ಭಾರತೀಯ ಪ್ರಗತಿಪರರು ಎಡವಿದ್ದೆಲ್ಲಿ ? | Vartha Bharati- ವಾರ್ತಾ ಭಾರತಿ

ಭಾರತೀಯ ಪ್ರಗತಿಪರರು ಎಡವಿದ್ದೆಲ್ಲಿ ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭರ್ಜರಿ ಬಹುಮತದೊಂದಿಗೆ ಎರಡನೇ ಅವಧಿಗೆ ಆಯ್ಕೆಯಾಗಿ ತಿಂಗಳು ಒಂದು ಕಳೆದರೂ ಅವರ ಟೀಕಾಕಾರರು ಮಾತ್ರ ಇನ್ನೂ ಫಲಿತಾಂಶದ ಹಿಂದಿನ ವಾಸ್ತವವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಮೋದಿ ನೇತೃತ್ವದ ಬಲಪಂಥೀಯ ಭಾರತೀಯ ಜನತಾ ಪಾರ್ಟಿ ಈಗಾಗಲೇ ಮುಂದಿನ ಚುನಾವಣಾ ' ಸಾಮ್ರಾಜ್ಯ ವಿಸ್ತರಣೆ' ಗಾಗಿ ತನ್ನ ಸದಸ್ಯರನ್ನು ಸಜ್ಜುಗೊಳಿಸುತ್ತಿದೆ. ಆದರೆ ಸೋತು ಕಂಗೆಟ್ಟಿರುವ ವಿಪಕ್ಷ ಹಾಗು ದೇಶದ ಪ್ರಗತಿಪರರು, ಚಿಂತಕರು ಬಿಜೆಪಿಯ ಈ ಚುನಾವಣಾ ದಂಡಯಾತ್ರೆಯ ವಿರುದ್ಧ ರಣತಂತ್ರ ಹೆಣೆಯುವುದನ್ನು ಬಿಟ್ಟು ಮತದಾರರ ವಿರುದ್ಧ ಸಿಟ್ಟುಮಾಡಿಕೊಂಡು ಕೂತಿದ್ದಾರೆ. ಭಾರತೀಯರನ್ನು ದ್ವೇಷದ ಮೋಡಿಗೆ ಒಳಗಾಗಿದ್ದಾರೆ ಹಾಗು ಮೋದಿಯನ್ನು ಆಯ್ಕೆ ಮಾಡಿರುವ ಬಹುಸಂಖ್ಯಾತ ಭಾರತೀಯರು ಅಸಹಿಷ್ಣುಗಳು ಹಾಗು ದ್ವೇಷಕಾರುವವರಾಗಿ ಬಿಟ್ಟಿದ್ದಾರೆ ಎಂದು ಬಣ್ಣಿಸುವ ಲೇಖನಗಳು ಅಂತರ್ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಚುನಾವಣಾ ಫಲಿತಾಂಶದ ಬಳಿಕ ಆಗುವ ( ಇತ್ತೀಚಿಗೆ ನಡೆದ ಮುಸ್ಲಿಂ ಯುವಕನೊಬ್ಬನ ಬರ್ಬರ ಗುಂಪು ಹತ್ಯೆಯಂತಹ) ಎಲ್ಲ ಕೆಟ್ಟ ಘಟನೆಗಳಿಗೂ " ನೀವು ಯಾವುದಕ್ಕೆ ಮತ ಹಾಕಿದ್ದೀರೋ ಅದನ್ನೇ ಪಡೆಯುತ್ತೀರಿ" ಎಂಬ ತಾತ್ಸಾರದ ಪ್ರತಿಕ್ರಿಯೆ ಈ ಪ್ರಗತಿಪರ ವಲಯದಿಂದ ಸಾಮಾನ್ಯವಾಗಿಬಿಟ್ಟಿದೆ.

