ಇಂದಿರಾ ಎಮರ್ಜೆನ್ಸಿ ಮತ್ತು ಮೋದಿ ಫ್ಯಾಶಿಸಂ | Vartha Bharati- ವಾರ್ತಾ ಭಾರತಿ

---

ಇಂದಿರಾ ಎಮರ್ಜೆನ್ಸಿ ಮತ್ತು ಮೋದಿ ಫ್ಯಾಶಿಸಂ

ಇಂದು ಭಾರತದ ಜನತೆ ವರ್ತಮಾನದಲ್ಲಿ ಎಮರ್ಜೆನ್ಸಿ ಹೇರಿದ ಇಂದಿರಾ ಗಾಂಧಿಗಿಂತ ದೊಡ್ಡ ಆಪತ್ತನ್ನು ಎದುರಿಸಬೇಕಾಗಿದೆ. ಎಮರ್ಜೆನ್ಸಿಯಂತೆ ಇದು ತಾತ್ಕಾಲಿಕ ಶತ್ರುವಲ್ಲ ಹಾಗೂ ಕೇವಲ ಕಣ್ಣೆದುರಿಗಿರುವ ಶತ್ರುವಲ್ಲ. ದೀರ್ಘಕಾಲಿಕ ಶತ್ರು. ಎದುರಿಗೂ, ಜೊತೆ ಜೊತೆಗೂ ಮತ್ತು ನಮ್ಮ ಒಳಗೂ ಇರುವ ಶತ್ರು. ಆದ್ದರಿಂದ ಫ್ಯಾಶಿಸ್ಟ್ ವಿರೋಧಿ ಹೋರಾಟ ಇನ್ನೂ ಹೆಚ್ಚಿನ ಸ್ಪಷ್ಟತೆ, ದಿಟ್ಟತೆ, ದೀರ್ಘಕಾಲೀನ ಸಿದ್ಧತೆ ಮತ್ತು ಒಂದು ಶತ್ರುವಿನ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಶತ್ರುವಿನ ಬಗ್ಗೆ ಮರುಳಾಗುವ ‘ಜೆಪಿ ಕುರುಡು’ಗಳಿಂದ ಮುಕ್ತವಾದ ಎಚ್ಚರಗಳ ಅಗತ್ಯವಿದೆ.

ಇದೇ ಜೂನ್ 25ರಂದು ದೇಶಾದ್ಯಂತ ಎಮರ್ಜೆನ್ಸಿಯ ಕಾಲದ ಕರಾಳ ದಿನಗಳನ್ನು ನೆನಪಿಸಿಕೊಳ್ಳಲಾಯಿತು. ವಿಶೇಷವಾಗಿ ಬಿಜೆಪಿ ಈ ಸಂದರ್ಭವನ್ನು ಮತ್ತೊಮ್ಮೆ ಕಾಂಗ್ರೆಸನ್ನು ಹೀಯಾಳಿಸಲು ಬಳಸಿಕೊಂಡಿತು. ಕಾಂಗ್ರೆಸ್ ಮೂಲಭೂತವಾಗಿಯೇ ಪ್ರಜಾತಂತ್ರ ವಿರೋಧಿಯೆಂದು ಹಾಗೂ ತಮ್ಮ ಪಕ್ಷವು ಆಗಲೂ ಈಗಲೂ ಭಾರತದ ಪ್ರಜಾತಂತ್ರದ ರಕ್ಷಣೆಯನ್ನು ಮಾಡುತ್ತಿದೆಯೆಂದು ಪ್ರಧಾನಿ ಮೋದಿ ಎಗ್ಗುಸಿಗ್ಗಿಲ್ಲದೆ ಭಾಷಣ ಮಾಡಿದರು. ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಎಮರ್ಜೆನ್ಸಿಯು ಅತ್ಯಂತ ಕರಾಳ ಕಾಲಘಟ್ಟ. ಭಾರತದ ಪ್ರಜಾತಂತ್ರಕ್ಕೆ ಬಿದ್ದ ದೊಡ್ಡ ಪೆಟ್ಟು. ಮತ್ತೊಮ್ಮೆ ಭಾರತದ ಪ್ರಜಾತಂತ್ರವು ಹೀಗೆ ಅಮಾನತ್ತಿಗೆ ಒಳಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ದೇಶದ ಜನರ ಮೇಲಿದೆ. ಅದಕ್ಕಾಗಿ ಎಮರ್ಜೆನ್ಸಿಯನ್ನು ಪದೇಪದೇ ನೆನಪಿಸಿಕೊಳ್ಳಲೇ ಬೇಕು ಮತ್ತು ಅದಕ್ಕೆ ಕಾರಣವಾದ ಸಂಗತಿಗಳನ್ನು ಮತ್ತು ಕಾರಣಕರ್ತರನ್ನು ಎಂದಿಗೂ ಮರೆಯಬಾರದು.

