಪಾದ ಗ್ರಹಿಕೆ ಹಾಗೂ ನಿಲುವುಗಳಿಗೆ ದಾರಿ ಮಾಡಿಕೊಡುತ್ತದೆ. ಈ ತಪ್ಪುಗ್ರಹಿಕೆಗಳಲ್ಲೇ ವಿದ್ಯಾವಂತರಲ್ಲಿ ಹಲವರು ಈಗಲೂ ತೇಲಾಡುತ್ತಿದ್ದಾರೆ. ಈ ದೇಶದ ಹಳ್ಳಿಗಾಡನ್ನೊಳಗೊಂಡ ಬಹುಸಂಖ್ಯಾತ ಜನರ ಬದುಕಿನಲ್ಲಿ ಈ ಪ್ರಜಾ ಪ್ರಭುತ್ವ, ಸಂವಿಧಾನ, ಸಂಸತ್ತು, ಚುನಾವಣೆಗಳು ಯಾವುದೇ ಮೂಲಭೂತ ಬದಲಾವಣೆಗಳನ್ನು ತಂದಿಲ್ಲ. ಅಲ್ಲಿ ದಲಿತ, ಆದಿವಾಸಿ, ಹಿಂದುಳಿದ ಜನಸಾಮಾನ್ಯರಿದ್ದಾರೆ. ಅವರೆಲ್ಲರೂ ಎಲ್ಲಾ ಹಕ್ಕುಗಳಿಂದ ವಂಚಿತವಾಗಿ ಬಡವರಾಗಿಯೇ ಈಗಲೂ ಉಳಿಸಲ್ಪಟ್ಟಿದ್ದಾರೆ ಎನ್ನುವುದೇ ಸರಿಯಾದುದು. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳು, ಅಭ್ಯರ್ಥಿಗಳ ಬಗ್ಗೆ ಭ್ರಮೆಗಳು ಕಡಿಮೆ. ಒಂದು ಗಣನೀಯ ದೊಡ್ಡ ಸಂಖ್ಯೆಯ ಜನಸಾಮಾನ್ಯರಿಗೆ ಮೊದಲಿನಿಂದಲೂ ಇವು ಯಾವುವೂ ಹತ್ತಿರ ಕೂಡ ಸುಳಿದಿಲ್ಲ ಎನ್ನುವುದು ನಗರ ಕೇಂದ್ರಿತ ಚಿಂತನೆಗಳಿಗೆ ಈಗಲೂ ದಕ್ಕದೆ ಹೋಗುತ್ತಿವೆ. ಚುನಾವಣೆಗಳಲ್ಲಿ ಮತ ಚಲಾಯಿಸಿದವರಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲದ ಹಳ್ಳಿಗಾಡಿನ ಹಾಗೆಯೇ ನಗರ ಪ್ರದೇಶದ ಬಹುತೇಕರು ಇಂತಹುದೇ ಪಕ್ಷಕ್ಕೆ ಮತ ಚಲಾಯಿಸಿದರೆ ತಮಗೆ ಹಾಗೂ ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯದೊಂದಿಗೆ ಪ್ರಜ್ಞಾಪೂರ್ವಕವಾಗಿ ತಮ್ಮ ಮತಗಳನ್ನು ಚಲಾಯಿಸಿರುವುದಿಲ್ಲ. ಅದು ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ಒಂದು ಮಟ್ಟಕ್ಕೆ ಇತ್ತೆನ್ನಬಹುದೇನೋ. ಆದರೆ ಆಗಲೂ ಬಹುಸಂಖ್ಯಾತ ಜನರು ಚುನಾವಣಾ ಪ್ರಕ್ರಿಯೆಗಳಿಂದಲೇ ದೂರ ಉಳಿಯುತ್ತಿದ್ದರು. ಭಾರೀ ಭೂ ಮಾಲಕ ಹಿಡಿತದ ಹಿಂದುಳಿದ ಪ್ರಾಂತಗಳಲ್ಲಿ ಕಳ್ಳಮತದಾನಗಳು, ಮತಗಟ್ಟೆ ವಶಪಡಿಸುವಿಕೆಗಳು ಮಾಮೂಲಿ ವಿಚಾರಗಳಾಗಿದ್ದವು.