ನಡೆಯುವ ತಪ್ಪುಗಳಿಗೆ ಅಧಿಕಾರದಲ್ಲಿರುವ ಸರಕಾರವನ್ನು ಪ್ರಶ್ನಿಸುವ, ಅದನ್ನು ಇಕ್ಕಟ್ಟಿಗೆ ಸಿಲುಕಿಸುವ ಬದಲು ತಮ್ಮ ಜನರನ್ನೇ ಅದಕ್ಕೆ ಹೊಣೆ ಮಾಡುವ ಬಹುದೊಡ್ಡ ಪ್ರಮಾದವನ್ನು ಭಾರತೀಯ ಪ್ರಗತಿಪರರು ಮಾಡುತ್ತಿದ್ದಾರೆ.

ಈ ಪ್ರಗತಿಪರರ ಹತಾಶೆ ಪ್ರದರ್ಶನದಲ್ಲಿ (ನಾನು ನನ್ನನ್ನು ಒಬ್ಬ ಪ್ರಗತಿಪರ, ಉದಾರವಾದಿ ವ್ಯಕ್ತಿ ಎಂದು ಅತ್ಯಂತ ಸ್ಪಷ್ಟವಾಗಿ ಪರಿಗಣಿಸುತ್ತೇನೆ) ಅಮೂಲ್ಯ ಸಮಯ ಸಂಪೂರ್ಣ ವ್ಯರ್ಥವಾಗುತ್ತಿದೆ , ಮಾತ್ರವಲ್ಲ, ಎಲ್ಲರಿಗೂ ಇದು ಬೋರ್ ಹೊಡಿಸುತ್ತಿದೆ. ಅಷ್ಟೇ ಅಲ್ಲ, ಈ ಧೋರಣೆ ರಾಜಕೀಯ ಆತ್ಮಹತ್ಯೆ. ಇದು ಅಮೇರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು "ಕೆಟ್ಟವರ ಬುಟ್ಟಿ" ಎಂದು ಜರೆದ ಹಾಗೆ. ಇಂತಹ 'ಮೇಲ್ಮೆಯ' ಧೋರಣೆ ನಮ್ಮನ್ನು ಜನರಿಂದ ದೂರ ಮಾಡಿ ಸೋಲಿನೆಡೆಗೆ ತಿರುಗಿಸುತ್ತದೆ.

ಭಾರತದಲ್ಲಿ ಮೋದಿಗೆ ಸಿಕ್ಕ ಪ್ರಚಂಡ ಬಹುಮತವನ್ನು ನೋಡಿ ಪ್ರಗತಿಪರರು ದೇಶದ ಬಹುಸಂಖ್ಯಾತ ಜನರ ಬಗ್ಗೆ ತೀರಾ ಸರಳೀಕೃತ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ.  ಭಯೋತ್ಪಾದನಾ ಸಂಚಿನಲ್ಲಿ ಆರೋಪಿಯೊಬ್ಬರ ಸ್ಪರ್ಧೆ , ಭಾರತೀಯ ಮುಸ್ಲಿಮರ ಸಂಪೂರ್ಣ ಕಡೆಗಣನೆ, ವ್ಯಾಪಕವಾಗಿ ಹಾರಾಡುತ್ತಿದ್ದ ಸುಳ್ಳು ಸುದ್ದಿಗಳು ಹೀಗೆ  ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ತೀರಾ ಕಳವಳಕಾರಿ ಹಾಗು ನಿರಾಶೆ ಮೂಡಿಸುವ ಬಹಳಷ್ಟು ಅಂಶಗಳಿದ್ದವು. ಆದರೂ ಈ ಬಾರಿ ಮೋದಿಗೆ ಮತ ಹಾಕಿದ ಪ್ರತಿಯೊಬ್ಬ ಭಾರತೀಯ ಆಕ್ರಮಣಕಾರಿ ಹಿಂದೂ ರಾಷ್ಟ್ರೀಯತೆ ಅಥವಾ ಬಹುಸಂಖ್ಯಾತರ ದರ್ಪ, ದೌರ್ಜನ್ಯದ ಪರವಾಗಿ ಮತ ಹಾಕಿದ್ದಾನೆ ಎಂದು ತೀರ್ಮಾನಿಸುವುದು ತಪ್ಪು.