ಆದರೆ ಮೋದಿಯವರ ಬಿಜೆಪಿಗೆ (ಮತ್ತು ಅದರ ಪೂರ್ವಾಶ್ರಮವಾದ ಭಾರತೀಯ ಜನಸಂಘಕ್ಕೆ ಮತ್ತು ಇವರ ಮಾತೃ ಸಂಘಟನೆಯಾದ ಆರೆಸ್ಸೆಸ್‌ಗೆ) ಎಮೆರ್ಜೆನ್ಸಿಯನ್ನು ವಿರೋಧಿಸಿದ ಇತಿಹಾಸವಿದೆಯೇ? ಅಥವಾ ಭವಿಷ್ಯದಲ್ಲಿ ಈ ದೇಶದಲ್ಲಿ ಪ್ರಜಾತಂತ್ರವನ್ನು ಕಾದುಕೊಳ್ಳುವ ಇರಾದೆಯಿದೆಯೇ? ಅಸಲು ಇವರಿಗೂ ಪ್ರಜಾತಂತ್ರದ ಮೌಲ್ಯಗಳಿಗೂ ಏನಾದರೂ ಸಂಬಂಧವಿದೆಯೇ? ಕಳೆದ 100 ವರ್ಷಗಳ ಆರೆಸ್ಸೆಸ್ ಇತಿಹಾಸ, ಸಿದ್ಧಾಂತ ಹಾಗೂ ಕಳೆದ 15 ವರ್ಷಗಳ ಗುಜರಾತ್ ಮತ್ತು ಕಳೆದ ಐದು ವರ್ಷಗಳ ಮೋದಿ ಆಡಳಿತವನ್ನು ‘ಅನುಭವಿಸಿದ’ ನಂತರವೂ ಎಮರ್ಜೆನ್ಸಿ ವಿರುದ್ಧ ಮೋದಿ ಆಡುತ್ತಿರುವ ಮಾತುಗಳನ್ನು ನಂಬಬಹುದೇ? ಎಮರ್ಜೆನ್ಸಿಯಲ್ಲಿ ಆರೆಸ್ಸೆಸ್ ಪಾತ್ರವೇನಿತ್ತು?

 ಅದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಆ ಕಾಲಘಟ್ಟದಲ್ಲಿ ಆರೆಸ್ಸೆಸ್‌ನ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರು 1975ರ ಆಗಸ್ಟ್ 22ರಂದು ಮತ್ತು ನವೆಂಬರ್ 10ರಂದು ಇಂದಿರಾ ಗಾಂಧಿಗೆ ಬರೆದ ಪತ್ರಗಳನ್ನು ಓದಬೇಕು. ಆ ಪತ್ರಗಳಿಗೆ ಉತ್ತರ ಬರದಿದ್ದಾಗ ಕಂಗಾಲಾಗಿ, ಇಂದಿರಾ ಗಾಂಧಿಯವರ ಮತ್ತು ಎಮರ್ಜೆನ್ಸಿಯ ಕಟ್ಟಾ ಬೆಂಬಲಿಗರಾಗಿದ್ದ ವಿನೋಬಾ ಭಾವೆಯವರಿಗೆ ತಮ್ಮ ಪರವಾಗಿ ಮಧ್ಯಪ್ರವೇಶ ಮಾಡಲು ಕೋರಿ ಆರೆಸ್ಸೆಸ್ ಬರೆದ ಪತ್ರಗಳನ್ನು ಅಧ್ಯಯನ ಮಾಡಬೇಕು. ಅಸಲು ಸಂಗತಿಯೇನೆಂದರೆ ಆರೆಸ್ಸೆಸ್‌ನ ಈ ಸರಸಂಘಚಾಲಕ 1975ರ ಪತ್ರಗಳಲ್ಲಿ ಎಮರ್ಜೆನ್ಸಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದರು ಮತ್ತು ಆ ಕಾರಣದಿಂದ ತಮ್ಮನ್ನು ಹಾಗೂ ಆರೆಸ್ಸೆಸನ್ನು ಬಂಧಮುಕ್ತಗೊಳಿಸಬೇಕೆಂದು ಇಂದಿರಾ ಗಾಂಧಿಯವರನ್ನು ಬೇಡಿಕೊಂಡಿದ್ದರು. ಅಷ್ಟು ಮಾತ್ರವಲ್ಲ, ಎಮರ್ಜೆನ್ಸಿಯನ್ನು ವಿರೋಧಿಸಿ ಲಕ್ಷಾಂತರ ಪ್ರಜಾತಂತ್ರವಾದಿ ಕಾರ್ಯಕರ್ತರು, ಕಮ್ಯುನಿಸ್ಟರು (ಸಿಪಿಐ ಅನ್ನು ಹೊರತುಪಡಿಸಿ), ನಕ್ಸಲೈಟರು ಜೈಲಿನಲ್ಲಿ ಕೊಳೆಯುತ್ತಾ, ಕೊಲೆಯಾಗುತ್ತಿದ್ದಾಗ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರು ‘ಮಾಫಿನಾಮಾ’(ತಪ್ಪೊಪ್ಪಿಗೆ ಪತ್ರ)ಗಳನ್ನು ಬರೆದುಕೊಟ್ಟು ಬಿಡುಗಡೆಯಾಗತೊಡಗಿದರು!