ಆ ಬಗೆಗಿನ ವರದಿಗಳು ಹೊರ ಜಗತ್ತಿಗೆ ತಿಳಿಯುತ್ತಿದ್ದುದು ಆಗ ಬಹಳ ವಿರಳವಾಗಿತ್ತು. ಅಂದರೆ ಚಲಾವಣೆಯಾಗುವ ಮತಗಳು ಆಯಾ ಮತದಾರರ ಪ್ರಜ್ಞಾಪೂರ್ವಕ ಭಾಗವಹಿಸುವಿಕೆಯಿಂದ ಆದವುಗಳಾಗಿರಲಿಲ್ಲ. ಈಗ ಒಂದು ಮಟ್ಟದ ವಿದ್ಯಾಭ್ಯಾಸದ ಬೆಳವಣಿಗೆ ನಗರೀಕರಣದ ಹೆಚ್ಚಳ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಇತ್ಯಾದಿಗಳಿಂದಾಗಿ ಮೊದಲಿಗಿಂತ ಹೆಚ್ಚು ಪಾರದರ್ಶಕತೆ ಚುನಾವಣೆಗಳಲ್ಲಿ ಬಂದಿದ್ದರೂ ಪೂರ್ಣವಾಗಿ ವಶೀಲಿಬಾಜಿ, ಬೆದರಿಕೆ ಹಾಗೂ ಕಳ್ಳ ಮತದಾನಗಳಿಂದ ಮುಕ್ತವಲ್ಲ. ಈ ಬಾರಿ ಕೂಡ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಇಂತಹುದೇ ನಿರ್ದಿಷ್ಟ ಗುಂಡಿಗಳನ್ನು ಒತ್ತುವಂತೆ ಮುಗ್ಧ ಜನರಿಗೆ ಒತ್ತಾಯಿಸಿರುವ, ಏಜೆಂಟರೇ ಮತದಾರರ ಪರವಾಗಿ ಒತ್ತಿರುವ ವರದಿಗಳೂ ಇವೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಹತ್ತು ಲಕ್ಷ ಮುಸ್ಲಿಮರು, 17 ಲಕ್ಷ ದಲಿತರ ಹೆಸರುಗಳೇ ಮತದಾರ ಪಟ್ಟಿಯಿಂದಲೇ ಕಾಣೆಯಾಗಿರುವ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಕೋಲ್ಸೆ ಪಾಟೀಲ್ ಹೇಳಿರುವುದನ್ನು ಉಲ್ಲೇಖಿಸಿ ‘ಕಾರವಾನ್’ ಪತ್ರಿಕೆ ವರದಿ ಮಾಡಿದೆ. ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಾಕಷ್ಟು ಜನರಿಗೆ ವಿಶ್ವಾಸವಿಲ್ಲ. ಅದಕ್ಕೆ ಕಾರಣ ಯಾವುದೇ ಗುಂಡಿಯನ್ನು ಒತ್ತಿದರೂ ಆ ಮತ ಬಿಜೆಪಿಗೇ ಹೋಗುತ್ತದೆ ಎನ್ನುವ ಆರೋಪಗಳು ಕೂಡ ಹಿಂದಿನಿಂದಲೂ ಇವೆ. ಬಿಜೆಪಿ ಕೂಡ ಇಂತಹುದೇ ಆರೋಪವನ್ನು ಹಿಂದೆ ಕಾಂಗ್ರೆಸ್ ಮೇಲೆ ಹೊರಿಸಿತ್ತು.