ಹೆಚ್ಚಿನವರು ಬಿಜೆಪಿಗೆ ಮತ ಹಾಕಿದ್ದು ಏಕೆಂದರೆ ಅವರಿಗೆ ಬೇರೆ ಪರ್ಯಾಯ ಯಾರಲ್ಲಿಯೂ ಕಾಣಲಿಲ್ಲ , ಅಷ್ಟೇ. ಇನ್ನು ಉಳಿದವರು ಟಾಯ್ಲೆಟ್ ನಿರ್ಮಾಣ , ಗ್ಯಾಸ್ ಸಂಪರ್ಕ , ನೇರ ನಗದು ವರ್ಗಾವಣೆ, ಸುಲಭ ಸಾಲ, ಸೂರು ಇತ್ಯಾದಿ ಯೋಜನೆಗಳ ಭರವಸೆಯಲ್ಲಿ ಮತ ಹಾಕಿದರು.

ಹೌದು, ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಅಸಾಧಾರಣ ಸಂಪನ್ಮೂಲದ ಬಲವಿತ್ತು. ಆದರೆ ವಿಪಕ್ಷ ಬಡವಾಗಿತ್ತು ಎಂಬ ಕಾರಣಕ್ಕೆ ಅದು ಸೋಲಲಿಲ್ಲ. ಒಗ್ಗಟ್ಟಿಲ್ಲದ, ಸರಿಯಾದ ದಿಕ್ಕಿಲ್ಲದ ಪ್ರಚಾರದಿಂದ ಜನರಿಗೆ ಸಮರ್ಥವಾಗಿ ಸಂದೇಶ ರವಾನಿಸಲು ವಿಫಲವಾಗಿ ವಿಪಕ್ಷ ಸೋತಿದೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷ ಫೈಟರ್ ಜೆಟ್ ಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಹಿಂದೆಯೇ ತನ್ನ ಹೆಚ್ಚಿನ ಸಮಯ ಹಾಗು ಶಕ್ತಿ ವ್ಯಯಿಸಿತು. ಈ ಖರೀದಿಯ ವಿವರಗಳನ್ನು ಬಿಡಿ, ಈ ಜೆಟ್ ಗಳ ಉತ್ಪಾದಕರ ಹೆಸರಿನ ಉಚ್ಛಾರ ಕೂಡ ಹೆಚ್ಚಿನ ಭಾರತೀಯರಿಗೆ ಗೊತ್ತಿಲ್ಲ. ಕಾಂಗ್ರೆಸ್ ಮತದಾರರಿಗೆ ತನ್ನ ಇನ್ನೊಂದು ಅತ್ಯಂತ ಪ್ರಮುಖ ಸಂದೇಶ - ಅತ್ಯಂತ ಬಡಜನರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ - ಪ್ರಕಟಿಸುವಾಗ ತೀರಾ ತಡವಾಗಿತ್ತು. ತಳಮಟ್ಟದಲ್ಲಿ ಹೆಚ್ಚಿನವರಿಗೆ ಅಂತಹದೊಂದು ಯೋಜನೆ ಘೋಷಣೆ ಆಗಿದ್ದೇ ಗೊತ್ತಿರಲಿಲ್ಲ.