ಅಷ್ಟಾದರೂ ಎಮರ್ಜೆನ್ಸಿ ವಿರೋಧಿ ಹೋರಾಟದ ನಾಯಕ ಜಯಪ್ರಕಾಶ ನಾರಾಯಣ್ (ಜೆಪಿ) ಅವರು ಆರೆಸ್ಸೆಸನ್ನು ಒಂದು ಬಲವಾದ ಕಾಂಗ್ರೆಸ್ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಶಕ್ತಿಯೆಂದೇ ಪರಿಗಣಿಸಿದ್ದರು. ಮಾತ್ರವಲ್ಲ. ಆರೆಸ್ಸೆಸನ್ನು ಫ್ಯಾಶಿಸ್ಟ್ ಎಂದು ಕರೆಯುವುದಾದರೆ ತನ್ನನ್ನೂ ಸಹ ಫ್ಯಾಶಿಸ್ಟೆಂದೇ ಪರಿಗಣಿಸಬೇಕೆಂದು ಘೋಷಿಸುತ್ತಾ ಅವರನ್ನು ಬೇಶರತ್ ಸಮರ್ಥಿಸಿಕೊಂಡಿದ್ದರು. ಇಂತಹ ಉದಾರವಾದಿ ಪ್ರಜಾತಂತ್ರವಾದಿಗಳಲ್ಲಿ ಕಾಂಗ್ರೆಸ್ ವಿರೋಧಕ್ಕಿಂತ ಹೆಚ್ಚು ಕಾಂಗ್ರೆಸ್ ದ್ವೇಷವೇ (ಇದಕ್ಕೆ ಲೋಹಿಯಾ ಅವರೂ ಹೊರತಲ್ಲ) ಮನೆಮಾಡಿತ್ತು. ಈ ದ್ವೇಷವು ಆರೆಸ್ಸೆಸಿಗರ ಪ್ರಜಾತಂತ್ರ ದ್ವೇಷಿ ಹಿಂದೂರಾಷ್ಟ್ರ ಅಜೆಂಡಾದ ಬಗ್ಗೆ ಅವರನ್ನು ಕುರುಡಾಗಿಸಿತು. ಹಾಗೆ ನೋಡಿದರೆ ಗಾಂಧಿ ಹತ್ಯೆಯ ನಂತರ ಭಾರತದ ರಾಜಕಾರಣದಿಂದ ಹೊರದೂಡಲ್ಪಟ್ಟಿದ್ದ ಪ್ರಜಾತಂತ್ರ ದ್ವೇಷಿ ಆರೆಸ್ಸೆಸಿಗರಿಗೆ ಪ್ರಧಾನಧಾರೆ ರಾಜಕಾರಣದಲ್ಲಿ ಮರುಜನ್ಮ ನೀಡಿದ್ದೇ ಎಮರ್ಜೆನ್ಸಿ ವಿರೋಧಿ ಪ್ರಜಾತಾಂತ್ರಿಕ ಚಳವಳಿ ಎಂಬುದು ಈ ದೇಶದ ದುರಂತ ರಾಜಕೀಯ ವಿಪರ್ಯಾಸಗಳಲ್ಲಿ ಒಂದು.

ಅದೇ ರೀತಿ ವಾಜಪೇಯಿಯವರೂ ಸಹ ಬ್ರಿಟಿಷರ ವಿರುದ್ಧ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಂಧನಕ್ಕೊಳಗಾದಾಗ ‘ಮಾಫಿನಾಮ’ವನ್ನು ಬರೆದುಕೊಟ್ಟು, ಜೊತೆಗಾರರನ್ನು ಸಹ ಹಿಡಿದುಕೊಟ್ಟು ಹೊರಬಂದದ್ದನ್ನು ವಿದ್ವಾಂಸ ಎ.ಜಿ. ನೂರಾನಿಯವರು ಇಪ್ಪತ್ತು ವರ್ಷದ ಕೆಳಗೆ ದಾಖಲೆ ಸಮೇತ ಬಯಲಿಗೆಳೆದಿದ್ದಾರೆ. ಹಾಗೆಯೇ ಇವರ ಪೂರ್ವಜರಾದ ‘ಸಮರವೀರ’ ಸಾವರ್ಕರ್ ಬ್ರಿಟಿಷ್ ಬಂಧನದಲ್ಲಿದ್ದಾಗ ಬ್ರಿಟಿಷರ ಎಲ್ಲಾ ಶರತ್ತುಗಳನ್ನು ಚಾಚೂ ತಪ್ಪದೆ ಒಪ್ಪಿಕೊಂಡು ಹೊರಬಂದದ್ದನ್ನು ಮತ್ತು ಆ ಶರತ್ತಿನಂತೆ ಮುಂದೆ ಎಂದಿಗೂ ಬ್ರಿಟಿಷರ ವಿರುದ್ಧ ಧ್ವನಿ ಎತ್ತಲಿಲ್ಲವೆಂಬ ಸಂಗತಿಯನ್ನು ಬಿಜೆಪಿಯವರೂ ಸಹ ನಿರಾಕರಿಸಲಾಗದ ಮಟ್ಟಿಗೆ ಇತಿಹಾಸದಲ್ಲಿ ದಾಖಲಾಗಿದೆ.