ಅಲ್ಲದೇ ಸ್ಯಾಮ್ ಪಿತ್ರೋಡಾರಂತಹ ಗಣಕ ತಜ್ಞ ಕೂಡ ವಿದ್ಯುನ್ಮಾನ ಮತಯಂತ್ರಗಳು ಪೂರ್ಣ ಲೋಪಮುಕ್ತವಲ್ಲ, ಅಕ್ರಮಗಳು ನಡೆಯುವ ಸಾಧ್ಯತೆಗಳೂ ಇವೆ ಎಂದು ಹೇಳಿದ್ದಾರೆ. ಆದರೆ ಕೆಲವು ವಿದ್ಯುನ್ಮಾನ ತಜ್ಞರು ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗದು ಎಂಬ ಚುನಾವಣಾ ಆಯೋಗದ ನಿಲುವನ್ನು ಪುಷ್ಟೀಕರಿಸಿದ್ದಾರೆ. ಆದರೆ ಇದುವರೆಗೂ ವರದಿಯಾದ ಪ್ರಕರಣಗಳಲ್ಲಿ ಬೇರೆ ಪಕ್ಷಕ್ಕೆ ನೀಡಿದ ಮತಗಳೆಲ್ಲವೂ ಬಿಜೆಪಿಗೆ ಯಾಕೆ ಹೋಗುತ್ತಿತ್ತು ಎಂಬ ಬಗ್ಗೆ ಯಾವುದೇ ವಿವರಣೆ ಬಂದ ಹಾಗೆ ಕಾಣುತ್ತಿಲ್ಲ. ಮತ ಪಟ್ಟಿಯಿಂದ ಲಕ್ಷಗಳ ಸಂಖ್ಯೆಯಲ್ಲಿ ಮತದಾರರ ಹೆಸರುಗಳೇ ಕಾಣೆಯಾಗುವ ಮತದಾರರ ಹೈಜಾಕ್‌ನ ಪರಿಯ ಬಗ್ಗೆ ಯಾವುದೇ ಸೂಕ್ತ ವಿವರಣೆ ಕಾಣುತ್ತಿಲ್ಲ. ಆಳುವ ಶಕ್ತಿಗಳು ಇಪ್ಪತ್ತೊಂದನೇ ಶತಮಾನದಲ್ಲೂ ಮತಚಲಾವಣೆಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಯಂತ್ರಿಸಬಲ್ಲರು ಎಂಬುದಕ್ಕೆ ಇವೆಲ್ಲವೂ ಉದಾಹರಣೆಗಳಾಗಿ ನಮ್ಮೆದುರು ನಿಲ್ಲುತ್ತವೆ. ಅಂದರೆ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಮತನೀಡಿಕೆ ಎಂಬುದು ಆಡಳಿತಕ್ಕೆ ನಿರ್ಣಾಯಕ ವಿಚಾರವಲ್ಲ.

ಯಾಕೆಂದರೆ ಕೇವಲ ಶೇ. 10ರಷ್ಟು ಮತಚಲಾವಣೆಯಾದಲ್ಲೂ ಸರಕಾರ ರಚನೆಯಾಗುತ್ತಿರುವ ದೇಶ ನಮ್ಮದು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಕಾಶ್ಮೀರ, ಪಂಜಾಬ್, ಈಶಾನ್ಯ ಭಾರತದ ಹಲವೆಡೆಗಳಲ್ಲಿ ಈ ರೀತಿ ಆಗಿರುವ ಉದಾಹರಣೆಗಳಿವೆ. ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನ ಜನರು ಆ ದಿನ ತಮಗೆ ದೊರೆಯಬಹುದಾದ ಆದಾಯಕ್ಕಾಗಿಯೋ ಇಲ್ಲವೇ ಯಾರದೋ ಮರ್ಜಿಗೆ ಬಿದ್ದೋ ತಮ್ಮ ಮತಗಳನ್ನು ಹಾಕುವವರೇ ಹೆಚ್ಚಿನವರು. ಅದರಲ್ಲೂ ಜಾತಿ, ಒಳಜಾತಿ, ಮತ, ಧರ್ಮ, ಒಳಧರ್ಮಗಳ ಸೆರೆಯಲ್ಲಿರುವವರು ಆ ವಿಚಾರಗಳ ಮೇಲೆಯೇ ತಮ್ಮ ಮತವನ್ನು ನೀಡುತ್ತಾರೆ. ಈ ವಿಭಾಗದಲ್ಲಿ ವಿದ್ಯಾವಂತರೆನಿಸಿಕೊಂಡವರೂ ಬಹಳ ಜನರಿದ್ದಾರೆ. ಆಗಲೂ ಶೇಕಡಾವಾರು ಮತದಾನವನ್ನು ನೋಡಿದರೆ ಬಹಳ ಕಡಿಮೆಯೇ ಆಗಿರುತ್ತದೆ. ಒಬ್ಬ ಅಭ್ಯರ್ಥಿಯನ್ನು ಪುರಸ್ಕರಿಸುವವರಿಗಿಂತಲೂ ತಿರಸ್ಕರಿಸುವವರೇ ಬಹುಸಂಖ್ಯಾತರಾಗಿರುತ್ತಾರೆ. ಈ ಬಾರಿ ಒಬ್ಬ ಅಭ್ಯರ್ಥಿ ಹಾಗೂ ಪಕ್ಷವನ್ನು ಬೆಂಬಲಿಸಿ, ಸಂಘ ಪರಿವಾರ ಹಾಗೂ ಬಿಜೆಪಿಯನ್ನು ವಿರೋಧಿಸಿ ಪ್ರಚಾರ ನಡೆಸಿದ ಸಮಾಜಮುಖಿ ಗುಂಪಿಗೆ ಇವರ ಭಾಷಣಗಳೆಲ್ಲಾ ಮುಗಿದ ಮೇಲೆ ಕೊನೆಯಲ್ಲಿ ಜನರು ಕೇಳುತ್ತಿದ್ದುದು ‘‘ಅವರು ಇಷ್ಟು ಹಣ ಕೊಡುತ್ತೇವೆಂದು ಹೇಳಿದ್ದಾರೆ. ನೀವು ಹೇಳಿದ ಅಭ್ಯರ್ಥಿಗೆ ಮತ ನೀಡಿದರೆ ನೀವು ಎಷ್ಟು ಕೊಡುತ್ತೀರಿ’’ ಎಂದು. ಬಹುಪಾಲು ಜನರಿಗೆ ಚುನಾವಣೆಯೆಂದರೆ ಇಷ್ಟೆಯೇ. ಇದಕ್ಕಿಂತ ಹೆಚ್ಚಿನ ಲಾಭ ಅವರಿಗೆ ಈ ವರೆಗೂ ಕಾಣಿಸಿಲ್ಲವೆನ್ನೋದೇ ವಾಸ್ತವ. ಅಂದರೆ ನಮ್ಮ ದೇಶ ಇನ್ನೂ ಪ್ರಜಾತಾಂತ್ರೀಕರಣವಾಗಿಲ್ಲ.

ಅದು ಕೇವಲ ಚುನಾವಣೆಗಳಿಂದ ಮಾತ್ರ ಆಗುವಂತಹುದೂ ಅಲ್ಲ. ಪ್ರಜಾತಂತ್ರ ಬೇರು ಮಟ್ಟದಿಂದ ನೆಲೆಗೊಂಡಾಗ ಮಾತ್ರ ಪ್ರಜಾ ಪ್ರಭುತ್ವ ಅಸ್ತಿತ್ವಕ್ಕೆ ಬರಲು ಸಾಧ್ಯ. ಅದಿಲ್ಲದೇ ಏನೇ ಹೇಳಿದರೂ ಅದು ಆಳುವ ಶಕ್ತಿಗಳಿಗೆ ಜನಸಾಮಾನ್ಯರನ್ನು ಯಾಮಾರಿಸುವ ಸಾಧನಗಳಾಗಿ ಬಳಕೆಯಾಗುತ್ತವೆ. ಚುನಾಯಿತ ರೀತಿಯ ಫ್ಯಾಶಿಸ್ಟ್ ನಿರಂಕುಶತ್ವವನ್ನೇ ಪ್ರಜಾಪ್ರಭುತ್ವದ ಸೋಗಿನಡಿಯಲ್ಲಿ ಪಾಲಿಸಿಕೊಂಡು ಬರಲಾಗಿದೆ. ಮೊದಲು ಅದಕ್ಕೆ ಹೆಚ್ಚು ಪರದೆಯಿದ್ದರೆ ಈಗದು