ಹಾಂ ಹೌದು, ಮೋದಿಯ ಶಕ್ತಿಶಾಲಿ ನಾಯಕ ಎಂಬ ಇಮೇಜಿನ ಪ್ರಚಾರ ಅವರಿಗೆ ವರವಾಯಿತು. ಆದರೆ ರಾಜಕೀಯದ ನಿರ್ದಯ ಲೆಕ್ಕಾಚಾರದಲ್ಲಿ ಎಡವಿದ ರಾಹುಲ್ ಗಾಂಧಿ " ಪ್ರೀತಿ" ಯ ಮಾತಾಡಿ ತಿರುಗೇಟು ನೀಡಲು ಹೋದರು. ಅದು ತೀರಾ ಕ್ಷುಲ್ಲಕ ಹಾಗು ಎಳಸಾಯಿತು ಮಾತ್ರವಲ್ಲ ಕೃತಕವೂ ಆಯಿತು. ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕದ ರಾಹುಲ್ ಗಾಂಧಿಯವರ ಅಸಹಕಾರ ಹಾಗು ಸಂವಹನದ ಕೊರತೆಯಿಂದ ಕೂಡಿದ ಪ್ರತಿಕ್ರಿಯೆಯಲ್ಲೂ ಅದೇ ಅಪಕ್ವತೆ ಎದ್ದು ಕಾಣುತ್ತಿದೆ.

demo ad

ಹಾಗಾಗಿ ಜನರು ಹೇಗೆ ಮತ ಚಲಾಯಿಸಿದರು ಎಂದು ವಿಷಾದದಿಂದ ದೂರುತ್ತಾ ಕೂರುವ ಬದಲು ಪ್ರಮುಖ ವಿಷಯಗಳಲ್ಲಿ ಮೋದಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ಮುಂದುವರಿಸುತ್ತಲೇ ಭಾರತೀಯ ಪ್ರಗತಿಪರರು ಏಕೆ ವಿಪಕ್ಷ ಸೋತಿತು ಎಂದು ತಮ್ಮೊಳಗೆ ಇಳಿದು ನೋಡಬೇಕಾಗಿದೆ. 

ನಾವು ಹೆಚ್ಚಿನವರು ಬಹುತ್ವ ಹಾಗು ವೈವಿಧ್ಯತೆಯ ಪ್ರತಿಪಾದಕರು. ಆದರೆ ಈ ಬಗ್ಗೆ ನಾವು ಪ್ರತಿ ಬಾರಿ ಸಂದೇಶ ಸಾರುವಾಗಲೂ ಅದನ್ನು ಆವರಿಸಿರುವ ನಮ್ಮ ಮೇಲ್ಮೆಯ ಮಿತಿಯ ಜೊತೆ ಹೋರಾಡಬೇಕಾಗುತ್ತಿದೆ. ಈ ದೇಶದ ಬಹುಸಂಖ್ಯಾತರಿಗೆ ನಾವು ಅವರಿಂದ ಬಹಳ ದೂರದಲ್ಲಿದ್ದೇವೆ , ನಮ್ಮ ಗೂಡಿನೊಳಗಿದ್ದೇವೆ ಹಾಗು ನಮ್ಮದೇ ಅವರಣದೊಳಗಿದ್ದೇವೆ ಎಂಬಂತಾಗಿದೆ. ಭಾರತದ ಉದಾರವಾದಿ ಚಿಂತನೆಗಳ ಭವಿಷ್ಯ ಈ ದೇಶದ ಪ್ರಾದೇಶಿಕ ಹಾಗು ಸಾಂಸ್ಕೃತಿಕ ಪರಂಪರೆ ಹಾಗು ಇಲ್ಲಿನ ಇತಿಹಾಸದೊಂದಿಗೆ ತಳಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಗು ಆ ಶಕ್ತಿಯ ಮೂಲಕ ನಂಬಿಕೆ ಹಾಗು ಬಹುತ್ವದ ಭಾಷೆ ಮಾತಾಡುವವರಲ್ಲಿ ಇದೆ. 