ಅಷ್ಟು ಮಾತ್ರವಲ್ಲ. 1984ರ ಸಿಖ್ ಹತ್ಯಕಾಂಡಕ್ಕೆ ಪ್ರಧಾನ ಕಾರಣ ಕಾಂಗ್ರೆಸ್ ಪಕ್ಷ. ಅದಕ್ಕೆ ಕಾರಣಕರ್ತರಾದ ಎಲ್ಲಾ ಕಾಂಗ್ರೆಸ್ ನಾಯಕರಿಗೂ ಇನ್ನೂ ಶಿಕ್ಷೆಯಾಗಿಲ್ಲ. ಅಂತಹವರಲ್ಲಿ ಒಬ್ಬರಾದ ಕಮಲನಾಥ್ ಶಿಕ್ಷೆ ಅನುಭವಿಸುವ ಬದಲು ಅಧಿಕಾರ ಅನುಭವಿಸುತ್ತಿದ್ದಾರೆ. ಇವೆಲ್ಲವೂ ನಿಜ. ಆದರೆ ಸಿಖ್ ಹತ್ಯಾಕಾಂಡಕ್ಕೆ ಕಾಂಗ್ರೆಸನ್ನು ದೂಷಿಸುವ ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಸಿಖ್ ಹತ್ಯಾಕಾಂಡದಲ್ಲಿ ವಹಿಸಿದ ಪಾತ್ರವೇನು? ಇದರ ಬಗ್ಗೆ ಆಗ ಸಮಾಜವಾದಿ ಬಣದಲ್ಲಿದ್ದು ನಂತರದಲ್ಲಿ ಎನ್‌ಡಿಎ ನಾಯಕರಲ್ಲಿ ಒಬ್ಬರಾದ ಜಾರ್ಜ್ ಫೆರ್ನಾಂಡಿಸರೇ ಹೇಗೆ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ನಾಯಕರ ಆಣತಿಯ ಮೇರೆಗೆ ಬೀದಿಬೀದಿಗಳಲ್ಲಿ ಕಾಂಗ್ರೆಸ್ ಗೂಂಡಾಗಳ ಜೊತೆ ಸೇರಿ ಸಿಖ್ಖರ ಬೇಟೆಯಾಡಿದರು ಎಂಬುದನ್ನು ‘ಪ್ರತೀಕ್ಷಾ’ ಎಂಬ ತಮ್ಮ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ವಿವರಗಳನ್ನು ಇತಿಹಾಸಕಾರ ಪ್ರೊ. ಶಂಸುಲ್ ಇಸ್ಲಾಂ ಅವರನ್ನು ಒಳಗೊಂಡಂತೆ ಹಲವರು ಬಯಲು ಮಾಡಿದ್ದಾರೆ. ಆದರೆ ಅಧಿಕಾರವು ಎಲ್ಲಾ ರಕ್ತಚರಿತೆಗೂ ಬಿಳಿಬಣ್ಣ ಬಳಿದು ಮರೆಸುತ್ತದೆ. ವಾಸ್ತವವೇನೆಂದರೆ ಇಂದಿರಾ ಗಾಂಧಿ ಜಾರಿಗೆ ತಂದದ್ದು ತಾತ್ಕಾಲಿಕವಾದ ಘೋಷಿತ ಎಮರ್ಜೆನ್ಸಿಯಾದರೆ ಬಿಜೆಪಿ ಸರಕಾರದಲ್ಲಿ ನಿರಂತರವಾದ ಮತ್ತು ಅಘೋಷಿತ ಹಾಗೂ ಬಹು ಆಯಾಮದ ಎಮರ್ಜೆನ್ಸಿ ಜಾರಿಯಲ್ಲಿದೆ. ವಾಸ್ತವವಾಗಿ ಮೋದಿಯವರು ಜಾರಿಯಲ್ಲಿಟ್ಟಿರುವ ಎಮರ್ಜೆನ್ಸಿ ಭಾರತದ ಪ್ರಜಾತಂತ್ರಕ್ಕೆ ಇಂದಿರಾ ಎಮೆರ್ಜೆನ್ಸಿಗಿಂತ ದೊಡ್ಡ ಕಂಟಕವಾಗಿದೆ.