ತನ್ನ ನಗ್ನ ರೂಪ ಪ್ರದರ್ಶಿಸಬೇಕಾಗಿ ಬಂದಿದೆ. ಇಂದಿನ ಸ್ಥಿತಿ ಹೇಗಿದೆಯೆಂದರೆ ಆಳುವ ಶಕ್ತಿಗಳು ತೋರುಗಾಣಿಕೆಯ ಪ್ರಜಾಪ್ರಭುತ್ವವನ್ನು ಕೂಡ ಜನಸಾಮಾನ್ಯರ ಮುಂದೆ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಮೊದಲೂ ಕೂಡ ಅದು ಬಹುಸಂಖ್ಯಾತರ ಪ್ರಜಾ ಪ್ರಭುತ್ವವಾಗಿರಲಿಲ್ಲ. ಈಗ ಸಂವಿಧಾನ, ಸಂಸತ್ತು ಚುನಾವಣೆಗಳನ್ನು ರಾಜಾರೋಷವಾಗಿ ಬಳಸಿಕೊಂಡು ಫ್ಯಾಶಿಸ್ಟ್ ಆಡಳಿತವನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಹೇರಲಾರಂಭಿಸಿದೆ.

ಭಾರತದ ಮಧ್ಯಮ ವರ್ಗ ಸಾಪೇಕ್ಷವಾಗಿ ಈ ‘ಪ್ರಜಾಪ್ರಭುತ್ವ’ದ ಕೆಲವು ಫಲಗಳನ್ನು ಪಡೆಯುತ್ತಾ ಬಂದಿತ್ತು. ಈಗ ಅದಕ್ಕೆ ಆ ಫಲಗಳು ಸಿಗಲಾಗದ ಸ್ಥಿತಿ ಬಂದಿದೆ. ಜಾಗತೀಕರಣದ ಸಾಪೇಕ್ಷ ಫಲಾನುಭವಿಗಳೂ ಕೂಡ ಪ್ರಧಾನವಾಗಿ ಈ ಮಧ್ಯಮ ವರ್ಗವೇ ಆಗಿತ್ತು. ಅದು ಈಗ ಕರಗಿರುವುದರಿಂದಾಗಿ ಈ ವರ್ಗ ಹತಾಶ ಸ್ಥಿತಿಯಲ್ಲಿದೆ. ಅಸಮಾಧಾನ, ಅಸಹನೆ, ಆಕ್ರೋಷಗಳಿಂದ ಅದು ತತ್ತರಿಸುತ್ತಿದೆ. ಅದರಿಂದಾಗಿ ಸಂಘ ಪರಿವಾರ ಮುಂದೊಡ್ಡುತ್ತಿರುವ ಜಾತಿ ಹಾಗೂ ಕೋಮು ವಿಷಗಳನ್ನು ಹಾಗೆಯೇ ಈ ವರ್ಗದ ಯುವ ಸಮೂಹ ನುಂಗುತ್ತಿದೆ. ಅದಕ್ಕೆ ಈಗ ಪ್ರಜಾ ಪ್ರಭುತ್ವ ಮೌಲ್ಯಗಳು ಕಂಟಕವೆನಿಸತೊಡಗಿದೆ. ಏಕ ವ್ಯಕ್ತಿ ಆಡಳಿತ, ಇಲ್ಲವೇ ಸೇನಾ ಮಾದರಿಯ ಫ್ಯಾಶಿಸ್ಟ್ ಆಡಳಿತದ ಅಮಲಿನಲ್ಲಿ ಬಿದ್ದಿದೆ. ಬಲಿಷ್ಠ ವ್ಯಕ್ತಿಯ ಕೈಯಲ್ಲಿ ದೇಶವಿದ್ದರೆ ತಾವು ಸುರಕ್ಷಿತರಾಗಬಹುದೆಂಬ ಭ್ರಮೆಗಳಲ್ಲಿ ತೇಲುತ್ತಿದೆ. ಇವರೇ ಸಂಘ ಪರಿವಾರ ಹಾಗೂ ಬಿಜೆಪಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಅದರಿಂದ ಅವರಿಗೆ ಸಾಕಷ್ಟು ಆರ್ಥಿಕ ಲಾಭವೂ ಸಿಗುತ್ತಿದೆ.