ಆದರೆ , ನಮ್ಮಲ್ಲಿ ಹೆಚ್ಚಿನವರು ಪ್ರಗತಿಪರ ಚಿಂತನೆಗಳನ್ನು ಬೆಳೆಸಿಕೊಂಡಿರುವುದು ಪಾಶ್ಚ್ಯಾತ್ಯ ಜಗತ್ತಿನಿಂದ. ನಾವು ಒಡಿಸ್ಸಿಯ ಸಾಲುಗಳನ್ನು ಉಲ್ಲೇಖಿಸುತ್ತೇವೆ ಆದರೆ ರಾಮಾಯಣ ನಮಗೆ ನೆನಪಿಲ್ಲ. ನಮ್ಮ ಕನಸುಗಳು ಬೀಳುವುದು ಇಂಗ್ಲೀಷ್ ನಲ್ಲಿ. ಭಾರತೀಯ ಭಾಷೆಗಳು ನಮಗೆ ಸುಲಲಿತವಲ್ಲ. ಈಗಿನ ಜನಪ್ರಿಯ ನೀತಿಗಳ ಕಾಲದಲ್ಲಿ ಪ್ರತಿರೋಧದ ಏಕೈಕ ಅಸ್ತ್ರ ನಮ್ಮೊಳಗಿನ ಒಳ್ಳೆಯ ಆಚರಣೆಗಳನ್ನು ನಾವು ಜನಪ್ರಿಯಗೊಳಿಸುವುದು. ನಮ್ಮ ಹೆಚ್ಚಿನವರಲ್ಲಿ ಅತ್ಯುತ್ತಮ ಪ್ರಗತಿಪರ ಚಿಂತನೆಗಳಿವೆ , ಆದರೆ ಅದನ್ನು ಭಾರತೀಯ ಬಹುಸಂಖ್ಯಾತರಿಗೆ ಇದು ತಮ್ಮದೇ ಎಂದು ಮನವರಿಕೆ  ಮಾಡಿಸುವ ಕಲೆ, ನಿರೂಪಣೆ ನಮ್ಮಲ್ಲಿಲ್ಲ. 

ಸಿದ್ಧಾಂತ ಜಡತ್ವವನ್ನು ಬಿಡಬೇಕಾದ್ದು ಇನ್ನೊಂದು ಅಗತ್ಯ. ಬಲಪಂಥೀಯ ಚಿಂತಕರ " ನಾವು vs. ಅವರು" ಅಸಹಿಷ್ಣುತೆಯನ್ನು ನಾವು ಆಗಾಗ ಖಂಡಿಸುತ್ತೇವೆ. ಆದರೆ ಈಗ ಪರ್ಯಾಯ ಚಿಂತನೆಗಳಿಗೆ ತೆರೆದುಕೊಳ್ಳದ ಪ್ರಗತಿಪರರು ಹೆಚ್ಚಿದ್ದಾರೆ. ಆತ್ಮ ವಿಮರ್ಶೆಯ ಕರೆಗೆ  'ಆ ಕಡೆಗೆ' ವಾಲಿದೆ ಎಂಬ ಹಣೆಪಟ್ಟಿ ಸಿಗುತ್ತದೆ. ಈ ಲೇಖನಕ್ಕೂ ಅದೇ ರೀತಿಯ ಪ್ರತಿಕ್ರಿಯೆ ಬರಲಿದೆ ಎಂದು ನನಗೆ ಖಚಿತವಾಗಿ ಗೊತ್ತಿದೆ. ಆದರೆ ಜನರ ಬಗ್ಗೆ ನೇರವಾಗಿ ತೀರ್ಮಾನಕ್ಕೆ ಹಾರದೆ ಅವರು ಏಕೆ ಮೋದಿಗೆ ಮತ ಚಲಾಯಿಸಿದರು ಎಂದು ತಿಳಿದುಕೊಳ್ಳಲು ಪ್ರಯತ್ನಿಸುವುದು ಯಾವ ರೀತಿಯಿಂದಲೂ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಬಿಟ್ಟು ಕೊಟ್ಟಂತೆ ಆಗುವುದಿಲ್ಲ.