“Shadow of Fascism” ಇದರ ಬಗ್ಗೆ ಅಧ್ಯಯನ ಮಾಡಿರುವ ಪ್ರೊ. ಪ್ರಭಾತ್ ಪಟ್ನಾಯಕ್ ಅವರು ತಮ್ಮ ಇತ್ತೀಚಿನ (ಫ್ಯಾಶಿಸಂನ ನೆರಳು) ಎಂಬ ಲೇಖನದಲ್ಲಿ ಇಂದಿರಾ ಎಮರ್ಜೆನ್ಸಿಗೂ ಮೋದಿ ಫ್ಯಾಶಿಸಂಗೂ ಇರುವ ಕೆಲವು ಮೂಲಭೂತ ಮತ್ತು ಗಂಭೀರವಾದ ವ್ಯತ್ಯಾಸಗಳನ್ನು ಪಟ್ಟಿ ಮಾಡಿದ್ದಾರೆ:

ಇಂದಿರಾ ಎಮರ್ಜೆನ್ಸಿಗೂ ಮೋದಿ ಫ್ಯಾಶಿಸಂಗೂ ಇರುವ ವ್ಯತ್ಯಾಸಗಳು:

1. ಮೊದಲನೆಯದಾಗಿ ಆಗ ದಮನ ಮಾಡುತ್ತಿದ್ದದ್ದು ಕೇವಲ ಪ್ರಭುತ್ವದ ಯಂತ್ರಾಂಗಗಳಾದ ಪೊಲೀಸ್, ಸೇನೆ ಇತ್ಯಾದಿಗಳು. ಆದರೆ ಈಗ ಅದರ ಜೊತೆಗೆ ಗುಂಪುದಾಳಿ ಮಾಡುವ ಪುಂಡುಪಡೆಗಳು ಸೇರಿಕೊಂಡು ಬೀದಿಬೀದಿಯಲ್ಲಿ ಪ್ರಭುತ್ವದ ಪರವಾಗಿ ದೇಶದ ಹೆಸರಲ್ಲಿ ಮತ್ತು ಹಿಂದುತ್ವದ ಹೆಸರಲ್ಲಿ ದಾಳಿ ನಡೆಸುತ್ತಿದ್ದಾರೆ.

2. ತುರ್ತುಸ್ಥಿತಿ ಕಾಲಕ್ಕಿಂತ ಭಿನ್ನವಾಗಿ ಈಗಿನ ದಮನವನ್ನು ರಾಷ್ಟ್ರವಾದದ ಹೆಸರಿನಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ದಾಳಿಗೆ ಗುರಿಯಾಗುವವರು ದೇಶದ್ರೋಹಿಗಳು ಮತ್ತು ದಾಳಿ ಮಾಡುವವರು ದೇಶಪ್ರೇಮಿಗಳೂ ಆಗಿಬಿಡುತ್ತಿದ್ದಾರೆ. ಆದ್ದರಿಂದ ಇಂದಿರಾಗಾಂಧಿಯವರ ಕಾಲದಲ್ಲಿ ದಮನಕ್ಕೊಳಗಾದರೂ ಪ್ರತಿರೋಧಕ್ಕೆ ಮಾನ್ಯತೆ ಇರುತ್ತಿತ್ತು. ಈಗ ಪ್ರತಿರೋಧಕ್ಕೆ ಮಾನ್ಯತೆ ಹೋಗಿ ದಮನಕ್ಕೆ ಮಾನ್ಯತೆ ದಕ್ಕುವಂತಾಗಿದೆ.