ಭಾರತ ದೇಶದಲ್ಲಿ ಪ್ರಾಬಲ್ಯದಲ್ಲಿರುವ ಧರ್ಮ, ಜಾತಿ, ಆಚಾರ, ದೇವರು, ನಂಬಿಕೆ ಮೊದಲಾದ ವಿಚಾರಗಳಲ್ಲಿನ ಹಳೇ ಊಳಿಗಮಾನ್ಯ ಚಿಂತನೆಗಳನ್ನು ಸುಲಭವಾಗಿ ಸಂಘಪರಿವಾರ ಬಳಸಿಕೊಳ್ಳುತ್ತಿದೆ. ಕಾರ್ಪೊರೇಟ್ ಹಾಗೂ ಭಾರೀ ಆಸ್ತಿವಂತ ಶಕ್ತಿಗಳ ಎಲ್ಲಾ ಬೆಂಬಲವೂ ಅದಕ್ಕಿದೆ. ವಿರೋಧ ಪಕ್ಷಗಳು ವಿರೋಧಿಸಲಾಗದಂತೆ ಶಕ್ತಿಹೀನವಾಗಿ ಕುಳಿತಿರುವ ಸಂದರ್ಭ ಕೂಡ ಅದಕ್ಕೆ ಮತ್ತಷ್ಟು ಪೂರಕವಾಗಿದೆ. ಅಂತಹ ವಿರೋಧ ಪಕ್ಷಗಳನ್ನೇ ನೆಚ್ಚಿಕೊಂಡು ಸಂಘ ಪರಿವಾರದ ಫ್ಯಾಶಿಸ್ಟ್ ಶಕ್ತಿಗಳಿಗೆ ತಡೆಯೊಡ್ಡಬಹುದು ಎಂದುಕೊಳ್ಳುವುದು ಫ್ಯಾಶಿಸ್ಟ್ ಶಕ್ತಿಗಳಿಗೆ ಪೂರಕವಾಗುತ್ತವೆಯೇ ಹೊರತು ಬೇರೇನೂ ಆಗುವುದಿಲ್ಲ. ಅಲ್ಲದೆ ಅಂತಹ ನಿಲುವು ತಾಳಿ ಪ್ರಚಾರಕ್ಕೆ ಇಳಿಯುವವರ ಬಗ್ಗೆ ಭರವಸೆ ಕೂಡ ಜನರಲ್ಲಿ ಮೂಡುವುದಿಲ್ಲ. ಜನಸಾಮಾನ್ಯರ ನೈಜ ಪರ್ಯಾಯವೊಂದೇ ಏನನ್ನಾದರೂ ಸಾಧಿಸಬಲ್ಲದೇ ಹೊರತು ಬೇರೇನಿಲ್ಲ. ವಿರೋಧ ಮಾಡಲಾಗದ ವಿರೋಧ ಪಕ್ಷಗಳನ್ನು, ಮತ್ತವುಗಳ ನಾಯಕರನ್ನು ಹೊರಗಿಟ್ಟು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನಸಾಮಾನ್ಯರನ್ನು ಒಂದೇ ಕಡೆ ಅಣಿನೆರೆಸುವ ಚಟುವಟಿಕೆಗಳು, ಕಾರ್ಯಕ್ರಮಗಳು ಹೆಚ್ಚಾಗಬೇಕಾದ ಆವಶ್ಯಕತೆ ಬಹಳ ಇದೆ.


ಮಿಂಚಂಚೆ: nandakumarnandana67gmail.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top