ಬಹಳಷ್ಟು ಪ್ರಗತಿಪರರು ವಾಸ್ತವವನ್ನು ಒಪ್ಪಿಕೊಳ್ಳದೆ ತಮ್ಮ ತಲೆಯನ್ನು  ನಿರಾಕರಿಣೆಯ ಮರಳಿನೊಳಗೆ ಹುಡುಗಿಸಿಟ್ಟುಕೊಂಡಿದ್ದಾರೆ. ಆದರೆ ಬಲಪಂಥೀಯರು ಮತ್ತು ಕೆಲವೊಮ್ಮೆ ಮೋದಿ ಸರಕಾರವೇ ನಮ್ಮ ವಿರುದ್ಧ ಹರಿಬಿಡುತ್ತಿರುವ ಅಸಹಿಷ್ಣುತೆಗೆ ಈ ನಿರಾಕರಣೆ ಸಮರ್ಥನೆಯಲ್ಲ. ನಮ್ಮಲ್ಲಿ ಹೆಚ್ಚಿನವರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ದ್ವೇಷಕ್ಕೆ ಈಡಾಗಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಲು ನಿಯೋಜಿತ ಟ್ರೋಲ್ ಪಡೆಗಳಿವೆ. ಅದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಟೀಕಿಸುತ್ತೇವೆ ಎಂಬ ಕಾರಣಕ್ಕೆ, ನನ್ನಂತಹ ಪತ್ರಕರ್ತರನ್ನು  ಅನಧಿಕೃತವಾಗಿ ಸರಕಾರದಿಂದ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತಿದೆ. ವಿಪರ್ಯಾಸವೆಂದರೆ , ನಾವು ಟೀಕಿಸಿದಾಗ ಪ್ರಗತಿಪರ ಚಿಂತಕರ ಕಡೆಯಿಂದಲೂ ನಮ್ಮ ವಿರುದ್ಧ  ಅಷ್ಟೇ ರೋಷದ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.

ಪ್ರಗತಿಪರರ ದೂಷಣೆ ಸುಲಭ. ಆದರೆ ಮತದಾರ ದೂಷಣೆ ಅದಕ್ಕಿಂತಲೂ ಬಹಳ ಕೆಟ್ಟದು. ಅದು ಜಾಣತನವೂ ಅಲ್ಲ ಪರಿಣಾಮಕಾರಿಯೂ ಅಲ್ಲ. ಹಾಗಾಗಿ ಈ ಚಿಂತನೆಗಳ ಸ್ಪರ್ಧೆಯಲ್ಲಿ ನಾವು ಗೆಲ್ಲಬೇಕೆ ಅಥವಾ ನಿಮಗಿಂತ ನಾವು ಶ್ರೇಷ್ಠರು ಎಂಬ ವ್ಯಸನವನ್ನು ಉಳಿಸಿಕೊಂಡು ಸೋಲುತ್ತಲೇ ಇರಬೇಕೆ ಎಂಬುದನ್ನು ಭಾರತದ ಪ್ರಗತಿಪರರು ನಿರ್ಧರಿಸಬೇಕಿದೆ.

ನಿಮ್ಮ ಸೈದ್ಧಾಂತಿಕ ವಿರೋಧಿಯನ್ನು ಸೋಲಿಸಲು ಮೊದಲು ನೀವು ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಳ್ಳಬೇಕು. ಖಂಡಿತವಾಗಿಯೂ ಭಾರತೀಯರ ಸ್ಪಷ್ಟ ನಿರ್ಧಾರ ಹಾಗು ಸಂದೇಶವನ್ನು ಕಡೆಗಣಿಸಲು ಭಾರತದ ಪ್ರಗತಿಪರರು ಬಯಸುವುದಿಲ್ಲ. ಹಾಗಾಗಿ ಈಗಲಾದರೂ  2019   ರ ಫಲಿತಾಂಶ ನಿಜವಾಗಿ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮೂಲಕ ನಮ್ಮ ಕೆಲಸ ಪ್ರಾರಂಭಿಸೋಣ.  

ಕೃಪೆ :  washingtonpost.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top