3. ಮೂರನೆಯದಾಗಿ ಮಾಧ್ಯಮಗಳು ಆಗ ಪ್ರಭುತ್ವದ ವಿರುದ್ಧ ನಿಂತು ದಮನವನ್ನು ಬಯಲಿಗೆಳೆಯುತ್ತಿದ್ದವು. ಈಗ ಮಾಧ್ಯಮಗಳು ಪ್ರಭುತ್ವದ ಜೊತೆ ಸೇರಿ ದಮನವನ್ನು ಸಮರ್ಥಿಸುತ್ತಾ ಪ್ರತಿರೋಧವನ್ನು ಅಮಾನ್ಯಗಳಿಸಲು ಸಹಕರಿಸುತ್ತಿವೆ.

4. ನಾಲ್ಕನೆಯದಾಗಿ ಆಗ ಏನಿಲ್ಲವೆಂದರೂ ತೋರಿಕೆಗಾಗಿಯಾದರೂ ಪ್ರಭುತ್ವಗಳು ಕಾರ್ಪೊರೇಟುಗಳಿಂದ ಬಹಿರಂಗವಾದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದವು. ಈಗ ಬಹಿರಂಗವಾಗಿಯೇ ಪ್ರಭುತ್ವಗಳು ತಾವು ಕಾರ್ಪೊರೇಟುಗಳ ನಿಕಟವರ್ತಿಗಳೆಂದು ತೋರಿಸಿಕೊಳ್ಳುತ್ತವೆ.

5. ಆಗ ಇಂದಿರಾಗಾಂಧಿಯವರ ದಮನ ಯಾವುದೇ ಧರ್ಮ ಅಥವಾ ಜಾತಿಯ ವಿರುದ್ಧವಾಗಿರಲಿಲ್ಲ. ತನ್ನ ವಿರುದ್ಧ ಇದ್ದ ಎಲ್ಲರ ಮೇಲೂ ಅವರ ದಮನ ನಡೆಯುತ್ತಿತ್ತು. ಆದರೆ ಈಗ ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ಈ ದಮನ ಕೇಂದ್ರೀಕೃತವಾಗಿದೆ. ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಪಠ್ಯಪುಸ್ತಕವನ್ನು ಬದಲಾಯಿಸುವುದನ್ನೂ ಒಳಗೊಂಡಂತೆ ಎಲ್ಲಾ ವಿಧಾನಗಳನ್ನು ಪ್ರಭುತ್ವ ಬಳಸುತ್ತಿದೆ.

6. ಆರನೆಯದಾಗಿ, ಈಗ ಪ್ರಭುತ್ವವು ವೈಚಾರಿಕತೆ ಮತ್ತು ತಾರ್ಕಿಕತೆಯನ್ನು ನಾಶ ಮಾಡಿ ಅಂಧವಿಶ್ವಾಸ ಮತ್ತು ಸಾಕ್ಷಿ-ಪುರಾವೆಗಳ ತರ್ಕದ ಬಗ್ಗೆ ಅಸಹನೆಗಳನ್ನು ಹುಟ್ಟುಹಾಕುತ್ತಿದೆ.

7. ಈಗ ಪ್ರಭುತ್ವವು ಎಲ್ಲಾ ಸ್ವತಂತ್ರ ಮತ್ತು ಸ್ವಾಯತ್ತ ಸಾರ್ವಜನಿಕ ಸಂಸ್ಥೆಗಳನ್ನು ನಾಶಮಾಡಲು ಹೊರಟಿದೆ ಇಲ್ಲವೇ ತಾನು ಹೇಳಿದಂತೆ ಕೇಳುವ ಹೌದಪ್ಪಗಳನ್ನಾಗಿಸುತ್ತಿದೆ. ಈ ಎರಡೂ ಬಗೆಯ ದಮನಗಳ ನಡುವಿನ ವ್ಯತ್ಯಾಸಗಳನ್ನು ಸಾರಾಂಶದಲ್ಲಿ ಹೇಳುವುದಾದರೆ ಇಂದಿರಾಗಾಂಧಿಯವರ ಕಾಲದಲ್ಲೂ ಅಧಿಕಾರ ಕೇಂದ್ರೀಕರಣಗೊಂಡಿತ್ತು, ಸ್ವಾತಂತ್ರ್ಯ ಹರಣಗೊಂಡಿತ್ತು ಮತ್ತು ಅದು ಬಂಡವಾಳಶಾಹಿ ಅಭಿವೃದ್ಧಿ ಮತ್ತು ಪ್ರಜಾತಾಂತ್ರಿಕ ರಾಜಕಾರಣಗಳ ನಡುವಿನ ವೈರುಧ್ಯಗಳಿಂದಲೇ ಉದ್ಭವಿಸಿತ್ತು.

 ಆದರೆ ಮೋದಿ ಕಾಲದಲ್ಲಿ ಆಗುತ್ತಿರುವುದು ಕೇವಲ ಸ್ವಾತಂತ್ರ್ಯ ಹರಣ ಮತ್ತು ಅಧಿಕಾರ ಕೇಂದ್ರೀಕರಣ ಮಾತ್ರವಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ತುರ್ತುಸ್ಥಿತಿಗೂ ಈಗಿನ ಸ್ಥಿತಿಗೂ ಇರುವ ವ್ಯತ್ಯಾಸವನ್ನು ಸರ್ವಾಧಿಕಾರಕ್ಕೂ ಫ್ಯಾಶಿಸಂಗೂ ಇರುವ ವ್ಯತ್ಯಾಸವೆಂದು ಹೇಳಬೇಕು. ಮೇಲೆ ವಿವರಿಸಲಾದ ಪ್ರತಿಯೊಂದು ವ್ಯತ್ಯಾಸಗಳೂ ಸಹ ಕಾರ್ಪೊರೇಟ್ ಆಳ್ವಿಕೆ ಅಧಿಕಾರ ಮತ್ತು ಪ್ರಭುತ್ವದ ಅಧಿಕಾರ ಒಂದಾಗಿ ಮೇಳೈಸಿರುವ ಒಂದು ಫ್ಯಾಶಿಸ್ಟ್ ಆಳ್ವಿಕೆಯ ವಿವರಣೆಯೇ ಆಗಿದೆ. ಹೀಗಾಗಿ ಇಂದು ಭಾರತದ ಜನತೆ ವರ್ತಮಾನದಲ್ಲಿ ಎಮರ್ಜೆನ್ಸಿ ಹೇರಿದ ಇಂದಿರಾ ಗಾಂಧಿಗಿಂತ ದೊಡ್ಡ ಆಪತ್ತನ್ನು ಎದುರಿಸಬೇಕಾಗಿದೆ. ಎಮರ್ಜೆನ್ಸಿಯಂತೆ ಇದು ತಾತ್ಕಾಲಿಕ ಶತ್ರುವಲ್ಲ ಹಾಗೂ ಕೇವಲ ಕಣ್ಣೆದುರಿಗಿರುವ ಶತ್ರುವಲ್ಲ. ದೀರ್ಘಕಾಲಿಕ ಶತ್ರು. ಎದುರಿಗೂ, ಜೊತೆ ಜೊತೆಗೂ ಮತ್ತು ನಮ್ಮ ಒಳಗೂ ಇರುವ ಶತ್ರು. ಆದ್ದರಿಂದ ಫ್ಯಾಶಿಸ್ಟ್ ವಿರೋಧಿ ಹೋರಾಟ ಇನ್ನೂ ಹೆಚ್ಚಿನ ಸ್ಪಷ್ಟತೆ, ದಿಟ್ಟತೆ, ದೀರ್ಘಕಾಲೀನ ಸಿದ್ಧತೆ ಮತ್ತು ಒಂದು ಶತ್ರುವಿನ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಶತ್ರುವಿನ ಬಗ್ಗೆ ಮರುಳಾಗುವ ‘ಜೆಪಿ ಕುರುಡು’ಗಳಿಂದ ಮುಕ್ತವಾದ ಎಚ್ಚರಗಳ ಅಗತ್ಯವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top